ಒಟ್ಟೊಟ್ಟಿಗೆ ಬಂತು ಎರಡು ಮದುವೆಯ ದಿಬ್ಬಣ | ಊಟ ನೀಡುವ ಮೊದಲು ಆಧಾರ್ ಕಾರ್ಡ್ ಕಡ್ಡಾಯ ಎಂದ ಮದುವೆ ಮನೆ ಜನ!!!

ಭಾರತದಲ್ಲಿ ಅತಿಥಿ ದೇವೋಭವ ಎಂಬ ಮಾತಿನಂತೆ ಸತ್ಕಾರ ಮಾಡುವ ಪರಿಪಾಠವಿದೆ. ಮದುವೆ, ಮುಂಜಿ ಇನ್ನಿತರ ಶುಭ ಕಾರ್ಯ ಮಾಡುವಾಗ ಅತಿಥಿಗಳನ್ನು ತುಂಬಾ ಆದರಣೀಯವಾಗಿ ನೋಡುವ, ಸತ್ಕಾರದಿಂದ ಬರಮಾಡಿಕೊಳ್ಳುವ ಕ್ರಮ ಮುಂಚಿನಿಂದಲೂ ನಡೆದುಕೊಂಡು ಬರುತ್ತಿದೆ.
ದೊಡ್ಡ ಸೆಲೆಬ್ರಿಟಿಗಳ ಮದುವೆಗೆ ತೆರಳುವಾಗ ಮದುವೆ ಇನ್ವಿಟೇಷನ್ ಒಯ್ಯುದು ಪತಿಷ್ಟೆಯ ಜೊತೆಗೆ ಒಳ ಹೋಗಲು ಇರುವ ಸುಲಭ ವಿಧಾನ. ಆದರೆ ,ಮದುವೆ ಮನೆಯಲ್ಲಿ ಆಧಾರ್ ಕಾರ್ಡ್ ಕೇಳಿದರೆ , ಹೇಗಿರಬಹುದು ?? ಇವರೆಲ್ಲೋ ಹುಚ್ಚಾಸ್ಪತ್ರೆಯಿಂದ ಬಂದಿದ್ದಾರಾ?? ಎಂದು ಅನುಮಾನ ವ್ಯಕ್ತವಾಗುವುದರಲ್ಲಿ ಆಶ್ಚರ್ಯವಿಲ್ಲ.

ಆದರೆ, ಅಚ್ಚರಿಯ ರೀತಿಯಲ್ಲಿ ಈ ರೀತಿಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಬಂದ ಅತಿಥಿಗಳು ಬಂದ ದಾರಿಗೆ ಸುಂಕವಿಲ್ಲ ಎಂದು ಈ ಕರ್ಮಕ್ಕೆ ಮನೆಗೆ ಕರೆಯಬೇಕಿತ್ತಾ? ಎಂದು ಶಪಿಸಿಕೊಂಡು ಹೊರಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ.

ಉತ್ತರಪ್ರದೇಶದ ಮದುವೆ ಮನೆಗೆ ಪ್ರವಾಹದಂತೆ ಸಾಗರೋಪಾದಿಯಲ್ಲಿ ಜನ ಸೇರುತ್ತಿರುವುದನ್ನು ಗಮನಿಸಿ ಮನೆ ಮಂದಿ ಗಾಬರಿಯಲ್ಲಿ ಗೊಂದಲಕ್ಕೆ ಒಳಗಾಗಿ ಮದ್ವೆ ಮನೆಗೆ ಬಂದ ಅತಿಥಿಗಳ ಬಳಿ ಆಧಾರ್ ಕಾರ್ಡ್ ಕೇಳಿದ ಘಟನೆ ನಡೆದಿದೆ.
ಉತ್ತರಪ್ರದೇಶದ ಅಮ್ರೋಹ್‌ನ ಹಸನ್ಪುರದಲ್ಲಿ ಈ ಅವಾಂತರ ಜರುಗಿದ್ದು, ಈ ಘಟನೆ ಕೇಳಿ ಇವರೇನೋ ದೊಡ್ಡ ಸೆಲೆಬ್ರಿಟಿಗಳಿರಬೇಕು ಎಂದು ಊಹಿಸಿರಬಹುದು ಆದರೆ, ಇವರು ಉಳಿದವರಂತೆ ಸಾಮಾನ್ಯ ಮನೆತನದವರೆ ಆಗಿದ್ದು , ಆಧಾರ್‌ಕಾರ್ಡ್ ಇದ್ದವರಿಗೆ ಮದುವೆ ಮನೆ ಒಳಗೆ ಪ್ರವೇಶ ನೀಡಿದ್ದಾರೆ. ಹೀಗಾಗಿ ಮದ್ವೆ ಮನೆಗೆ ನಿಜವಾಗಿಯೂ ಅತಿಥಿಗಳಾಗಿ ಬಂದವರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ವೆ ಮನೆಯವರು ಅತಿಥಿಗಳ ಆಧಾರ್‌ಕಾರ್ಡ್ ಕೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಮದುವೆ ಮನೆಯಲ್ಲಿ ಆತಿಥ್ಯ ನೀಡುವುದು ವಾಡಿಕೆ ಆದರೆ ಸನ್ಮಾನ ಮಾಡುವ ಬದಲು ಅವಮಾನ ಮಾಡುವ ರೀತಿಯಲ್ಲಿ ಮದುವೆಗೆ ಬಂದ ಅತಿಥಿಗಳ ಬಳಿ ಆಧಾರ್ ಕಾರ್ಡ್ ಕೇಳಿ ಎಲ್ಲರಿಗೂ ಅಚ್ಚರಿ ಮೂಡಿಸುವುದರ ಜೊತೆಗೆ ಆಧಾರ್ ಕಾರ್ಡ್ ಇಲ್ಲದೆ ಬಂದವರು ಹಿಂದಿರುಗಿದ ಪ್ರಸಂಗ ಜರುಗಿದೆ.

ಮದುವೆ ದಿಬ್ಬಣವೂ ಧರ್ವಸಿ ಗ್ರಾಮದಿಂದ ಹಸನ್‌ಪುರಕ್ಕೆ ಬಂದಾಗ ಭಾರಿ ಸಂಖ್ಯೆಯ ಜನರನ್ನು ನೋಡಿದ ವಧುವಿನ ಕಡೆಯವರು ವರನ ಕಡೆಯವ ಬಳಿ ಆಧಾರ್‌ಕಾರ್ಡ್‌ ಕೇಳಿದ್ದು, ಮದುವೆ ಮನೆಗೆ ಪ್ರವೇಶ ಪಡೆಯುವ ಮೊದಲೇ ಆಧಾರ್‌ಕಾರ್ಡ್ ಕೇಳಿ ಆಧಾರ್‌ಕಾರ್ಡ್ ಇದ್ದವರನ್ನು ಒಳಬಿಡಲಾಗಿದೆ. ಉಳಿದವರು ಬಂದ ದಾರಿಗೆ ಸುಂಕವಿಲ್ಲ ಎಂದು ಶಪಿಸಿ ಹಿಂದಿರುಗಿದ್ದಾರೆ. ಒಟ್ಟೊಟ್ಟಿಗೆ ಎರಡು ಕಡೆಯ ದಿಬ್ಬಣ ಬಂದಿದ್ದರಿಂದ ಈ ರೀತಿಯ ಅವಾಂತರ ನಡೆದಿದೆ ಎನ್ನಲಾಗುತ್ತಿದ್ದು, ಕೇವಲ ಅಪರಿಚಿತರನ್ನು ಕಂಡು ಆಧಾರ್ ಕಾರ್ಡ್ ಕೇಳಿದ್ದಾರೆ ಎನ್ನಲಾಗಿದೆ. ಏನೇ ಆಗಲಿ, ಆಫೀಸ್, ಕೆಲಸ ಕಾರ್ಯದಲ್ಲಿ ಬಳಸುವ ಆಧಾರ್ ಕಾರ್ಡ್ ಅನ್ನು ಎಂಟ್ರಿ ಟಿಕೆಟ್ ಆಗಿ ಬಳಸಿಕೊಂಡಿರುವುದು ವಿಶೇಷ. ಮದುವೆಗೆ ಬಂದ ಅತಿಥಿಗಳು ಹಿಡಿ ಶಾಪ ಹಾಕದೆ ಹೋಗಿರಲು ಸಾಧ್ಯವೇ ಇಲ್ಲ.

Leave A Reply

Your email address will not be published.