ಕಾರಿಗೆ ನಾಯಿಯನ್ನು ಕಟ್ಟಿ ಊರಿಡೀ ಚಲಾಯಿಸಿದ ನೀಚ ವೈದ್ಯ | ಕೇಸ್ ಜಡಿದ ಪೊಲೀಸ್

ರಾಜಸ್ಥಾನದ ಜೋಧ್‍ಪುರದ ವೈದ್ಯನೋರ್ವ ಕಾರಿಗೆ ನಾಯಿಯೊಂದನ್ನು ಚೈನ್‍ನಲ್ಲಿ ಕಟ್ಟಿಕೊಂಡು ನಿಷ್ಕರುಣೆ ಧೋರಣೆ ತೋರಿ, ಎಳೆದುಕೊಂಡು ವಾಹನ ಚಾಲನೆ ಮಾಡಿರುವ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಾಣಿ ಪ್ರಿಯರು ವೈದ್ಯನ ನಡೆಗೆ ಕುಪಿತರಾಗಿದ್ದಾರೆ.

ವೈದ್ಯನು ನಾಯಿಯನ್ನು ಈ ರೀತಿ ಎಳೆದೊಯ್ಯುವುದನ್ನು ಗಮನಿಸಿದ ಬೈಕ್ ಸವಾರರೊಬ್ಬರು ಪ್ರಾಣಿ ಹಿಂಸೆ ಮಾಡುವುದನ್ನು ಕಂಡು ಸಹಿಸಲಾಗದೇ ಕಾರನ್ನು ಅಡ್ಡಹಾಕಿ ನಾಯಿಯ ಕುತ್ತಿಗೆಗೆ ಕಟ್ಟಿದ್ದ ಚೈನ್ ಬಿಚ್ಚಿ, ಈ ಘಟನೆ ಬಗ್ಗೆ ನಗರದ ಡಾಗ್ ಹೋಮ್ ಫೌಂಡೇಶನ್‍ಗೆ ಮಾಹಿತಿ ನೀಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನಾಯಿಗೆ ಸ್ಥಳೀಯರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ವೆಟರ್ನರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆರೋಪಿಯನ್ನು ಡಾ. ರಜನೀಶ್ ಗಾಲ್ವಾ ಎಂದು ಗುರುತಿಸಲಾಗಿದ್ದು, ಈತನ ಬಗ್ಗೆ ತಕ್ಷಣ ಪೊಲೀಸರಿಗೆ ದೂರು ಸಲ್ಲಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ವೈದ್ಯನ ವಿರುದ್ಧ ಪ್ರಾಣಿಹಿಂಸೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಿಂದ ನುಣುಚಿಕೊಳ್ಳುವ ಸಲುವಾಗಿ ಮನೆಯ ಸಮೀಪ ವಾಸವಿದ್ದ ಬೀದಿನಾಯಿಯನ್ನು ಅಲ್ಲಿಂದ ಬೇರೆಡೆಗೆ ಕರೆದೊಯ್ಯುತ್ತಿದ್ದುದಾಗಿ ಆರೋಪಿ ತಿಳಿಸಿದ್ದಾನೆ. ಅಲ್ಲದೆ ಈ ಕುರಿತು ನಗರದ ಡಾಗ್ ಹೋಮ್ ಫೌಂಡೇಶನ್ ರವರು ಕೂಡ ಜೋಧಪುರ ವೈದ್ಯನ ವಿರುದ್ಧ ಪ್ರಾಣಿಹಿಂಸೆ ಪ್ರಕರಣ ದಾಖಲಿಸಿದ್ದಾರೆ.

Leave A Reply

Your email address will not be published.