‘ಪೇ ಸಿಎಂ’ ಅನ್ನು ಅಧಿಕೃತಗೊಳಿಸಲು ಮುಂದಾದ ಸರ್ಕಾರ! | ಸರ್ಕಾರದ ವಿರುದ್ಧದ ಅಭಿಯಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಪ್ಲಾನ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೋ ಸಮೇತ ‘ಪೇ ಸಿಎಂ’ ಪೋಸ್ಟರನ್ನು ನಗರದ ಹಲವು ಪ್ರದೇಶಗಳ ಬಸ್ ನಿಲ್ದಾಣದಲ್ಲಿ ಅಂಟಿಸಲಾಗಿತ್ತು. ಇದು ಕೆಲವು ದಿನಗಳಿಂದ ಭಾರೀ ಸದ್ದು ಮಾಡಿತ್ತು. ಆದರೆ, ಇದೀಗ ಸರ್ಕಾರದ ವಿರುದ್ಧದ ಅಭಿಯಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಲೆಕ್ಕಾಚಾರ ಮಾಡಲಾಗಿದ್ದು, “ಪೇ ಸಿಎಂ’ ಅನ್ನು ಈಗ ಸರ್ಕಾರ ಅಧಿಕೃತಗೊಳಿಸಲು ಮುಂದಾಗಿದೆ!

ಹೌದು. ಮುಖ್ಯಮಂತ್ರಿ ಪರಿಹಾರ ನಿಧಿ ಹೆಸರಿನಲ್ಲಿ “ಪೇ ಸಿಎಂ’ ಡಿಜಿಟಲ್‌ “ಪೇ ಟು ಚೀಫ್ ಮಿನಿಸ್ಟರ್‌ ರಿಲೀಫ್ ಫ‌ಂಡ್‌ (ಸಿಎಂಆರ್‌ಎಫ್) ಎಂಬ ಡಿಜಿಟಲ್‌ ಆಪ್‌ ಅಭಿವೃದ್ಧಿಪಡಿಸಿ, ಆ ಮೂಲಕ ಅಧಿಕೃತಗೊಳಿಸಲು ಮುಂದಾಗಿದೆ. “ಪೇ ಸಿಎಂ’ ಹೆಸರಿನಡಿ ಡಿಜಿಟಲ್‌ ಆಪ್‌ ಅಭಿವೃದ್ಧಿಪಡಿಸಿ, ಆ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ನೆರವು ನೀಡಲು ಅನುವಾಗುವಂತೆ ಸ್ವತಃ ಆಡಳಿತ ಪಕ್ಷದ ಸದಸ್ಯ ಎಂ.ಕೆ. ಪ್ರಾಣೇಶ್‌ ಸಭಾಪತಿಗಳಿಗೆ ಗುರುವಾರ ಮನವಿ ಮಾಡಿದ್ದಾರೆ. ಇದಕ್ಕೆ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

‘ನಗರದ ಹಲವೆಡೆ “ಪೇ ಸಿಎಂ’ ಎಂಬ ಅಭಿಯಾನದಡಿ ಪೋಸ್ಟರ್‌ ಅಂಟಿಸಿ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿರುವುದು ತೀವ್ರ ಖಂಡನೀಯ. ಆದರೆ, 21ನೇ ಶತಮಾನವು ಡಿಜಿಟಲ್‌ ಯುಗವಾಗಿ ಬದಲಾಗಿದ್ದು, ಪ್ರಸ್ತುತ ಡಿಜಿಟಲ್‌ ತಂತ್ರಜ್ಞಾನವು ತನ್ನ ಬೇರುಗಳನ್ನು ಗಟ್ಟಿಮಾಡಿಕೊಳ್ಳುತ್ತ ಸಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಡಿಜಿಟಲ್‌ ಮಾಡುವ ಮೂಲಕ “ಪೇಸಿಎಂ’ ಅನ್ನು ಪೇ ಟು ಚೀಫ್ ಮಿನಿಸ್ಟರ್‌ ರಿಲೀಫ್ ಫ‌ಂಡ್‌ (ಸಿಎಂಆರ್‌ಎಫ್) ಎಂಬ ಹೆಸರಿನಲ್ಲಿ ಕಿಯೋನಿಕ್ಸ್‌ನಂತಹ ಸಂಸ್ಥೆ ವತಿಯಿಂದ ಒಂದು ಡಿಜಿಟಲ್‌ ಪಾವತಿ ವ್ಯವಸ್ಥೆಯ ಆಯಪ್‌ ಸಿದ್ಧಪಡಿಸಿ, ಆ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರಾಜ್ಯದ ಸಾರ್ವಜನಿಕರು, ಸಂಘ-ಸಂಸ್ಥೆಗಳು ತಮ್ಮ ಕೈಲಾದಷ್ಟು ದೇಣಿಗೆ ನೀಡಿ, ಸಂಕಷ್ಟದಲ್ಲಿರುವ ಬಡ ಕುಟುಂಬಗಳ ನೆರವಿಗೆ ಧಾವಿಸಲು ಅವಕಾಶ ಕಲ್ಪಿಸಿಕೊಟ್ಟಂತಾಗಲಿದೆ’ ಎಂದು ಪ್ರಾಣೇಶ್‌ ಮನವಿಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರಾಜ್ಯದ ಐಟಿ-ಬಿಟಿ ಕಂಪೆನಿಗಳಿಂದ ಕಾರ್ಪೋರೇಟ್‌-ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌), ದಾನಿಗಳಿಂದ ದೇಣಿಗೆ ಸಂದಾಯ ಆಗುತ್ತಿದೆ. ಈ ಮೂಲಕ ಸಿಎಂ ಗೆ ವಿರೋಧ ವ್ಯಕ್ತಪಡಿಸಿದವರಿಗೆ ತಿರುಗೇಟು ನೀಡಲಿದೆ.

Leave A Reply