Mindful Everyday : ಜೀವನದಲ್ಲಿ ಸಮಾಧಾನದಿಂದಿರಲು ಇಲ್ಲಿದೆ ಕೆಲವೊಂದು ಟಿಪ್ಸ್ !!!

ನಮ್ಮ ಹಿರಿಯರು ಆರೋಗ್ಯವಂತರಾಗಿ ಸದೃಢ ಶರೀರ ಹೊಂದಿ ರೋಗ ರುಜಿನಗಳು ಸಮೀಪಿಸದಂತೆ ದಿನವಿಡೀ ದುಡಿಯುತ್ತಿದ್ದರೆಂದು ಸಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಇತ್ತಿಚಿನ ದಿನಗಳಲ್ಲಿ ವಯಸ್ಸಾದವರ ಜೊತೆಗೆ ಹದಿಹರೆಯದವರಲ್ಲಿಯೂ ಕೂಡ ಆರೋಗ್ಯ ಸಮಸ್ಯೆ ಕಾಣಿಸುತ್ತಿದೆ. ಹಿಂದಿನವರು ಪಾಲಿಸುತ್ತಿದ್ದ ಶಿಸ್ತು,ಅಹಾರ ಕ್ರಮ, ಆರೋಗ್ಯದ ಹಿಂದಿನ ಗುಟ್ಟು ತಿಳಿಯಲು ಎಲ್ಲರೂ ತವಕಿಸುವವರೆ ಹೆಚ್ಚು.

ಅಷ್ಟೇ ಅಲ್ಲ ಸನ್ಯಾಸಿಗಳು, ಯೋಗಿಗಳು ದೀರ್ಘಾಯುಷಿ ಯಾಗಿರುವ ಹಿಂದಿನ ರಹಸ್ಯವೇನೆಂಬ ಪ್ರಶ್ನೆ ಹಲವರನ್ನು ಕಾಡದಿರದು. ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿಯನ್ನು ಕಲ್ಪಿಸಿಕೊಡುವ ಮೈಂಡ್‌ಫುಲ್‌ನೆಸ್‌ ಅಥವಾ ಸಮಚಿತ್ತತೆಯನ್ನು ಅವರು ರೂಢಿಸಿಕೊಂಡಿದ್ದರಿಂದ ರೋಗ ರುಜಿನಗಳು ಹತ್ತಿರ ಸುಳಿಯುತ್ತಿರಲಿಲ್ಲ.
ದೈನಂದಿನ ಜೀವನದಲ್ಲಿ ಸಾಮಾನ್ಯ ಜನರಿಗೆ ಇದನ್ನು ಪಾಲಿಸಲು ತುಸು ಕಷ್ಟವಾದರೂ ದೃಢ ಚಿತ್ತ, ಹಟದಲ್ಲಿ ಪ್ರಯತ್ನಿಸಿದರೆ ಸಾಧ್ಯ. ಇದನ್ನು ರೂಢಿಸಿಕೊಳ್ಳಲು ಭಾವನೆ ಮತ್ತು ಯೋಚನೆಗಳ ಬಗ್ಗೆ ಸೂಕ್ತವಾಗಿ ತಿಳಿದು, ಆಲೋಚನೆಗಳು ಮತ್ತು ಭಾವನೆಗಳ ನಡುವಿನ ಸಂಘರ್ಷವನ್ನು ತಡೆದು, ಹಿಡಿತವನ್ನು ಸಾಧಿಸಬಹುದಾಗಿದೆ . ಇದರಿಂದ ಒತ್ತಡ ಕಡಿಮೆಯಾಗಿ ಆನಂದವನ್ನೂ ಆಸ್ವಾದಿಸಲು ಸಾಧ್ಯವಾಗುತ್ತದೆ.

ಸಮಾಧಾನ ಹಾಗೂ ಸಮಚಿತ್ತತೆ ರೂಡಿಸಿಕೊಳ್ಳುವುದರ ಅವಶ್ಯಕತೆಯ ಬಗ್ಗೆ ಗಮನ ಹರಿಸು ವುದಾದರೆ: ಮೈಂಡ್‌ಫುಲ್‌ನೆಸ್ ಹೆಚ್ಚಾಗಿ ಗಮನ ಮತ್ತು ಸ್ವೀಕಾರ ಎಂಬ ಅಂಶಗಳನ್ನು ಒಳಗೊಂಡಿದ್ದು, ಗಮನವು ಉಸಿರು, ಆಲೋಚನೆಗಳು, ಭಾವನೆಗಳು ಮತ್ತು ದೇಹದಲ್ಲಿನ ದೈಹಿಕ ಸಂವೇದನೆಗಳಿಗೆ ಅರಿವನ್ನು ನಿರ್ದೇಶಿಸುವ ಮೂಲಕ ಪ್ರಸ್ತುತ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಕೇಂದ್ರೀಕರಿಸುತ್ತದೆ.

ಅದೇ ರೀತಿ ಸ್ವೀಕಾರವು ಆ ಭಾವನೆಗಳು ಮತ್ತು ಸಂವೇದನೆಗಳನ್ನು ಮನಃಪೂರ್ವಕವಾಗಿ ಸಮ್ಮತಿಸುವ ಪ್ರಕ್ರಿಯೆಯಾಗಿದೆ. ನಮ್ಮ ಭಾವನೆಗಳು, ಆಲೋಚನೆಗಳು ಮತ್ತು ಕ್ರಿಯೆಯ ವೀಕ್ಷಕರಾಗಿ ಕಾರ್ಯನಿರ್ವಹಿಸಿ, ಅಗತ್ಯ ವಿಷಯಗಳಿಗೆ ಗಮನವನ್ನು ಸೆಳೆಯುವ ವಿಧಾನವಾಗಿದೆ. ಇದು ಯಾವುದ ವಿಧಾನವಾಗಿದೆ. ಇದು ಯಾವುದೇ ಕೆಲಸ ಮಾಡಿದರೂ ಅದರ ಬಗ್ಗೆ ಅನವಶ್ಯಕವಾಗಿ ಯೋಚಿಸದಂತೆ ನಮಗೆ ತರಬೇತಿ ನೀಡುತ್ತದೆ. ಹೆಚ್ಚು ನಕಾರಾತ್ಮಕ ಭಾವನೆಗಳಿಂದ ದೂರ ಮಾಡಿ,ಪ್ರತಿ ಕಾರ್ಯದಲ್ಲು ಅನಾವಶ್ಯಕವಾಗಿ ಚಿಂತಿಸದಂತೆ ತಡೆದು ಸಕಾರಾತ್ಮಕ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ನೆರವಾಗುತ್ತದೆ.

ಸಮಚಿತ್ತತೆಯನ್ನು ಅಭ್ಯಾಸ ಮಾಡಲು ಇಂತಹುದೇ ಸಮಯ ಮೀಸಲಿಡಬೇಕೆಂದಿಲ್ಲ. ಪ್ರತಿ ಕಾರ್ಯದಲ್ಲಿಯೂ ಕೂಡ ಸಮಾಧಾನದಿಂದ ವರ್ತಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಪ್ರತಿದಿನ ಸಮಚಿತ್ತತೆಯಿಂದ ಇರಲು ನಮ್ಮ ಮುಂದೆ ನಡೆಯುವ ಪ್ರತಿ ಸಣ್ಣ ಪ್ರಕ್ರಿಯೆಯನ್ನು ಕೂಡ ಸೂಕ್ಷ್ಮವಾಗಿ ಗಮನಿಸಿ, ಇಂದ್ರಿಯಗಳ ಕೆಲಸ ನಿರ್ವಹಿಸಲು ಬಿಟ್ಟರೆ ಆಗ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

ಮತ್ತೊಬ್ಬರಿಂದ ನೆರವು ಪಡೆದಾಗ ಕೃತಜ್ಞತೆ ಹೇಳುವ ಭಾವನೆಯು ಇಬ್ಬರಲ್ಲೂ ಸಕಾರಾತ್ಮಕ ಭಾವನೆಯನ್ನೂ ಹೆಚ್ಚಿಸುತ್ತದೆ. ಅಲ್ಲದೆ ಕೆಲಸಗಳನ್ನು ಮತ್ತಷ್ಟು ಸಕಾರಾತ್ಮಕವಾಗಿ ತೊಡಗಿಸಲು ಸಹಕರಿಸುತ್ತದೆ. ಸೇವಿಸುವ ಆಹಾರ, ಕುಡಿಯುವ ದ್ರವ ಪದಾರ್ಥ, ಕಾಫಿ, ಟೀಗಳ ಪರಿಮಳವನ್ನು ಅನುಭವಿಸಿ, ರುಚಿ ಮತ್ತು ಸುವಾಸನೆಯನ್ನು ಆಸ್ವಾದಿಸಿದಾಗ ಆಹಾರ ಪದಾರ್ಥಗಳ ರುಚಿ ಹೆಚ್ಚಾದ ಅನುಭವವಾಗುತ್ತದೆ. ದಿನನಿತ್ಯ ಮಾಡುವ ಪ್ರತಿ ಕೆಲಸವನ್ನು ಒತ್ತಡದಿಂದ ಸ್ವೀಕರಿಸದೆ, ಕೆಲಸದಲ್ಲಿ ಸಂಪೂರ್ಣವಾಗಿ ಆನಂದದಿಂದ ತೊಡಗಿಕೊಂಡಾಗ, ಕೆಲಸವು ಸಲೀಸಾಗಿ ಸಾಗುವುದರ ಜೊತೆಗೆ ಆ ಕೆಲಸವನ್ನೂ ಹೆಚ್ಚು ಗಮನವಹಿಸಲು ಸಾಧ್ಯವಾಗುತ್ತದೆ.

ದೇಹದ ವಿವಿಧ ಭಾಗಗಳಿಗೆ ನಿಧಾನವಾಗಿ ಗಮನ ನೀಡಿ, ತಲೆಯ ಮೇಲ್ಭಾಗದಿಂದ ಪ್ರಾರಂಭಿಸಿ ಕಾಲ್ಬೆರಳುಗಳ ಅಂತ್ಯದವರೆಗೆ ಗಮನ ವಹಿಸಿದರೆ ದೇಹಕ್ಕೂ ಮತ್ತು ಮನಸ್ಸಿಗೂ ಇರುವ ಅಂತರ ದೂರವಾಗಿ ಶಾಂತಿಯು ನೆಲೆಸುತ್ತದೆ. ವಾಹನ ಚಾಲನೆ ಮಾಡುವಾಗ ಕೈಗಳಿಗೆ ಆಗಾಗ ವಿಶ್ರಾಂತಿ ನೀಡಿ, ಅದರ ಜೊತೆಗೆ ರಸ್ತೆಯ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸುವುದರ ಜೊತೆಗೆ ಪ್ರಯಾಣವನ್ನೂ ಕೂಡ ಆನಂದದಿಂದ ಅನುಭವಿಸಬೇಕು.

ನಮ್ಮಿಂದ ಆಗುವ ಸಹಾಯವನ್ನು ಮುಕ್ತ ಮನಸ್ಸಿನಿಂದ ಮಾಡಬೇಕು. ಅಲ್ಲದೆ ಕೆಲಸ ಮಾಡುವಾಗ ಒತ್ತಡ ಹೆಚ್ಚಾಗಿ ಕೆಲಸದ ಮೇಲೆ ನಿಗಾ ವಹಿಸಲಾಗದೆ ಹೋದರೆ , ಏಕಾಗ್ರತೆಯಿಂದ ಉಸಿರಾಟದ ಮೇಲೆ ಗಮನ ಹರಿಸಬೇಕು. ಐದರಿಂದ ಏಳು ನಿಮಿಷಗಳ ಕಾಲ ಏಕಾಗ್ರತೆಯಿಂದ ಸ್ವಲ್ಪ ಧ್ಯಾನವನ್ನು ಮಾಡಿದರೆ, ಭಾವನೆಗಳು ಮತ್ತು ಆಲೋಚನೆಗಳ ಅವ್ಯವಸ್ಥೆಯನ್ನು ಶಾಂತಗೊಳ್ಳುತ್ತದೆ. ಮನಸ್ಸು ಚಂಚಲ ಆಗುವುದನ್ನು ತಪ್ಪಿಸಬಹುದು. ನೆಮ್ಮದಿ ಮನುಷ್ಯನ ಒತ್ತಡ ಜೀವನ ಶೈಲಿಗೆ ಅನಿವಾರ್ಯವಾಗಿದ್ದು, ಕೆಲವೊಂದು ಸಣ್ಣ ವಿಚಾರಗಳಲ್ಲಿ ಬದಲಾವಣೆ ಮಾಡಿಕೊಂಡರೆ ಶಾಂತಿ ನೆಲೆಸುತ್ತದೆ.

Leave A Reply

Your email address will not be published.