ವಾರಾಂತ್ಯದಲ್ಲಿ ಗಂಡನಿಗೆ ಅದಕ್ಕೆ ಅವಕಾಶ ನೀಡುವೆ | ಬಾಂಡ್ ಪೇಪರ್‌ನಲ್ಲಿ ವಧುವಿನಿಂದ ಸಹಿ ಹಾಕಿಸಿದ ಸ್ನೇಹಿತರು!

ಮದುವೆ ಬಳಿಕ ಎಲ್ಲ ಶನಿವಾರ ಮತ್ತು ಭಾನುವಾರದಂದು ಸೂಪರ್ ಸ್ಟಾರ್ ತಂಡಕ್ಕಾಗಿ ಕ್ರಿಕೆಟ್ ಆಡಲು ಪತಿಗೆ ಅನುಮತಿ ನೀಡುತ್ತೇನೆ ಎಂದು ವಧುವಿನಿಂದ ಸ್ನೇಹಿತರು ಬಾಂಡ್ ಪೇಪರ್‌ನಲ್ಲಿ ಸಹಿ ಹಾಕಿಸಿಕೊಂಡಿದ್ದಾರೆ.
ಮದುವೆಯ ನಂತರ ಕೆಲವರು ಬದಲಾಗುತ್ತಾರೆ ಎಂಬ ಮಾತನ್ನು ತುಂಬಾ ಜನ ಹೇಳುತ್ತಾರೆ. ಹಾಗಾಗಿ ಈಗ ಮದುವೆಯಾಗುವ ಸಮಯದಲ್ಲೇ ಕೆಲವೊಂದು ಪ್ಲ್ಯಾನ್ ಮಾಡಲಾಗುತ್ತದೆ, ಅದು ಕೂಡಾ ಸ್ನೇಹಿತರ ಕಡೆಯಿಂದ. ಇಲ್ಲೊಂದು ಮದುವೆಯಲ್ಲಿ ಅಂತದ್ದೇ ಒಂದು ಘಟನೆ ನಡೆದಿದೆ. ಹಾಗಾದರೆ ಅಂತದ್ದೇನು ಮಾಡಿದ್ದಾರೆ ಸ್ನೇಹಿತರು ಗೊತ್ತೇ ?
ಮದುವೆಯಾದ ನಂತರ ಯಾವುದಕ್ಕೂ ಸಮಯ ಸಿಗುವುದಿಲ್ಲ ಮತ್ತು ಸಮಯವೂ ಸಾಕಾಗುವುದಿಲ್ಲ ಎಂಬ ಸಾಮಾನ್ಯ ಅಭಿಪ್ರಾಯವನ್ನು ತೊಡೆದು ಹಾಕಲು ಸ್ನೇಹಿತರು ಕಟು ನಿರ್ಧಾರ ತಗೊಂಡಿದ್ದಾರೆ. ಹಾಗಾಗಿ, ಇಲ್ಲೊಂದು ಮದುವೆ ಮನೆಯಲ್ಲಿ ವಾರಾಂತ್ಯದಲ್ಲಿ ವರನಿಗೆ ಕ್ರಿಕೆಟ್ ಆಡಲು ಅವಕಾಶ ನೀಡುವುದಾಗಿ ವಧುವಿನ ಕಡೆಯಿಂದ ವರನ ಸ್ನೇಹಿತರು ಬಾಂಡ್ ಬರೆಸಿಕೊಂಡಿದ್ದಾರೆ!
ಹೌದು, ತಮಿಳುನಾಡಿನ ಮಧುರೈ ಜಿಲ್ಲೆಯ ಉಸಿಲಂಪಟ್ಟಿಯಲ್ಲಿ ನಡೆದ ವಿವಾಹ ಸಮಾರಂಭ ಇಂತಹ ವಿಚಿತ್ರ ಹಾಗೂ ಅಚ್ಚರಿಯ ಕ್ಷಣಕ್ಕೆ ಸಾಕ್ಷಿಯಾಗಿದೆ. ಕೀಳ ಪುದೂರಿನ ನಿವಾಸಿ ಹರಿಪ್ರಸಾದ್ ಹಾಗೂ ಪೂಜಾ ಆಗಷ್ಟೇ ಹಸೆಮಣೆ ಏರಿ ವೇದಿಕೆಗೆ ಬಂದಿದ್ದರು. ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಹರಿಪ್ರಸಾದ್, ಸ್ಥಳೀಯ ಸೂಪರ್ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡದ ನಾಯಕರಾಗಿದ್ದಾರೆ.
ಹೀಗಾಗಿಯೇ ಹರಿಪ್ರಸಾದ್ ಮದುವೆಗೆ ಕ್ರಿಕೆಟ್ ತಂಡದ ಸದಸ್ಯರು ಹಾಗೂ ಸ್ನೇಹಿತರು ಬಂದಿದ್ದರು. ವೇದಿಕೆ ಮೇಲೆ ಬಂಧು ಮಿತ್ರರು ನವದಂಪತಿಗೆ ಶುಭಾಶಯ ಕೋರುವ ಕಾರ್ಯದಲ್ಲಿ ನಿರತರಾಗಿದ್ದರೆ, ಕ್ಲಬ್‌ನ ಆಟಗಾರರು ವರನ ಸ್ನೇಹಿತರ ವಧು ಪೂಜಾ ಕೈಗೆ ಒಂದು ಬಾಂಡ್ ಪೇಪರ್ ನೀಡಿದ್ದಾರೆ. ಈ ವೇಳೆ ಪೂಜಾ ತನಗೆ ಏನೋ ಚೇಷ್ಟೆ ಮಾಡಲು ಹೊರಟಿದ್ದಾರೆ ಎಂದುಕೊಂಡಿದ್ದರು.
ಆದರೂ, ವರನ ಸ್ನೇಹಿತರು ಪಟ್ಟು ಬಿಡದೇ ಒಪ್ಪಂದ ಪತ್ರಕ್ಕೆ ಸಹಿ ಹಾಕುವಂತೆ ಪೂಜಾರನ್ನು ಒತ್ತಾಯಿಸಿದ್ದಾರೆ. ಅಂತೆಯೇ, ಪೂಜಾ ಸಹಿ ಹಾಕಿಸಿದ್ದಾರೆ. ವಾರಾಂತ್ಯದಲ್ಲಿ ಗಂಡನಿಗೆ ಕ್ರಿಕೆಟ್ ಆಡಲು ಅವಕಾಶ ನೀಡುವುದಾಗಿ ಕ್ರಿಕೆಟ್ ಕ್ಲಬ್‌ನೊಂದಿಗೆ ಐದು ಸಾಲಿನ ಒಪ್ಪಂದ ಮಾಡಿಕೊಂಡಿರುವುದು ಗೊತ್ತಾಗಿದೆ.

‘ನಾನು, ಶ್ರೀಮತಿ ಪೂಜಾ, ಸೂಪರ್ ಸ್ಟಾರ್ ತಂಡದ ನಾಯಕ ಮತ್ತು ನನ್ನ ಪತಿ ಹರಿಪ್ರಸಾದ್ ಅವರಿಗೆ ಇಂದಿನಿಂದ ಮುಂದಿನ ಎಲ್ಲ ಶನಿವಾರ ಮತ್ತು ಭಾನುವಾರದಂದು ಸೂಪರ್ ಸ್ಟಾರ್ ತಂಡಕ್ಕಾಗಿ ಕ್ರಿಕೆಟ್ ಆಡಲು ಅನುಮತಿ ನೀಡುತ್ತೇನೆ’ ಎಂದು 20 ರೂ.ಗಳ ಸ್ಟಾಂಪ್ ಪೇಪರ್‌ನಲ್ಲಿ ಪೂಜಾ ಅವರಿಂದ ಹರಿಪ್ರಸಾದ್ ಸ್ನೇಹಿತರು ಸಹಿ ಮಾಡಿಸಿಕೊಂಡಿದ್ದಾರೆ. ಕೊನೆಗೆ ಇದ್ದನ್ನು ತಿಳಿದು ಪೂಜಾ ಒಂದು ಕ್ಷಣ ಅವಾಕ್ಕಾದರಲ್ಲದೇ, ನಂತರ ಸಂತೋಷ ಪಟ್ಟಿರುವುದಂತೂ ಸತ್ಯ.