ಬೆಳ್ತಂಗಡಿ : ಬಿಲ್ ಪಾವತಿ ಮಾಡದ ಕಾರಣ ವಿದ್ಯುತ್ ಕಡಿತ ಮಾಡಿದ ಲೈನ್‌ಮ್ಯಾನ್ | ಲೈನ್‌ಮ್ಯಾನ್ ಮೇಲೆ ಗಂಭೀರ ಹಲ್ಲೆ ಮಾಡಿದ ಯುವಕ
ಕೊಕ್ಕಡ: ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕಾರಣ ಲೈನ್ ಮ್ಯಾನ್ ಗಳ ಮೇಲೆ ಗಂಭೀರವಾಗಿ ದಾಳಿ ಮಾಡಿದ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಜಂಕ್ಷನ್ ನಲ್ಲಿ ಗುರುವಾರ ರಾತ್ರಿ ನಡೆದಿದೆ. ಬಿಲ್ ಪಾವತಿಸದ ಕಾರಣ ಸಂಪರ್ಕ ಕಡಿತಗೊಳಿಸಿದ ಹಿನ್ನೆಲೆ ಲೈನ್ ಮ್ಯಾನ್ ಗಳ ಮೇಲೆ ಗಂಭೀರವಾಗಿ ದಾಳಿ ನಡೆಸಲಾಗಿದೆ.
ಹಲ್ಲೆ ನಡೆಸಿದಾತನನ್ನು ಹತ್ಯಡ್ಕ ಗ್ರಾಮದ ಅಡ್ಕಾಡಿ ನಿವಾಸಿ ರಿಜೀಶ್ (38) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೆಸ್ಕಾಂ ಪವರ್ ಮ್ಯಾನ್ ದುಂಡಪ್ಪ
ಅವರ ತಲೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೋರ್ವ ಪವರ್ ಮ್ಯಾನ್ ಉಮೇಶ್ ರವರಿಗೆ ಕೂಡಾ ಗಾಯಗಳಾಗಿವೆ.
ಹತ್ಯಡ್ಕ ಗ್ರಾಮದ ಅಡ್ಕಾಡಿ ನಿವಾಸಿ ದಿ. ಕಾಂತು ಪೂಜಾರಿ ಎಂಬುವವರ ಹೆಸರಿನ ವಿದ್ಯುತ್ ಬಿಲ್ ಸುಮಾರು ರೂ. 3530 ಆಗಿದ್ದು, ಇದನ್ನು ಪಾವತಿಸದ ಹಿನ್ನೆಲೆ ಸೆಪ್ಟೆಂಬರ್ 19ರಂದು ಮಧ್ಯಾಹ್ನ ಪವರ್ ಮ್ಯಾನ್ ಉಮೇಶ್ ದಿ. ಕಾಂತು ಪೂಜಾರಿ ಅವರ ಮನೆಗೆ ತೆರಳಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಸಂದರ್ಭ ಅವರ ಮನೆ ಅಳಿಯ ಮನೆಯಲ್ಲಿ ಇರಲಿಲ್ಲ. ಗೂಡ್ಸ್ ಲಾರಿ ಚಾಲಕರಾಗಿರುವ ರಿಜೀಶ್ ನಿಗೆ ಮನೆಯವರು ಫೋನ್ ಮಾಡಿ ಪವರ್ ಮ್ಯಾನ್ ಗೆ ಮಾತನಾಡಲು ಹೇಳಿದ್ದಾರೆ. ಫೋನಿನಲ್ಲಿ ಪವರ್ ಮ್ಯಾನ್ ಉಮೇಶ್ ರವರಿಗೆ ಕೊಲೆ ಬೆದರಿಕೆ ಹಾದ್ದಾನೆ. ಇದನ್ನು ಉಮೇಶ್ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಕೊಕ್ಕಡ ಜೆಇ ಕೃಷ್ಣಗೌಡ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಈ ಮಧ್ಯೆ ಸೆಪ್ಟೆಂಬರ್ 22ರಂದು ದಿ.ಕಾಂತು ಪೂಜಾರಿಯವರ ಮನೆಯವರು ವಿದ್ಯುತ್ ಶುಲ್ಕ ಪಾವತಿಸಿ, ಮರು ಸಂಪರ್ಕವನ್ನು ನೀಡುವಂತೆ ಆದೇಶವನ್ನು ಮೆಸ್ಕಾಂ ಕಚೇರಿಗೆ ತಲುಪಿಸಿದ್ದಾರೆ.
ಅನಂತರ ಪವರ್ ಮ್ಯಾನ್ ಉಮೇಶ್ ರವರು ದಿ.ಕಾಂತು ಪೂಜಾರಿ ಅವರ ಮನೆಗೆ ಮರು ಸಂಪರ್ಕವನ್ನು ನೀಡಿದ್ದಾರೆ.
ಆದರೆ, ಗುರುವಾರ ಸಂಜೆಯ ಸಮಯದಲ್ಲಿ ತಮ್ಮ ಕರ್ತವ್ಯ ಮುಗಿಸಿ ರಾತ್ರಿ ಕೊಕ್ಕಡ ಜಂಕ್ಷನ್ ನಲ್ಲಿ ಉಮೇಶ್ ಹಾಗೂ ಅವರ ಸಹೋದ್ಯೋಗಿಗಳು ದಿನಸಿ ಸಾಮಗ್ರಿಗಳನ್ನು ಖರೀದಿಸುವ ಸಂದರ್ಭದಲ್ಲಿ ಲಾರಿ ಚಾಲಕರಾಗಿರುವ ರಿಜಿಶ್ ಬಂದು ಉಮೇಶ್ ಯಾರೆಂದು ಕೇಳಿದ್ದಾರೆ. ಅಲ್ಲೇ ಇದ್ದ ಉಮೇಶ್ ನಾನೇ ಎಂದು ಹೇಳಿದ್ದಾರೆ. ಕೂಡಲೇ ಅವಾಚ್ಯ ಶಬ್ದಗಳಿಂದ ಉಮೇಶ್ ರನ್ನು ನಿಂದಿಸಿ ಹಲ್ಲೆಗೆ ಮಾಡಲು ಮುಂದಾಗಿದ್ದಾರೆ ರಿಜೀಶ್. ಈ ಸಂದರ್ಭ ಸಹೋದ್ಯೋಗಿಯಾದ ಉಪ್ಪಾರಪಳಿಕೆಯ ಪವರ್ ಮ್ಯಾನ್ ದುಂಡಪ್ಪ ಮಧ್ಯಪ್ರವೇಶಿಸಿ ಮಾತುಕತೆ ನಡೆಸಿ ಸಮಾಧಾನಿಸಿದ್ದಾರೆ.
ಎಲ್ಲಾ ಸರಿಯಾಯಿತು ಎಂದು ತೆರಳುವಾಗ, ರಿಜೀಶ್ ಪಕ್ಕದಲ್ಲೇ ಇದ್ದ ಸೋಡಾ ಬಾಟಲಿಯಿಂದ ದುಂಡಪ್ಪ ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣಾ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.