Women Murder: ಅತ್ತಿಗೆಯೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡ ಮೈದುನ | ಅನಂತರ ನಡೆದೇ ಹೋಯ್ತು ಬರ್ಬರ ಹತ್ಯೆ!
ಅದು ಮಧ್ಯಾಹ್ನದ ಸಮಯ. ಊಟ ಮುಗಿಸಿ ಎಲ್ಲರೂ ಮಲಗೋ ಸಮಯ. ಆದರೆ ಕೂಡಲೇ ಹಬ್ಬಿತು ಒಂದು ಸುದ್ದಿ. ಹಳ್ಳಿಜನ (Villagers) ಇದ್ದಕ್ಕಿದ್ದಂತೆ ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಸುದ್ದಿಯೊಂದು ಬರಸಿಡಿಲು ಬಡಿದಿದೆ. ಕೂಡಲೇ ಊರಿನ ಜನ ಓಡೋಡಿ ಬಂದು ನೋಡುವಷ್ಟರಲ್ಲಿ ಅಲ್ಲಿ ನಡೆಯಬಾರದ ದುರ್ಘಟನೆಯೊಂದು ನಡೆದು ಹೋಗಿತ್ತು. ಅದುವೇ ಮಹಿಳೆಯ ಭೀಕರ ಮರ್ಡರ್.
ಆದರೆ ಈ ದುರ್ಘಟನೆಗೆ ಕಾರಣ ಒಮ್ಮೆ ಮೊಬೈಲ್ ಗಾಗಿ ಮರ್ಡರ್ (Murder) ಅನ್ನೋ ಮಾತು ಕೇಳಿ ಬಂದರೆ, ಅನೈತಿಕ ಸಂಬಂಧದ (Immoral Relationship) ಹಿನ್ನೆಲೆಯಲ್ಲಿ ಹೀಗಾಗಿದೆ ಅಂತಾನು ಕೆಲವರು ಹೇಳ್ತಾರೆ. ನಿಜಕ್ಕೂ ಈ ಮಹಿಳೆಯ ಮರ್ಡರ್ (Women Murder) ಯಾಕಾಯ್ತು ಎನ್ನುವುದಕ್ಕೆ ಈ ಕೆಳಗಿದೆ ಸಂಪೂರ್ಣ ಸ್ಟೋರಿ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಯಾರೂ ನಿರೀಕ್ಷಿಸದ ದುರ್ಘಟನೆಯೊಂದು ನಡೆದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಹೌದು, ನಡುಬೀದಿಯಲ್ಲೇ ಮೈದುನನಿಂದಲೇ ಅತ್ತಿಗೆಯ ಬರ್ಬರ ಹತ್ಯೆಯಾಗಿದೆ. ಸುನಂದಾಳನ್ನು ಮಹಾಂತೇಶ್ ಕೊಡಲಿಯಿಂದ ಕತ್ತಿಗೆ ಹೊಡೆದು ಕೊಚ್ಚಿ ಕೊಲೆ ಮಾಡಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡು ರಕ್ತದ ಮಡುವನಲ್ಲಿ ಬಿದ್ದ ಸುನಂದಾ ಆಸ್ಪತ್ರೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಡಿಗಟ್ಟಿ ಗ್ರಾಮದ ಸುನಂದಾಳನ್ನು ಕುಂದಗೋಳ ತಾಲೂಕಿನ ಯರಿನಾರಾಯಣಪುರದ ಹನುಮಂತನ ಜೊತೆ ಮದುವೆ ಮಾಡಿಕೊಡಲಾಗಿತ್ತು. ವಿವಾಹ ಆಗಿ ಸುಮಾರು 15 ವರ್ಷದ ಫಲವಾಗಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾರೆ ಈ ದಂಪತಿ. ಮಕ್ಕಳಾದರೂ ಸಂಸಾರ ಅಷ್ಟು ಚೆನ್ನಾಗಿ ಇರಲಿಲ್ಲವಂತೆ. ಗಂಡ ಹೆಂಡತಿ ನಡುವೆ ಆಗಾಗ ಗಲಾಟೆ ಮಾಮೂಲಿಯಾಗಿತ್ತು. ಗಂಡನ ಮನೆಗಿಂತ ಸುನಂದಾ ಹೆಚ್ಚಾಗಿ ತವರೂರಿನಲ್ಲಿ ಇರುತ್ತಿದ್ದಳಂತೆ. ಸುಮಾರು ಏಳೆಂಟು ವರ್ಷಗಳ ಬಳಿಕ ರಾಜಿ ಪಂಚಾಯ್ತಿ ಮಾಡಿಕೊಂಡು ಗಂಡನ ಮನೆಗೆ ಬಂದಿದ್ದಳು.
ಕೇವಲ ನಾಲ್ಕು ದಿನಗಳ ಹಿಂದಷ್ಟೇ ತವರೂರಿನಿಂದ ಗಂಡನ ಮನೆಗೆ ಬಂದ ಸುನಂದಾ, ಈಗ ಮೈದುನನ ಕೈಯಿಂದ ಬರ್ಬರವಾಗಿ ಹತ್ಯೆಗೀಡಾದ್ದಾಳೆ. ಗಂಡ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಮನೆಗೆ ಬಂದಿದ್ದ ಮೈದುನ ಮಹಾಂತೇಶ, ಸುನಂದಾಳಿಗೆ ಮೊಬೈಲ್ ಕೊಡುವಂತೆ ಒತ್ತಾಯಿಸಿದ್ದಾನೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಅತ್ತಿಗೆಯ ಕತ್ತಿಗೆ ಕೊಡಲಿಯಿಂದ ಹೊಡೆದಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದಲೇ ಬಂದಿದ್ದ ಮಹಾಂತೇಶ, ಅತ್ತಿಗೆಯನ್ನು ಮುಗಿಸಿ ಕುಂದಗೋಳ ಪೊಲೀಸರಿಗೆ ಶರಣಾಗಿದ್ದಾನೆ.
ಸುನಂದಾ ಸಹೋದರ ಕುಂದಗೋಳ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಆರೋಪಿ ಮಹಾಂತೇಶ, ಸುನಂದ ಗಂಡನ ದೊಡ್ಡಪ್ಪನ ಮಗ. ಸಹೋದರರ ಮಧ್ಯೆ ಆಸ್ತಿ ಕಲಹ ಇತ್ತು ಎನ್ನಲಾಗಿದೆ. ಅಷ್ಟು ಮಾತ್ರವಲ್ಲದೇ, ಆಗಾಗ ಅತ್ತಿಗೆ ಸುನಂದಾಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ ಅಂತ ದೂರು ಕೂಡಾ ದಾಖಲಾಗಿದೆ. ಆದರೆ ಗ್ರಾಮಸ್ಥರು ಹೇಳೋ ಪ್ರಕಾರ, ಸುನಂದಾ ಮತ್ತು ಆರೋಪಿ ಮಹಾಂತೇಶ ಇಬ್ಬರ ಮದ್ಯ ಅನೈತಿಕ ಸಂಬಂಧ ಇತ್ತು ಎಂದು. ಇಬ್ಬರು ಸುಮಾರು ವರ್ಷ ಜೊತೆಯಲ್ಲಿ ಸಹ ಜೀವನ ನಡೆಸುತ್ತಿದ್ದರೆನ್ನಲಾಗಿದೆ.
ಆದರೆ ಗಂಡನಿಂದ 8 ವರ್ಷ ದೂರವೇ ಇದ್ದ ಸುನಂದಾ ಮಹಾಂತೇಶ ಜೊತೆ ಜಗಳವಾಡಿ ತವರು ಮನೆ ಸೇರಿದ್ದಳು ಎನ್ನಲಾಗಿದೆ. ತೀರಾ ಇತ್ತೀಚಿಗೆ ಆಕೆ ಮತ್ತೆ ಗಂಡ ಮನೆ ಸೇರಿದ್ದಳು. ತನ್ನನ್ನು ಬಿಟ್ಟು ಮತ್ತೆ ಗಂಡ ಮನೆ ಸೇರಿದ್ದಕ್ಕೆ ಕೋಪಗೊಂಡು ಮಹಾಂತೇಶ ಈ ಕ್ರೌರ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಅನೈತಿಕ ಸಂಬಂಧ ಎರಡು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದೆ. ಪುಟ್ಟ ಇಬ್ಬರು ಮಕ್ಕಳನ್ನು ಅನಾಥ ಮಾಡಿ ಬಿಟ್ಟಿದೆ. ಅಷ್ಟಕ್ಕೂ ಇಲ್ಲಿ ಕಾಡುವ ಮತ್ತೊಂದು ಪ್ರಶ್ನೆ ಮೊಬೈಲ್ ನಲ್ಲಿ ಏನಿತ್ತು ಅನ್ನೋದು. ಆ ಗುಪ್ತ ಮಾಹಿತಿ ಮಾತ್ರ ಯಾರಿಗೂ ಗೊತ್ತಿಲ್ಲ.