ಮೀನಿನೊಂದಿಗೆ ಸೆಲ್ಫಿ ಕ್ಲಿಕ್ಕಿಸುತ್ತಿದ್ದ ವ್ಯಕ್ತಿ ಮಾಡಿದ ಮಹಾ ಎಡವಟ್ಟು | ಏನು ಮಾಡಿದ ಎಂಬುದನ್ನು ಈ ವೈರಲ್ ವೀಡಿಯೋದಲ್ಲಿ ನೋಡಿ..
ಸೆಲ್ಫಿ ಅವಾಂತರಗಳು ಒಂದೋ ಎರಡೋ, ಅಬ್ಬಬ್ಬಾ ಈ ಸೆಲ್ಫಿಯಿಂದ ಪ್ರಾಣವನ್ನೇ ಕಳೆದುಕೊಂಡವರು ಅದೆಷ್ಟೋ ಮಂದಿ. ಅದೇನು ಮಾಯೇನೋ ಏನೂ, ಮೊಬೈಲ್ ಕೈ ಬಂದ ಕೂಡಲೇ ಎಲ್ಲವನ್ನು ಮರೆತು ಬಿಡುವವರು ಅದೆಷ್ಟೋ ಮಂದಿ. ಹಾಗೇನೇ ಕೆಲವೊಂದಷ್ಟು ಜನ ಮೈ ಮೇಲೆ ಪ್ರಜ್ಞೆಯೇ ಇಲ್ಲದಂತೆ ವರ್ತಿಸುತ್ತಾರೆ. ಅದರಂತೆ ತನ್ನ ಕೈಯಲ್ಲಿ ಏನಿದೆ ಅನ್ನೋದನ್ನೇ ಮರೆತುಹೋಗುತ್ತಾರೆ.
ಅದರಲ್ಲೂ ಇದೀಗ ಸೆಲ್ಫಿ ಕ್ರೇಜ್ ಒಂದು ಟ್ರೆಂಡ್ ಅಂತಾನೆ ಹೇಳಬಹುದು. ಅದು ಸಣ್ಣ ವಸ್ತು ಕಂಡರೂ ಸರಿ ಅದರೊಂದಿಗೆ ಕ್ಲಿಕ್ಕಿಸಿಕೊಳ್ಳದೆ ಸಮಾಧಾನವೇ ಇರದು. ಇದೇ ರೀತಿ ವ್ಯಕ್ತಿಯೊಬ್ಬ ಮೀನಿನೊಂದಿಗೆ ಸೆಲ್ಫಿ ತೆಗೆಯಲು ಹೋಗಿ ಏನು ಮಾಡಿಕೊಂಡ ಗೊತ್ತಾ? ಇದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರಿಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುವಂತೆ ಮಾಡುತ್ತಿದೆ.
ಹೌದು. ವ್ಯಕ್ತಿಯೊಬ್ಬ ಸಮುದ್ರದಲ್ಲಿ ಬೋಟಿಂಗ್ ಮಾಡುತ್ತಿದ್ದಾನೆ. ಆತನ ಜೊತೆ ಇನ್ನಿಬ್ಬರು ಬೋಟ್‌ನಲ್ಲಿ ಕುಳಿತಿದ್ದರೆ, ಈತ ಮಾತ್ರ ನಿಂತುಕೊಂಡು ಕೈಯಲ್ಲಿ ಮೀನೊಂದು ಹಿಡಿದುಕೊಂಡು ಒಂದೇ ಸಮನೇ ಕ್ಲಿಕ್ ಕ್ಲಿಕ್ ಕ್ಲಿಕ್ ಅಂತ ಮೀನಿನೊಂದಿಗೆ ಫೋಟೋ ಕ್ಲಿಕ್ಕಿಸುತ್ತಿದ್ದಾನೆ. ಬಳಿಕ ಫೋಟೋ ಸಾಕು ಅನಿಸಿ ಮೀನನ್ನು ನೀರಿಗೆ ಎಸೆಯಲು ಮುಂದಾಗಿದ್ದಾನೆ. ಆದ್ರೆ, ಈತ ಇಲ್ಲೇ ಮಾಡಿದ ಎಡವಟ್ಟು. ಯಾಕಂದ್ರೆ ಮೈ ಮರೆತು ಮೀನನ್ನು ಕೆಳಕ್ಕೆಸೆಯುವ ಬದಲು ಮೊಬೈಲ್ ಫೋನ್ ಅನ್ನೇ ಸಮುದ್ರಕ್ಕೆಸೆದಿದ್ದಾನೆ ಈ ಭೂಪ!
ಬಳಿಕ ಆತನಿಗೆ ಮಾತ್ರ ಆಗಿದ್ದು ಟೆನ್ಶನ್. ಯಾರಿಗಾದ್ರೂ ಮೊಬೈಲ್ ಕಳೆದುಕೊಂಡಾಗ ದುಃಖ ಆಗದೇ ಇರುತ್ತಾ? ಅದೇ ರೀತಿ ಈತನಿಗೂ ಬೇಸರವಾಗಿದೆ. ನಿಂತಲ್ಲೇ ನೋಡುತ್ತಾ ಮೌನಿಯಾಗಿದ್ದಾನೆ. ಈತ ಫೋಟೋ ಕ್ಲಿಕ್ಕಿಸುವ ವೇಳೆ ಈತನ ಕೈಯಲ್ಲಿ ಮೀನು ವಿಲ ವಿಲ ಒದ್ದಾಡುತ್ತಿದ್ದರೆ, ಮೊಬೈಲ್ ನೀರಿಗೆಸೆದ ಬಳಿಕ ನಿಂತಲ್ಲಿ ನಿಲ್ಲಲಾರದೇ ಈತ ವಿಲ ವಿಲ ಒದ್ದಾಡಿದ್ದಾನೆ.
ಈ ವಿಡಿಯೋ ಅನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದವರು ತನ್ಸು ಯೆಗೆನ್. ಇವರು ಆಗಾಗ ಇಂಥ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಪ್ರಸ್ತುತ ವಿಡಿಯೋ ಅನ್ನು ಸೆಪ್ಟೆಂಬರ್ 11ರಂದು ಪೋಸ್ಟ್ ಮಾಡಿದ್ದಾರೆ. 12.6 ಮಿಲಿಯನ್‌ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 1,40,000 ಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. 29,000 ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ಧಾರೆ.
ವಿಡಿಯೋ ನೋಡಿದವರೆಲ್ಲಾ ಓಹ್ ನೋ, ಹೀಗಾಗಬಾರದಿತ್ತು ಎಂದು ಕಾಮೆಂಟ್ ಮಾಡಿದರೆ, ಮತ್ತೆ ಕೆಲವರಿಗೆ ಈ ದೃಶ್ಯ ಹಾಸ್ಯವನ್ನುಕ್ಕಿಸಿದೆ. ಇನ್ನೂ ಕೆಲವರಿಗೆ ಸಹಾನುಭೂತಿ. ಒಂದಿಷ್ಟು ಜನ ಇದು ನಕಲಿ ವಿಡಿಯೋ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಒಬ್ಬರು, ನಕಲಿಯಾಗಿದ್ದರೆ ಸಮುದ್ರಕ್ಕೆ ಕಸವನ್ನು ಎಸೆಯುವುದು ಅಪರಾಧ. ಹಾಗಿದ್ದರೆ ಅವರು ದಂಡ ತೆರಬೇಕು ಎಂದಿದ್ದಾರೆ. ಮನಸ್ಸಿನ ಅನುಪಸ್ಥಿತಿಯಿಂದ ಇಂತಹ ಹಲವು ಕಿತಾಪತಿಗಳನ್ನು ನಾನು ಮಾಡಿದ್ದೇನೆ. ಆದರೆ ಮೊಬೈಲ್ ಎಸೆಯುವ ಕೆಲಸ ಯಾವತ್ತೂ ಮಾಡಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ನಕಲಿ, ಆತ ಮೊಬೈಲ್ ಎಸೆದಿಲ್ಲ, ಸುಮ್ಮನೇ ವೀಡಿಯೋ ಗೋಸ್ಕರ ಮಾಡಿರಬಹುದು ಎಂದಿದ್ದಾರೆ. ಒಟ್ಟಾರೆ, ಒಂದಷ್ಟು ಜನಕ್ಕೆ ಎಂಟರ್ಟೈನ್ಮೆಂಟ್ ಆಗಿದ್ದು ಅಂತೂ ನಿಜ….