ಜೋಕಾಲಿ ತೂಗುವೆ…ನಿದ್ರೆಯ ಮಾಡೆನ್ನ ಕಂದಮ್ಮ ಎಂದರೂ ಮಗು ಮಲಗಲ್ವಾ ? ಹಾಗಾದರೆ ಈ ರೀತಿ ಮಾಡಿ

ಅಮ್ಮನ ಮಮತೆ ಪ್ರೀತಿ, ವಾತ್ಸಲ್ಯದ ನೆರಳಲ್ಲಿ ಕಿಲಕಿಲ ನಗುತ್ತಾ, ಅಂಬೆಗಾಲಿಟ್ಟು ಎಲ್ಲರ ಮನ ಮನೆಯಲ್ಲೂ ಮಂದಹಾಸ ತರುವ ಪುಟ್ಟ ಕಂದಮ್ಮನ ಆರೈಕೆ ಮಾಡುವ ಕಲೆ ಪ್ರತಿ ಜನನಿಗೂ ಕರಗತವಾಗಿರುತ್ತದೆ.

ಪ್ರತಿ ಕ್ಷಣವೂ ಅವರ ಆರೈಕೆಯ ಜೊತೆಗೆ ದಿನ ನಿತ್ಯದ ಚಟುವಟಿಕೆಗಳ ಮೇಲೆ ಗಮನ ವಹಿಸುತ್ತ ಜವಾಬ್ದಾರಿಯನ್ನು ನಿಭಾಯಿಸುವ
ಬಹಳಷ್ಟು ಪೋಷಕರು ತಮ್ಮ ಹಸುಗೂಸನ್ನು ಮಲಗಿಸಲು ಪರದಾಡುವುದನ್ನು ನೋಡಿರಬಹುದು. ಹೀಗಾಗಿ ಪೋಷಕರು ಶಿಶುವಿನ ನಿದ್ರೆಯ ಅಗತ್ಯಗಳ ಬಗ್ಗೆ ಅರಿತುಕೊಳ್ಳುವುದು ತುಂಬಾ ಮುಖ್ಯ. ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಾಕಷ್ಟು ನಿದ್ರೆ ಅಗತ್ಯ. ಒಂದು ವೇಳೆ ನಿದ್ರೆಯಲ್ಲಿ ಕೊರತೆಯಾದರೆ ಅದರಿಂದ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ.

ಸರಿಯಾಗಿ ನಿದ್ರೆ ಮಾಡದಿರುವುದಕ್ಕೆ ಹಲವು ಕಾರಣಗಳು ಇರುತ್ತವೆ. ಹಾಗೆಯೇ ಅದು ಮಗುವಿನ ವಯಸ್ಸನ್ನೂ ಕೂಡ ಅವಲಂಬಿತ ವಾಗಿರುತ್ತದೆ. ಮಗುವಿಗೆ ಮಾತು ಬರುವವರೆಗೂ ಅದು ತನ್ನ ಬಗ್ಗೆ ಹೇಳಿಕೊಳ್ಳಲು ಇರುವ ದಾರಿ ಅಳುವೊಂದೇ. ಹಾಗಾಗಿ, ರಾತ್ರಿ ಸಮಯದಲ್ಲಿ ಅದಕ್ಕೆ ಅಸೌಖ್ಯ ಎನಿಸಿದಾಗ ಅಳುವಿನ ಮೂಲಕ ವ್ಯಕ್ತ ಪಡಿಸುತ್ತದೆ.
ಹೊಟ್ಟೆಯಲ್ಲಿ ಹುಳುಗಳಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ ಇದರಿಂದಲೂ ಮಗುವಿನ ನಿದ್ರೆಗೆ ತೊಂದರೆಯಾಗುತ್ತದೆ. ವಾಸ್ತವದಲ್ಲಿ, ದೇಶದಲ್ಲಿ ಒಂದರಿಂದ ಐದು ವರ್ಷದೊಳಗಿನ ಮಕ್ಕಳ ನಿದ್ರಾಹೀನತೆಗೆ ಇದು ಕೂಡ ಒಂದು ಸಾಮಾನ್ಯ ಕಾರಣ.

ನವಜಾತ ಶಿಶುವು ತಾಯಿಯ ಅಪ್ಪುಗೆಯಲ್ಲಿ ಇರಬೇಕು. ಶಿಶುಗಳು ಬೆಳೆದಂತೆ ನಿದ್ರೆ ಮಾಡುವ ಸಮಯದಲ್ಲಿ ಏನನ್ನಾದರೂ ಗಟ್ಟಿಯಾಗಿ ಅಪ್ಪಿಕೊಂಡಿರುತ್ತವೆ. ಇದು ಮಗುವಿಗೆ ಮನೋವೈಜ್ಞಾನಿಕವಾಗಿ ಭರವಸೆಯನ್ನು ಒದಗಿಸುವ ಒಂದು ಅಭ್ಯಾಸ. ಮಗು ತಾಯಿಯ ಕೈ, ತಲೆದಿಂಬು, ಆಟಿಕೆ ಅಥವಾ ಕಂಬಳಿಯನ್ನು ಹಿಡಿದುಕೊಂಡಿರುತ್ತದೆ.

ವಯಸ್ಕರಂತೆಯೇ, ಶಿಶುಗಳು ಮತ್ತು ಮಕ್ಕಳ ನಿದ್ರೆಯ ಮಾದರಿಗಳು ಬದಲಾಗುತ್ತವೆ. ಹುಟ್ಟಿನಿಂದಲೇ, ಕೆಲವು ಶಿಶುಗಳಿಗೆ ಇತರರಿಗಿಂತ ಹೆಚ್ಚು ಅಥವಾ ಕಡಿಮೆ ನಿದ್ರೆ ಬೇಕಾಗುತ್ತದೆ. ಹಗಲಿನ ನಿದ್ರೆ ಸೇರಿದಂತೆ 24-ಗಂಟೆಗಳ ಅವಧಿಯಲ್ಲಿ ಶಿಶುಗಳು ಮತ್ತು ಮಕ್ಕಳಿಗೆ ಅಗತ್ಯವಿರುವ ಸರಾಸರಿ ನಿದ್ರೆ ಮಾಡಬೇಕು.

ಒಂದು ವರ್ಷ ಕಳೆಯುವ ಹೊತ್ತಿಗೆ ಬಹಳಷ್ಟು ಮಕ್ಕಳು ರಾತ್ರಿ ಪೂರ್ತಿ ನಿದ್ರೆ ಮಾಡುವ ರೂಢಿ ಬೆಳೆಸಿಕೊಳ್ಳುತ್ತವೆ. ಆದರೆ, ಪ್ರತಿ ಶಿಶುವೂ ವಿಶಿಷ್ಟ. ಹಾಗೆಯೇ ಅವುಗಳ ನಿದ್ರೆಯ ಸ್ವರೂಪದಲ್ಲೂ ಗಮನಾರ್ಹ ವ್ಯತ್ಯಾಸಗಳಿರುತ್ತವೆ.

ಹೆಚ್ಚಿನ ನವಜಾತ ಶಿಶುಗಳು ಅವರು ಎಚ್ಚರವಾಗಿರುವುದಕ್ಕಿಂತ ಹೆಚ್ಚು ನಿದ್ರಿಸುತ್ತಾರೆ. ಅವರ ಒಟ್ಟು ದೈನಂದಿನ ನಿದ್ರೆ ಬದಲಾಗುತ್ತದೆ, ಆದರೆ 8 ಗಂಟೆಗಳಿಂದ 16 ಅಥವಾ 18 ಗಂಟೆಗಳವರೆಗೆ ಇರಬಹುದು..

3 ರಿಂದ 6 ತಿಂಗಳ ವಯಸ್ಸಿನಲ್ಲಿ ಕೆಲವು ಮಕ್ಕಳು ರಾತ್ರಿಯಲ್ಲಿ 8 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ನಿದ್ರಿಸುತ್ತಾರೆ. 4 ತಿಂಗಳ ಹೊತ್ತಿಗೆ ಹಗಲಿನಲ್ಲಿ ಮಲಗುವುದಕ್ಕಿಂತ ಎರಡು ಪಟ್ಟು ಹೆಚ್ಚು ರಾತ್ರಿ ಮಲಗುವ ಸಾಧ್ಯತೆ ಇದೆ.

4 ರಿಂದ 5 ವರ್ಷದ ಮಕ್ಕಳಿಗೆ 10 ರಿಂದ 13 ಗಂಟೆ, ಶಾಲೆಗೆ ಹೋಗುವ ಮಕ್ಕಳು ಎಂದರೆ 6 ರಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ ಸುಮಾರು 9 ಗಂಟೆಗಳ ಕಾಲ ನಿದ್ದೆ ಅವಶ್ಯಕವಾಗಿರುತ್ತದೆ.

ಮಗುವನ್ನು ಮಲಗಿಸಲು ಸುಲಭ ವಿಧಾನವೆಂದರೆ ಹಾಡು ಹೇಳುವುದು.ಮಲಗುವ ಮುಂಚೆ ಬೆಚ್ಚಗಿನ ನೀರಿನಲ್ಲಿ ಸ್ನಾನ, ಹಿತಕರ ಮರ್ದನ ಮಾಡಿಸುವುದು ಒಳ್ಳೆಯದು.
ರಾತ್ರಿ ಮಗುವನ್ನು ಮಲಗಿಸುವ ಸಮಯದಲ್ಲಿ ದೀಪಗಳನ್ನು ಆರಿಸಬೇಕು ಮತ್ತು ನಿಶಬ್ಧ ಪಾಲಿಸಬೇಕು.

ಮಲಗುವ ಸಮಯದಲ್ಲಿ ಪ್ರತಿ ದಿನ ಒಂದೇ ವಿಧಾನ ಬಳಸುವು­ದರಿಂದ ಶಿಶು ಬೇಗ ಮತ್ತು ಚೆನ್ನಾಗಿ ನಿದ್ರೆ ಮಾಡುತ್ತದೆ.ಬೆಳಗ್ಗಿನ ಸಮಯದಲ್ಲಿ ಸರಿಯಾದ ಸೂರ್ಯನ ಬೆಳಕು ಮನೆಯೊಳಗೆ ಬೀಳುವಂತೆ ನೋಡಿಕೊಳ್ಳಬೇಕು.

Leave A Reply

Your email address will not be published.