Building Map : ಕಟ್ಟಡ ನಕ್ಷೆಗೆ ಅನುಮೋದನೆ ಬೇಕಾಗಿಲ್ಲ !!!

ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯಿಂದ ಗ್ರಾಮಾಂತರ ಪ್ರದೇಶದಲ್ಲಿ ಕಟ್ಟಡದ ನಕ್ಷೆಗಳಿಗೆ ಅನುಮೋದನೆ ಪಡೆಯುವುದರಿಂದ ವಿನಾಯಿತಿ ನೀಡುವ ಸಂಬಂಧ ಮಂಡಿಸಲಾದ ಕರ್ನಾಟಕ ಮುನ್ಸಿಪಾಲಿಟಿಗಳ (ತಿದ್ದುಪಡಿ) ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕಾರ ಮಾಡಲಾಯಿತು. ಈ ಬಗ್ಗೆ ಮಂಗಳವಾರದಂದು ಸದನದಲ್ಲಿ ಎಂ.ಟಿ.ಬಿ ನಾಗರಾಜ್ ( ಪೌರಾಡಳಿತ ಸಚಿವ) ಅವರು ಈ ವಿಧೇಯಕಕ್ಕೆ ಅಂಗೀಕಾರ ಪಡೆದರು.

ಇ-ಸ್ವತ್ತು ಸಮಸ್ಯೆಗೆ ಕಳೆದ ವಾರ ಸರ್ಕಾರದಿಂದ ಸ್ಪಷ್ಟ ಉತ್ತರ ಸಿಗಲಿಲ್ಲ.‌ ಹಾಗಾಗಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಬಗ್ಗೆ ತಡೆ ಹಿಡಿದಿದ್ದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದ ಬಳಿಕ ವಿಧೇಯಕವನ್ನು ಅಂಗೀಕರಿಸಲಾಯಿತು.

ವಿಧೇಯಕ ಅಂಗೀಕಾರಕ್ಕೂ ಮುನ್ನ ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ಸೇರಿದಂತೆ ಇತರೆ ಸದಸ್ಯರು, ಈ ಕುರಿತು ಗೊಂದಲಗಳಿವೆ ಎಂಬ ಮಾತನ್ನು ಹೇಳಿದರು. ನಗರ ಪ್ರದೇಶಗಳನ್ನು ಯೋಜನೆಬದ್ಧವಾಗಿ ನಿರ್ಮಿಸದಿದ್ದರೆ ಅವು ಭವಿಷ್ಯದ ಕೊಳಗೇರಿಗಳಾಗಲಿವೆ. ಹೀಗಾಗಿ ಸರ್ಕಾರದ ಉದ್ದೇಶಿತ ಮುನ್ಸಿಪಾಲಿಟಿಗಳ ತಿದ್ದುಪಡಿ ವಿಧೇಯಕವು, ರಿಯಲ್ ಎಸ್ಟೇಟ್‌ನವರಿಗೆ ಅನುಕೂಲ ಕಲ್ಪಿಸುವ ರೀತಿಯಲ್ಲಿ ಇದೆ ಎಂದು ಹೇಳಿದ್ದಾರೆ. ಹಾಗೂ ಈಗಾಗಲೇ ಬಡಾವಣೆಗಳನ್ನು ನಿರ್ಮಿಸಿರುವ ಕಡೆಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಿಲ್ಲ ಎಂದು ಯು.ಟಿ.ಖಾದರ್ ತಿಳಿಸಿದರು.

ಈ ಕುರಿತು ಆಡಳಿತ ಪಕ್ಷ ಪ್ರತಿಪಕ್ಷದ ಮಧ್ಯೆ ಮಾತಿನ ಚಕಮಕಿ ನಡೆಯುವ ಸಂದರ್ಭದಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಧ್ಯೆ ಬಂದು, ಇದು ಬಹಳ ವರ್ಷದ ಸಮಸ್ಯೆ. ಬಹಳ ಕಗ್ಗಂಟಿನ ವಿಷಯ ಇದಾಗಿದ್ದು, ಹಾಗಾಗಿ ಒಂದೊಂದೇ ಗಂಟನ್ನು ತೆಗೆಯಬೇಕು. 2006ಕ್ಕೂ ಮುಂಚೆ ಖಾತೆಗಳನ್ನು ಕೈಬರಹದಲ್ಲಿ ಬರೆದುಕೊಡಬೇಕಿತ್ತು. ಆದರೆ, ಈಗ ಇ-ಖಾತೆ ಜಾರಿಯಾಗಿದೆ. ಇ-ಖಾತಾ ಇಲ್ಲ ಎಂಬ ಕಾರಣಕ್ಕಾಗಿ ಸಮಸ್ಯೆಯಾಗುತ್ತಿದ್ದು, ಯೋಜನೆಗೆ ಅನುಮೋದನೆ ಆಗುತ್ತಿರಲಿಲ್ಲ” ಎಂದು ಹೇಳಿದರು.

ಇದರಿಂದ ಗ್ರಾಮೀಣ ಭಾಗದಲ್ಲಿನ ಜನರಿಗೆ ಇ-ಖಾತಾ ಸಮಸ್ಯೆಯಾಗಿದ್ದರಿಂದ ಸಮಸ್ಯೆ ಎದುರಿಸುವಂತಾಗಿದೆ. ಈ ವಿಧೇಯಕ ಅನುಷ್ಠಾನ ಮಾಡಿದರೆ ಇ-ಖಾತೆ ಮಾಡಿಸಲು ಅನುಕೂಲವಾಗಲಿದೆ. ಇದಕ್ಕಾಗಿ ವಿಧೇಯಕವನ್ನು ಜಾರಿಗೊಳಿಸಲಾಗುತ್ತಿದೆ. ಅಕ್ರಮ-ಸಕ್ರಮ ವಿಚಾರವು ಸುಪ್ರೀಂಕೋರ್ಟ್‌ ನಲ್ಲಿದ್ದು, ಈ ಬಗ್ಗೆ ಒಂದು ವರ್ಷದಿಂದ ಪ್ರಯತ್ನ ಪಡ್ತಾ ಇದ್ದೇವೆ. ಈಗಾಗಲೇ ಸಾಕಷ್ಟು ಪ್ರಗತಿಯಾಗಿದೆ. ಮುಂದಿನ ವಿಚಾರಣೆ ವೇಳೆಗೆ ರಿಲೀಫ್ ಸಿಗುವ ಭರವಸೆ ಇದೆ ಎಂದು ಹೇಳಿದರು.

Leave A Reply

Your email address will not be published.