Cauvery 2.0 : ಆಸ್ತಿ ನೋಂದಣಿ ಇನ್ನು ಮುಂದೆ ಬಹಳ ಸರಳ | ನ. 1ರಿಂದ ಹೊಸ ತಂತ್ರಾಂಶ ಜಾರಿಗೆ
ಮನೆ ಕಟ್ಟಿನೋಡು,ಮದುವೆ ಮಾಡಿ ನೋಡು ಎಂಬ ಮಾತು ಹೆಚ್ಚು ಜನಪ್ರಿಯ. ಆದರೆ
ಮನೆ ಕಟ್ಟಲು,ಆಸ್ತಿ ಕೊಳ್ಳಲು ದುಡ್ಡು ಹೊಂದಿಸುವುದು , ಸಾಲ ಪಡೆಯುವುದು ಎಷ್ಟು ದೊಡ್ಡ ಕಷ್ಟವೋ, ಅಷ್ಟೇ ಕಷ್ಟ ಆಸ್ತಿ ನೋಂದಣಿ ಮಾಡಿಸುವುದು. ಆದರೆ ಇನ್ನು ಆ ತಲೆಬಿಸಿ ಇರಲ್ಲ.
ಕರ್ನಾಟಕದಲ್ಲಿ ಆಸ್ತಿ ನೋಂದಣಿ ಇನ್ನು ಮುಂದೆ ಸರಳವಾಗಲಿದೆ. ನವೆಂಬರ್ 1 ರಿಂದ ರಾಜ್ಯದಲ್ಲಿ ಆಸ್ತಿ ನೋಂದಣಿಗೆ ಯಾವುದೇ ತೊಂದರೆ ಇರುವುದಿಲ್ಲ. ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಸ್ತಿಗಳ ತಡೆರಹಿತ ನೋಂದಣಿಯನ್ನು ಖಚಿತಪಡಿಸಿಕೊಳ್ಳಲು ಕಾವೇರಿ ಬರ್ತಿದ್ದಾಳೆ. ಕಾವೇರಿ 2.0 ಎಂಬ ಸಾಫ್ಟ್ವೇರ್ ಅನ್ನು ಪ್ರಾರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಈಗಾಗಲೇ ಕಾವೇರಿ ಕಾರ್ಯಾರಂಭ ಮಾಡಿದ್ದು ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಜನಸ್ನೇಹಿ ಹಾಗೂ ಇಲಾಖೆ ಸ್ನೇಹಿಯಾಗಿರುವ ಈ ನೂತನ ತಂತ್ರಾಂಶವನ್ನು ಪರೀಕ್ಷಿಸಲಾಗುತ್ತಿದೆ. ಕಂದಾಯ ಸಚಿವ ಆರ್.ಅಶೋಕ್ ಅವರು ಕಳೆದ ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಬರುವ ನವೆಂಬರ್ 1 ರಿಂದ ರಾಜ್ಯಾದ್ಯಂತ ಕಾವೇರಿಯ ಕಾರ್ಯಾಚರಣೆ ಆರಂಭವಾಗಲಿದೆ.
ಈ ಸಾಫ್ಟ್ ವೇರ್ ಜನ ಸ್ನೇಹಿ ಆಗಿರಲಿದೆ. ಸಾಫ್ಟ್ವೇರ್ನಲ್ಲಿ ಜನರು ನೋಂದಾಯಿಸಿಕೊಳ್ಳಲು ಆಸ್ತಿಯ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು. ಸ್ಟ್ಯಾಂಪ್ ಡ್ಯೂಟಿ ಮತ್ತು ಇತರ ಶುಲ್ಕಗಳನ್ನು ಕೂಡಾ ಆನ್ಲೈನ್ನಲ್ಲಿ ಪಾವತಿಸಬಹುದು. ನಂತರ, ಅವರು ತಮಗೆ ಅನುಕೂಲಕರವಾದ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಬಹುದು. ಕೊನೆಗೆ ಬಯೋಮೆಟ್ರಿಕ್ ವಿವರಗಳನ್ನು ನೀಡಲು ಮಾತ್ರ ತಮ್ಮ ತಮ್ಮ ಆಯ್ಕೆಯ ಸಬ್-ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ.
ಒಮ್ಮೆ ಕಚೇರಿಗೆ ಭೇಟಿ ನೀಡಿದರೆ 5-10 ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಕೆಲವೇ ನಿಮಿಷಗಳಲ್ಲಿ ಆಸ್ತಿ ನಿಮ್ಮ ಹೆಸರಿನಲ್ಲಿ ಆಗಲಿದ್ದು ನೀವು ಹೆಮ್ಮೆಯ ಯಜಮಾನರಾಗಲಿದ್ದೀರಿ. “ಆಸ್ತಿ ವಿವರಗಳು ಮತ್ತು ಪ್ರದೇಶವನ್ನು ಆಧರಿಸಿ, ಖರೀದಿದಾರರು ಪಾವತಿಸಬೇಕಾದ ಶುಲ್ಕವನ್ನು ಸ್ವಯಂಚಾಲಿತವಾಗಿ ಲೆಕ್ಕಾಚಾರ ಮಾಡುವ ರೀತಿಯಲ್ಲಿ ಸಾಫ್ಟ್ವೇರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಮೂರನೇ ವ್ಯಕ್ತಿಯ ಮೇಲಿನ ಅವಲಂಬನೆ ಇಲ್ಲದಂತೆ ಮಾಡುತ್ತದೆ,” ಎಂದು ಕೂಡಾ ಕರ್ನಾಟಕ ಕಂದಾಯ ಸಚಿವರು ವಿವರಿಸಿದ್ದಾರೆ.
ನೋಂದಣಿಯ ನಂತರ, ಆಸ್ತಿ ದಾಖಲೆಗಳನ್ನು ಖರೀದಿದಾರರ ಡಿಜಿ-ಲಾಕರ್ಗಳಿಗೆ ಕಳುಹಿಸಲಾಗುತ್ತದೆ. ಜೊತೆಗೆ ಅವರ ಮೊಬೈಲ್ ಫೋನ್ಗಳ ಮೂಲಕ ಅಪ್ಡೇಟ್ಗಳನ್ನು ಕಳುಹಿಸಲಾಗುತ್ತದೆ. “ಪ್ರಸ್ತುತ, ತಾಂತ್ರಿಕ ದೋಷಗಳಿಂದಾಗಿ ಜನರು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಹಲವಾರು ಬಾರಿ ಭೇಟಿ ನೀಡಬೇಕಾಗಿದೆ.
ಹೊಸ ಸಾಫ್ಟ್ವೇರ್ನಿಂದ, ಇದು ಕೇಂದ್ರೀಕೃತ ಅಪ್ಲಿಕೇಶನ್ ಆಗಿರುವುದರಿಂದ ಈ ಸಮಸ್ಯೆಗಳು ಇರುವುದಿಲ್ಲ. ಯಾವುದೇ ಸಮಸ್ಯೆಗಳಿದ್ದರೂ, ಅವುಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಸರಿಪಡಿಸಬಹುದು ಎಂದು ಕಂದಾಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.