ಪ್ರೀತಿಸಿ ಮದುವೆಯಾದಾಕೆ ಗಂಡನಿಂದಲೇ ಕೊಲೆಯಾದಳು! | ಅನಾಥವಾದ ಕಂದಮ್ಮ

ಪ್ರೀತಿಸಿ ಮದುವೆಯಾದ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

 

ಚಿತ್ರದುರ್ಗದ ಮಲ್ಲಾಪುರದ ಹೀನಾಬಾನು (23) ಮೃತ ಯುವತಿ.

ಈಕೆ 2 ವರ್ಷಗಳ ಹಿಂದೆ ಜಾಫರ್​ ಸಾಧಿಕ್​ನನ್ನು ಪ್ರೀತಿಸಿ ಮದುವೆಯಾಗಿದ್ದಳು. 7 ತಿಂಗಳ ಹಿಂದೆಯಷ್ಟೇ ಹೀನಾಬಾನು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಇದೀಗ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆಕೆಯ ಕುಟುಂಬ ಕೊಲೆ ಆರೋಪ‌ ಮಾಡಿದೆ.

ಈ ಘಟನೆ ಕೂಡ್ಲಿಗಿ ತಾಲೂಕಿನ ಬಣವಿಕಲ್ ಗ್ರಾಮದಲ್ಲಿ ನಡೆದಿದ್ದು, ಯುವತಿಯ ಸಾವಿನಿಂದ ರೊಚ್ಚಿಗೆದ್ದು, ಯುವಕನ ಮನೆಗೆ ನುಗ್ಗಿದ ಯುವತಿಯ ಸಂಬಂಧಿಕರು ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಗಲಾಟೆ ಮಾಡಿದ್ದಾರೆ. ಆರೋಪ ಬೆನ್ನಲ್ಲೇ ಹೀನಾಬಾನು ಪತಿ ಜಾಫರ್ ಸಾಧೀಕ್, ಮಾವ ರಾಜಾಸಾಬ್, ಬಾವ ದಾದಾಫೀರ್ ಹಾಗೂ ನಾದಿನಿ ಹೀನಾಳನ್ನು ವಿಜಯನಗರದ ಕಾನಾಹೊಸಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆರೋಪ ನಿರಾಕರಿಸಿರುವ ಗಂಡನ ಮನೆಯವರು, ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ವೈಮನಸ್ಸಿತ್ತು. ಗಂಡನ ಪೋನ್ ರಿಸೀವ್ ಮಾಡದಿದ್ದಕ್ಕೆ ಮತ್ತು ಊಟದ ವಿಚಾರದಲ್ಲಿ ಗಂಡ-ಹೆಂಡತಿ ಮಧ್ಯೆ ಮನಸ್ತಾಪವಿತ್ತು. ಗಂಡನ ಜತೆ ಹೀನಾಬಾನು ಮುನಿಸಿಕೊಂಡಿದ್ದಳು. ಇದರಿಂದ ಮನನೊಂದು ಹೀನಾಬಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದು ಗಂಡನ ಮನೆಯವರ ವಾದವಾಗಿದೆ.

ಆದರೆ, ಈ ಘಟನೆಯ ಸತ್ಯಾಂಶ ಏನೆಂಬುದು ತನಿಖೆ ಬಳಿಕವಷ್ಟೇ ತಿಳಿದು ಬರಬೇಕಿದೆ. ಒಟ್ಟಾರೆ, ಗಂಡ ಹೆಂಡತಿಯ ಈ ನಿರ್ಧಾರದಿಂದ ಮಗು ಅನಾಥವಾಗಿದೆ.

Leave A Reply

Your email address will not be published.