ಕುಡಿದು ಗಾಡಿ ಚಲಾಯಿಸುವುದು ಕಾನೂನು ಪ್ರಕಾರ ಅಪರಾಧ. ಅದು ಗೊತ್ತಿದ್ದೂ ಗಾಡಿ ಚಲಾಯಿಸಿ ಸಿಕ್ಕಿಬಿದ್ದರೆ ಜೈಲೂಟ ಗ್ಯಾರಂಟಿ. ಹೀಗೆ ಮದ್ಯಪಾನ ಮಾಡಿ ಗಾಡಿ ಚಲಾಯಿಸಿ ಸಿಕ್ಕಿಬಿದ್ದ ಆರೋಪಿಯೋರ್ವನಿಗೆ ಹೈಕೋರ್ಟ್ ವಿಶೇಷ ಶಿಕ್ಷೆ ನೀಡಿದೆ. ಅದೇನೆಂದು ಇಲ್ಲಿದೆ ನೋಡಿ.
ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಮೂವರು ಪಾದಚಾರಿಗಳನ್ನು ಗಾಯಗೊಳಿಸಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಯುವಕನಿಗೆ ಮದ್ರಾಸ್ ಹೈಕೋರ್ಟ್ ವಿಶೇಷ ಶಿಕ್ಷೆ ನೀಡಿದೆ. ಹಾಗೂ ಆತನನ್ನು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಹೌದು, ಯುವಕನನ್ನು ಬಿಡುಗಡೆ ಮಾಡಿರುವ ನ್ಯಾಯಾಲಯ ಆ ಯುವಕನಿಗೆ, ಎರಡು ವಾರಗಳ ಕಾಲ ನಗರದ ಜನನಿಬಿಡ ಜಂಕ್ಷನ್‌ನಲ್ಲಿ ಕುಡಿದು ವಾಹನ ಚಲಾಯಿಸುವುದರ ವಿರುದ್ಧ ಕರಪತ್ರಗಳನ್ನು ಹಂಚಬೇಕು ಎಂದು ಹೇಳಿದೆ.
ಈತ ಕುಡಿದು ಗಾಡಿ ಚಲಾಯಿಸುತ್ತಿದ್ದು, ಮದ್ಯದ ಅಮಲಿನಲ್ಲಿ ಮೂರು ಮಂದಿಗೆ ಗಾಯಗೊಳಿಸಿದ್ದ. ಪೊಲೀಸರು ಚೆಕ್ ಮಾಡುವ ಸಂದರ್ಭದಲ್ಲಿ ಆತ ಕುಡಿದಿರುವುದು ಗೊತ್ತಾಗಿತ್ತು. ನಂತರ ಆ ವ್ಯಕ್ತಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ 25 ಸಾವಿರ ರೂಪಾಯಿ ಬಾಂಡ್ ಹಾಗೂ ಇಬ್ಬರು ಶೂರಿಟಿ ನೀಡಿದ ಮೇಲೆ ಜಾಮೀನು ನೀಡಲಾಗುತ್ತದೆ ಎಂದು ಸೈದಾಪೇಟ್ IV ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಹೇಳಿದ್ದರು.
ಜಾಮೀನು ನೀಡುವುದನ್ನು ವಿರೋಧಿಸಿದ ಪ್ರತಿವಾದಿ ವಕೀಲರು ಆರೋಪಿಯು ಆಗಸ್ಟ್ 23 ರಂದು ಕುಡಿದ ಅಮಲಿನಲ್ಲಿ ವಾಹನವನ್ನು ದುಡುಕಿನ ಮತ್ತು ನಿರ್ಲಕ್ಷ್ಯದ ರೀತಿಯಲ್ಲಿ ಚಾಲನೆ ಮಾಡಿ ಮೂವರು ಪಾದಚಾರಿಗಳಿಗೆ ಗಾಯಗೊಳಿಸಿದ್ದಾನೆ ಎಂದು ವಾದಿಸಿದರು. ಆ ಇಡೀ ಕುಟುಂಬದ ಜವಬ್ದಾರಿ ಯುವಕನ ಮೇಲೆ ಇದೆ ಎಂದು ವಾದ ಮಾಡಿದ್ದಾರೆ.
ಅಲ್ಲದೆ ಅಪಘಾತದಲ್ಲಿ ಗಾಯಗೊಂಡ ಪಾದಾಚಾರಿಗಳು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರಿಂದ ನ್ಯಾಯಾಧೀಶರು ಯುವಕನಿಗೆ ಷರತ್ತುಬದ್ಧ ಜಾಮೀನು ನೀಡಲು ಮುಂದಾಗಿದ್ದಾರೆ.
ಆದರೆ ಸುಮ್ಮನೆ ಕಳಿಸಿಲ್ಲ. ವಿಶೇಷ ಶಿಕ್ಷೆಯೊಂದಿಗೆ ಕಳಿಸಿದ್ದಾರೆ. ಯುವಕ ಪ್ರತಿದಿನ ಎರಡು ವಾರಗಳ ಕಾಲ ಅಡ್ಯಾ ಪೊಲೀಸ್ ಠಾಣೆಗೆ ಹಾಜರಾಗಬೇಕು ಮತ್ತು ಬೆಳಿಗ್ಗೆ 9-10 ಮತ್ತು ಸಂಜೆ 5-7 ರವರೆಗೆ ಕರಪತ್ರಗಳನ್ನು ಹಂಚಬೇಕು. ಅಗತ್ಯವಿದ್ದಾಗ ಪೊಲೀಸರಿಗೆ ವರದಿ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
ಇದೊಂದು ಕುಡಿದು ಚಾಲನೆ ಮಾಡುವವರಿಗೆ ಪಾಠವೆಂದೇ ಹೇಳಬಹುದು. ಮದ್ಯಪಾನ ಮಾಡಿ, ಜನರ ಜೀವದ ಜೊತೆ ಆಡುವವರಿಗೆ ಈ ಶಿಕ್ಷೆಯೊಂದು ಪ್ರಾಯಶ್ಚಿತ್ತ ರೂಪದಲ್ಲಿ ಕೊಡಲಾಗಿದೆ ಎಂದುಕೊಳ್ಳೋಣ.