RD Account : ಅಂಚೆ ಕಚೇರಿ ಹಾಗೂ ಎಸ್ ಬಿಐ ಆರ್ ಡಿ ಖಾತೆಗಳ ನಡುವಿನ ವ್ಯತ್ಯಾಸವೇನು?
ಪ್ರತಿಯೊಬ್ಬ ವ್ಯಕ್ತಿಯು ತಾನು ಶ್ರಮ ವಹಿಸಿ ಸಂಪಾದಿಸಿದ ಆದಾಯವನ್ನು ಸುರಕ್ಷಿತಗೊಳಿಸುವ ಜೊತೆಗೆ ಅವಶ್ಯಕತೆ ತಕ್ಕಂತೆ ಪಡೆಯುವ ಸೌಲಭ್ಯ ಪಡೆಯಲು ಹೂಡಿಕೆ ಮಾಡುವ ಪ್ರಕ್ರಿಯೆ ಸಾಮಾನ್ಯ. ಹೂಡಿಕೆ ಮಾಡುವಾಗ ಬ್ಯಾಂಕ್, ಪೋಸ್ಟ್ ಆಫೀಸ್, LIC , ಇಲ್ಲವೇ ಶೇರ್ ಮಾರ್ಕೆಟ್ ನಲ್ಲಿ ಉಳಿತಾಯ ಮಾಡುವುದು ಉತ್ತಮ ವಿಧಾನವಾಗಿದೆ.
ನಮ್ಮ ಭವಿಷ್ಯದ ದೃಷ್ಟಿಕೋನದಿಂದ ಹೂಡಿಕೆಯು ಅನಿವಾರ್ಯ ಹಾಗೂ ಉತ್ತಮ ಹವ್ಯಾಸವಾಗಿದೆ. ಭವಿಷ್ಯದಲ್ಲಿ ಯಾವುದೇ ರೀತಿಯ ಆರ್ಥಿಕ ಮುಗ್ಗಟ್ಟು ಎದುರಾದರೂ ಕೂಡ ಈ ಹೂಡಿಕೆಯ ನೆರವಿನಿಂದ ಪರಿಹಾರ ಪಡೆಯಬಹುದು.
ಹೂಡಿಕೆಗಿರುವ ಉತ್ತಮ ಆಯ್ಕೆಗಳಲ್ಲಿ ಆರ್ ಡಿ ಕೂಡ ಒಂದು. ಆದರೆ ಬಹುತೇಕರಿಗೆ ಅಂಚೆ ಕಚೇರಿ, ಎಸ್ ಬಿಐ ಇವೆರಡರಲ್ಲಿ ಎಲ್ಲಿ ಆರ್ ಡಿ ಖಾತೆ ತೆರೆದರೆ ಉತ್ತಮ ಎಂಬ ಗೊಂದಲ ಕಾಡುತ್ತಲೇ ಇರುತ್ತದೆ .
ಮಧ್ಯಮ ವರ್ಗದ ಜನರು ಹೂಡಿಕೆಗೆ ಹೆಚ್ಚು ಸುರಕ್ಷಿತವಾದ ಮಾಧ್ಯಮವನ್ನೇ ಆಯ್ದುಕೊಳ್ಳುವ ಕಾರಣ ಅಂಚೆ ಕಚೇರಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ. ಅಂಚೆ ಕಚೇರಿ ಹಾಗೂ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಲಭ್ಯವಿರುವ ರಿಕರಿಂಗ್ ಡೆಫಾಸಿಟ್ ಹೆಚ್ಚಿನ ಜನರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ.
ಕನಿಷ್ಠ 100 ರೂ. ನಿಂದ ಹೂಡಿಕೆ ಪ್ರಾರಂಭಿಸಬಹುದು. ಅಲ್ಲದೇ ರಿಕರಿಂಗ್ ಡೆಫಾಸಿಟ್ ನಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಬಡ್ಡಿ ಸಿಗುತ್ತದೆ. ಜೊತೆಗೆ ಗರಿಷ್ಠ ಇಷ್ಟೇ ಹೂಡಿಕೆ ಮಾಡಬೇಕೆಂಬ ನಿರ್ಬಂಧವಿಲ್ಲ. ಆರ್ ಡಿ ಅವಧಿ ಮುಗಿದ ಬಳಿಕ ಹೂಡಿಕೆ ಮಾಡಿದ ಮೊತ್ತವನ್ನು ಸಂಚಿತ ಬಡ್ಡಿಯೊಂದಿಗೆ ಹಿಂತಿರುಗಿಸಲಾಗುತ್ತದೆ.
ಮರುಕಳಿಸುವ ಠೇವಣಿ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿಲ್ಲದಿರುವುದರಿಂದ, ಇದು ಅಪಾಯ-ಮುಕ್ತವಾಗಿದೆ ಮತ್ತು ಕಡಿಮೆ ಅಪಾಯದ ಹಸಿವನ್ನು ಹೊಂದಿರುವ ಹೂಡಿಕೆದಾರರಿಗೆ ಮತ್ತು ಮೊದಲ ಬಾರಿಗೆ ತಮ್ಮ ಹಣವನ್ನು ಯೋಜನೆಯಲ್ಲಿ ಠೇವಣಿ ಮಾಡುವ ಹೂಡಿಕೆದಾರರಿಗೆ ಒದಗಿಸುತ್ತದೆ.
ಅಂಚೆ ಕಚೇರಿ ಹಾಗೂ ಎಸ್ ಬಿಐ ಎರಡರಲ್ಲೂ ಆರ್ ಡಿ ಖಾತೆ ಲಭ್ಯವಿದೆ. ಇವೆರಡೂ ಕೂಡ ಸರ್ಕಾರಿ ಬೆಂಬಲಿತ ಸಂಸ್ಥೆಗಳಾಗಿರುವ ಕಾರಣ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ. ಆದರೂ ಇವೆರಡಲ್ಲಿ ಹೆಚ್ಚಿನ ಬಡ್ಡಿದರ ಎಲ್ಲಿ ಸಿಗುತ್ತದೆ ಎಂಬ ಗೊಂದಲ ಹಲವರನ್ನು ಕಾಡುತ್ತಿರುತ್ತದೆ.
ಅಂಚೆ ಕಚೇರಿ ಆರ್ ಡಿಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಶೇ. 5.8 ಬಡ್ಡಿ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಪ್ರತಿ ತ್ರೈಮಾಸಿಕಕ್ಕೆ ನಿಗದಿಪಡಿಸುತ್ತದೆ. ಅಂಚೆ ಕಚೇರಿಯಲ್ಲಿ ಆರ್ ಡಿ ಖಾತೆ ತೆರೆದ ಮೇಲೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತ ಹೂಡಿಕೆ ಮಾಡಬೇಕು. ಒಂದು ವೇಳೆ ಒಂದು ತಿಂಗಳ ಪಾವತಿಯನ್ನು ಮಾಡದೇ ಹೋದರೆ, ಆಗ ಪ್ರತಿ ತಿಂಗಳು ಶೇ.1ರಷ್ಟು ಹೆಚ್ಚುವರಿ ಮೊತ್ತವನ್ನು ದಂಡವಾಗಿ ಪಾವತಿಸಬೇಕು.
ಒಂದು ವೇಳೆ ನಿರಂತರ 4 ತಿಂಗಳ ಪಾವತಿ ಕಂತುಗಳನ್ನು ಪಾಪತಿಸದಿದ್ದರೆ, ಆಗ ಆರ್ ಡಿ ಖಾತೆ ಮುಚ್ಚಲ್ಪಡುತ್ತದೆ. ನಂತರವೂ ಖಾತೆಯನ್ನು ಮತ್ತೆ ಕ್ರಿಯಾಶೀಲಗೊಳಿಸಲು 2 ತಿಂಗಳ ಕಾಲಾವಕಾಶವಿದ್ದು, ಮತ್ತೆ ಕೂಡ ಪಾಪತಿಸದೇ ಇದ್ದರೆ ,ಆರ್ ಡಿ ಖಾತೆ ಕಾಯಂ ಆಗಿ ಮುಚ್ಚಲ್ಪಡುತ್ತದೆ. ಈ ಯೋಜನೆಯಲ್ಲಿ ಖಾತೆ ತೆರೆದ ಒಂದು ವರ್ಷದ ಬಳಿಕ ಅದರಲ್ಲಿರೋ ಒಟ್ಟು ಹಣದ ಶೇ.50ರಷ್ಟನ್ನು ಮೊತ್ತವನ್ನು ಹಿಂಪಡೆಯುವ ಅವಕಾಶ ಖಾತೆದಾರನಿಗೆ ನೀಡಲಾಗಿದೆ.
ಎಸ್ ಬಿಐಯಲ್ಲಿ ಗ್ರಾಹಕರ ಆರ್ಥಿಕ ಗುರಿಗಳಿಗೆ ಅನುಗುಣವಾಗಿ ಒಂದರಿಂದ 10 ವರ್ಷಗಳ ಅವಧಿಯ ಆರ್ ಡಿ ಖಾತೆ ತೆರೆಯಬಹುದು. ಎರಡು ಕೋಟಿ ರೂ.ಗಿಂತ ಕಡಿಮೆ ಮೊತ್ತದ ಬ್ಯಾಂಕ್ ಠೇವಣಿಗೆ ಶೇ.5ರಿಂದ ಶೇ.5.40ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಈ ಸಾಮಾನ್ಯ ಬಡ್ಡಿದರದ ಮೇಲೆ 0.50% ಹೆಚ್ಚುವರಿ ಬಡ್ಡಿ ವಿಧಿಸಲಾಗುತ್ತದೆ.
ಇನ್ನು ಆರ್ ಡಿ ಖಾತೆ ಮೇಲೆ ಶೇ.90ರಷ್ಟು ಸಾಲ ಪಡೆಯುವ ಅವಕಾಶವನ್ನು ಕೂಡ ಎಸ್ ಬಿಐ ನೀಡುತ್ತದೆ. ಇನ್ನು ಆರ್ ಡಿ ಖಾತೆಯಲ್ಲಿನ ಹಣದ ಮೇಲೆ ಟಿಡಿಎಸ್ ಕಡಿತಕ್ಕೆ ಕೂಡ ಅವಕಾಶವಿದೆ. ಬ್ಯಾಂಕ್ ಖಾತೆಗೆ ಭೇಟಿ ನೀಡಿ ಅಥವಾ ಆನ್ ಲೈನ್ ಮೂಲಕ ಕೂಡ ಆರ್ ಡಿ ಖಾತೆ ತೆರೆಯಬಹುದು.
ಆರ್ ಡಿ ಖಾತೆಯಲ್ಲಿ ನಿರಂತರ ಠೇವಣಿಯಿಡುತ್ತ ಬಂದಿದ್ದರೆ, ಮೂರು ವರ್ಷಗಳ ಬಳಿಕ ಅವಧಿಗೂ ಮುನ್ನ ಈ ಖಾತೆಯನ್ನು ಕ್ಲೋಸ್ ಮಾಡಬಹುದು. ಹಾಗೆಯೇ ಈ ಖಾತೆಯನ್ನು ಖಾತೆದಾರರು ಬಯಸಿದರೆ ಮತ್ತೆ 5 ವರ್ಷಗಳ ಅವಧಿಗೆ ವಿಸ್ತರಿಸುವ ಅವಕಾಶವೂ ಇದೆ.
ಬ್ಯಾಂಕ್ನಲ್ಲಿ RD ಖಾತೆ ತೆರೆದರೆ 10 ವರ್ಷಗಳವರೆಗೆ RD ಖಾತೆಯಲ್ಲಿ ಹೂಡಿಕೆ ಮಾಡಲು ಅವಧಿಯನ್ನು ಗ್ರಾಹಕರು ಆಯ್ಕೆ ಮಾಡಬಹುದು. ಪೋಸ್ಟ್ ಆಫೀಸ್ನಲ್ಲಿ, ಗರಿಷ್ಠ ಹೂಡಿಕೆಯ ಅವಧಿಯು 5 ವರ್ಷಗಳವರೆಗೆ ಇರುತ್ತದೆ.
ಬ್ಯಾಂಕ್ ನಲ್ಲಿ ಅವಧಿಯು ಮುಗಿದ ನಂತರ, ಹೂಡಿಕೆ ಮುಂದುವರಿಸಲು ಬಯಸಿದರೆ, RD ಖಾತೆಯನ್ನು ನವೀಕರಿಸಿ ಅಗತ್ಯಗಳಿಗೆ ಅನುಗುಣವಾಗಿ ಅವಧಿಯನ್ನು ಆಯ್ಕೆ ಮಾಡುವ ಅವಕಾಶವಿದೆ. ಆದರೆ ಪೋಸ್ಟ್ ಆಫೀಸ್ ನಲ್ಲಿ ಅವಧಿಯು 5 ವರ್ಷ ಪೂರೈಸಿದ ಬಳಿಕ ನವೀಕರಿಸಲು ಸಾಧ್ಯ.
ಪೋಸ್ಟ್ ಆಫೀಸ್ ನಲ್ಲಿ ಶೇ.50ರಷ್ಟು ಮಾತ್ರ ಹೂಡಿಕೆಯ ಮೊತ್ತವನ್ನು ಹಿಂಪಡೆಯಬಹುದು. ಆದರೆ ಬ್ಯಾಂಕ್ಗಳಲ್ಲಿ ಮೊತ್ತದ 95% ವರೆಗೆ ಹಿಂಪಡೆಯಬಹುದು.
ಹೂಡಿಕದಾರರಿಗೆ ಅನುಕೂಲ ವಾಗುವಂತೆ ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಗಳು ರೆಕರ್ರಿಂಗ್ ಡೆಪಾಸಿಟ್ ವ್ಯವಸ್ಥೆ ಮಾಡಿದ್ದು, ಗ್ರಾಹಕನ ಅನುಕೂಲಕ್ಕೆ ತಕ್ಕಂತೆ ಹೂಡಿಕೆ ಮಾಡಬಹುದು.