ಮತ್ತೊಮ್ಮೆ ಅಜ್ಜನಾದ ತಲೈವ ರಜನಿಕಾಂತ್ | ಮಗನಿಗೆ “ರಜನಿಕಾಂತ್” ಎಂದು ನಾಮಕರಣ ಮಾಡಿದ ಮಗಳು ಸೌಂದರ್ಯ
ಸೂಪರ್ ಸ್ಟಾರ್ ರಜನಿಕಾಂತ್ ಅವರ ಎರಡನೇ ಪುತ್ರಿ ಸೌಂದರ್ಯಾ ರಜನಿಕಾಂತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್ 11ರ ರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ.
ಈ ಮೂಲಕ ರಜನಿಕಾಂತ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ್ದು, ಮತ್ತೊಮ್ಮೆ ತಲೈವ ರಜನಿಕಾಂತ್ ಅಜ್ಜನಾಗಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನ್ಮ ನೀಡಿರುವ ಅವರು ಮಗುವಿನ ಕೈ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸೌಂದರ್ಯಾ ಅವರಿಗೆ ವೇದ್ ಎಂಬ ಪುತ್ರನಿದ್ದಾನೆ. ಈಗ ಅವರು ಎರಡನೇ ಮಗನ ಆಗಮನದಿಂದ ಖುಷಿ ಆಗಿದ್ದಾರೆ. ಈ ಮಗನಿಗೆ ವೀರ್ ರಜನಿಕಾಂತ್ ವನಂಗಮುಡಿ ಎಂದು ಹೆಸರು ಇಡಲಾಗಿದೆ.
‘ದೇವರ ಕೃಪೆ ಮತ್ತು ತಂದೆ-ತಾಯಿ ಆಶೀರ್ವಾದದಿಂದ ಸೆಪ್ಟೆಂಬರ್ 11ರಂದು ವೀರ್ ರಜನಿಕಾಂತ್ ವನಂಗಮುಡಿಗೆ ನಾನು, ವಿಶಾಗನ್ ಮತ್ತು ವೇದ್ ಸ್ವಾಗತ ಕೋರಿದ್ದೇವೆ’ ಎಂದು ಸೌಂದರ್ಯಾ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜೊತೆಗಿದ್ದ ವೈದ್ಯರಿಗೆ ಅವರು ಧನವಾದ ಅರ್ಪಿಸಿದ್ದಾರೆ.
ಸೌಂದರ್ಯಾ ಅವರು ಅಶ್ವಿನ್ ರಾಮ್ಕುಮಾರ್ ಜೊತೆ 2010ರಲ್ಲಿ ಮದುವೆ ಆಗಿದ್ದರು. ಈ ಜೋಡಿಗೆ 2015ರಲ್ಲಿ ಮೊದಲ ಮಗು ಜನಿಸಿತು. 2017ರಲ್ಲಿ ಸೌಂದರ್ಯಾ ಮತ್ತು ಅಶ್ವಿನ್ ವಿಚ್ಛೇದನ ಪಡೆದುಕೊಂಡರು. 2019ರಲ್ಲಿ ವಿಶಾಗನ್ ವನಂಗಮುಡಿ ಜೊತೆ ಸೌಂದರ್ಯಾ ಎರಡನೇ ಮದುವೆ ಮಾಡಿಕೊಂಡರು. ಈಗ ಈ ದಂಪತಿಗೆ ಮಗು ಜನಿಸಿದೆ.