ಸುಲಭವಾಗಿ ಸಾಲ ನೀಡುತ್ತೇವೆ ಎಂಬ ಭರವಸೆಯೊಂದಿಗೆ ಜನರನ್ನು ಬ್ಲಾಕ್ ಮೇಲ್ ಮಾಡುತ್ತಿರುವ ಅದೆಷ್ಟೋ ಲೋನ್ ಆಪ್ ಗಳು ಜನರ ಪ್ರಾಣವನ್ನೇ ಹಿಂಡುತ್ತಿದೆ. ಇದೀಗ ಅದೇ ಸಾಲಿಗೆ ಮತ್ತೊಂದು ಪ್ರಕರಣ ಸೇರ್ಪಡೆಗೊಂಡಿದೆ. ಹೌದು. 30 ಸಾವಿರ ರೂಪಾಯಿಗಾಗಿ ಲೋನ್ ಆಪ್ ದಂಪತಿಗಳ ಜೀವವನ್ನೇ ತೆಗೆದಿದೆ.
ಇಂತಹ ಒಂದು ಘಟನೆ ಆಂಧ್ರ ಪ್ರದೇಶದ ರಾಜಮುಂಡ್ರಿ ಜಿಲ್ಲೆಯಲ್ಲಿ ನಡೆದಿದ್ದು, ದಂಪತಿ ಸಾವಿನ ಹಾದಿ ಹಿಡಿದಿರುವ ಘಟನೆ ಬುಧವಾರ (ಸೆ.7) ನಡೆದಿದೆ. ಮೃತ ದಂಪತಿಯನ್ನು ದುರ್ಗಾ ರಾವ್ ಮತ್ತು ಆತನ ಪತ್ನಿ ರಮ್ಯಾ ಲಕ್ಷ್ಮೀ ಎಂದು ಗುರುತಿಸಲಾಗಿದೆ.
ದಂಪತಿ ಲೋನ್ ಆಯಪ್ ಮೂಲಕ 30 ಸಾವಿರ ರೂಪಾಯಿ ಸಾಲ ಪಡೆದಿದ್ದರು.ಜೀವನೋಪಾಯಕ್ಕಾಗಿ ದುರ್ಗಾರಾವ್ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ರಮ್ಯಾ ಟೈಲರಿಂಗ್ ಕೆಲಸ ಮಾಡುತ್ತಿದ್ದಳು. ಭಾಗಶಃ ಮೊತ್ತವನ್ನು ಮರುಪಾವತಿ ಮಾಡಿದ್ದರು. ಆದರೂ ಕಿರುಕುಳ ನೀಡಿ ಸಾಯುವಂತೆ ಮಾಡಿದ್ದಾರೆ. ಹಣ ಪಾವತಿಸದಿದ್ದರೆ ರಮ್ಯಾ ಅವರು ನಗ್ನವಾಗಿ ಕಾಣುವಂತೆ ಎಡಿಟ್ ಮಾಡಿದ ವೀಡಿಯೊಗಳು ಮತ್ತು ಫೋಟೋಗಳನ್ನು ಜಾಲತಾಣದಲ್ಲಿ ಶೇರ್ ಮಾಡುವುದಾಗಿ ಬೆದರಿಸುವ ಮೂಲಕ ರಿಕವರಿ ಏಜೆಂಟ್‌ಗಳು ನಿರಂತರ ಕಿರುಕುಳ ನೀಡುತ್ತಿದ್ದರು.
ಸುಮಾರು 2,000 ರೂ.ಗಳ ಕೆಲವು ಕಂತುಗಳನ್ನು ಪಾವತಿಸಿದರು ಸಹ ಕಿರುಕುಳ ಹಾಗೇ ಮುಂದುವರಿದಿತ್ತು. ಅಲ್ಲದೆ, ಎಡಿಟ್ ಮಾಡಿದ ಫೋಟೋ ಮತ್ತು ವಿಡಿಯೋಗಳನ್ನು ಸಂಬಂಧಿಕರು ಮತ್ತು ಪರಿಚಯಸ್ಥರೊಂದಿಗೆ ಹಂಚಿಕೊಂಡಿದ್ದರು. ಇದೀಗ ಲೋನ್ ಆಪ್ ಅವಾಂತರದಿಂದಾಗಿ ದಂಪತಿ ಸಾವನ್ನಪ್ಪಿದ್ದು, ನಾಲ್ಕು ಮತ್ತು ಎರಡು ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.