ಸ್ವಾಮಿಯ ಆಟಾಟೋಪ | ಸಾಲ ನೀಡದ ಬ್ಯಾಂಕ್ ನ್ನು ದರೋಡೆ ಮಾಡುತ್ತೇನೆಂದು ರೈಫಲ್ ಹಿಡಿದು ಬಂದ ಸನ್ಯಾಸಿ

ರೈಫಲನ್ನು ಹಿಡಿದು ಸನ್ಯಾಸಿಯೋರ್ವ ಬ್ಯಾಂಕ್ ಗೆ ನುಗ್ಗಿ ಸಾಲ ಕೇಳಿದ ಘಟನೆಯೊಂದು ನಡೆದಿದೆ. ಸಾಲ ನೀಡಲು ನಿರಾಕರಿಸಿದ್ದಕ್ಕಾಗಿ ಈ ರೀತಿಯ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. ಈ ಘಟನೆ ತಮಿಳುನಾಡಿನ ತಿರುವಾರೂರಿನಲ್ಲಿ ನಡೆದಿದೆ.

ಬ್ಯಾಂಕ್ ಲೂಟಿ ಮಾಡುತ್ತೇನೆಂದು ಬೆದರಿಕೆಯೊಡ್ಡಿದ ಸನ್ಯಾಸಿಯನ್ನು ತಿರುಮಲೈ ಸಾಮಿ ಎಂದು ಗುರುತಿಸಲಾಗಿದೆ.

ಖಾಸಗಿ ವಲಯದ ಬ್ಯಾಂಕ್ ಗೆ ಈತ ಹೋಗಿದ್ದು, ಅಲ್ಲಿ ಈತ ಚೀನಾದಲ್ಲಿ ವೈದ್ಯಕೀಯ ಪದವಿ ಓದುತ್ತಿರುವ ತನ್ನ ಮಗಳಿಗೆ ಸಾಲ ನೀಡುವಂತೆ ಕೇಳಿದ್ದಾನೆ. ಈ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳು ಆಸ್ತಿ ದಾಖಲೆಗಳನ್ನೆಲ್ಲಾ ಕೇಳಿದ್ದಾರೆ. ಆದರೆ ಇದರಿಂದ ರೊಚ್ಚಿಗೆದ್ದ ಸ್ವಾಮಿ ತಕರಾರು ಮಾಡಿದ್ದಾನೆ. ಅಷ್ಟು ಮಾತ್ರವಲ್ಲದೇ ಅಧಿಕಾರಿಗಳ ಜೊತೆ ವಾದ ಕೂಡಾ ಮಾಡಿದ್ದಾನೆ. ಸಾಲದ ಮೊತ್ತವನ್ನು ಬಡ್ಡಿ ಸಮೇತ ಮರುಪಾವತಿಸುತ್ತೇನೆ. ಹಾಗಾಗಿ ಬ್ಯಾಂಕ್‍ಗೆ ಯಾಕೆ ತನ್ನ ಆಸ್ತಿ, ಜಾಮೀನಿನ ದಾಖಲೆಗಳನ್ನು ನೀಡಬೇಕು ಎಂದು ಆತನ ಪ್ರಶ್ನೆ.

ಹಾಗಾಗಿ ಬ್ಯಾಂಕ್ ಅಧಿಕಾರಿಗಳು ತಿರುಮಲೈ ಸಾಮಿ ಸಲ್ಲಿಸಿದ್ದ ಸಾಲದ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ನಂತರ ಮನೆಗೆ ಹೋಗಿ ಸಾಮಿ ತನ್ನ ರೈಫಲ್ ತೆಗೆದುಕೊಂಡು ಬ್ಯಾಂಕಿಗೆ ವಾಪಾಸ್ ಬಂದಿದ್ದಾನೆ. ಬಂದವನೇ ಬ್ಯಾಂಕ್ ನ ಕುರ್ಚಿ ಮೇಲೆ ಕುಳಿತುಕೊಂಡು ಧೂಮಪಾನ ಮಾಡುತ್ತಾ, ಬ್ಯಾಂಕ್ ಸಿಬ್ಬಂದಿಗೆ ಬೆದರಿಕೆ ಹಾಕಿದ್ದು, ಅಷ್ಟು ಮಾತ್ರವಲ್ಲದೇ ಫೇಸ್‍ಬುಕ್‍ ಲೈವ್ ಬಂದಿದ್ದಾನೆ. ಅಲ್ಲಿ ಸಾಲ ನೀಡಲು ನಿರಾಕರಿಸಿದ್ದಕ್ಕೆ ಬ್ಯಾಂಕ್ ಲೂಟಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.

ಬಳಿಕ ಈ ಬಗ್ಗೆ ಮಾಹಿತಿ ದೊರೆತ ಪೊಲೀಸರು ಬ್ಯಾಂಕ್‍ಗೆ ಆಗಮಿಸಿ ಸನ್ಯಾಸಿಯನ್ನು ಬಂಧಿಸಿದ್ದಾರೆ. ಹಾಗೂ ಈಗ ತನಿಖೆ ಆರಂಭಿಸಿದ್ದಾರೆ.

Leave A Reply

Your email address will not be published.