ಮಗನನ್ನು ಉಳಿಸಲು ವ್ಯಾಘ್ರದ ಜೊತೆ ಹೋರಾಡಿದ ಮಹಾತಾಯಿ | ಆಕೆ ಕಾಪಾಡಿದ್ದೆ ರೋಚಕ!
ತನ್ನ ಮಕ್ಕಳಿಗೆ ತಾಯಿಯೇ ಶ್ರೀ ರಕ್ಷೆ. ಅದೆಂತಹ ಕಠಿಣ ಪರಿಸ್ಥಿತಿಯಿಂದಲೂ ಆಕೆ ತನ್ನ ಕರುಳಬಳ್ಳಿಯನ್ನು ರಕ್ಷಿಸುತ್ತಾಳೆ. ಅಂತಹದ್ದೇ ಘಟನೆ ಇಲ್ಲೊಂದು ಕಡೆ ನಡೆದಿದ್ದು, ವ್ಯಾಘ್ರನ ಬಾಯಿಯಿಂದ ತನ್ನ ಮಗುವನ್ನು ರಕ್ಷಿಸಿರುವ ಘಟನೆ ನಡೆದಿದೆ.
ಹೌದು. ಹುಲಿಗೆ ಆಹಾರವಾಗುತ್ತಿದ್ದ ಮಗನನ್ನು ಕಾಪಾಡಿಕೊಳ್ಳಲು ಹುಲಿಯ ಜೊತೆ ದಿಟ್ಟ ಮಹಿಳೆಯೋರ್ವರು ಹೋರಾಟ ನಡೆಸಿ, ಮಗುವನ್ನು ರಕ್ಷಿಸಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಬಾಂಧವಗಢ ಹುಲಿ ಸಂರಕ್ಷಿತಾರಣ್ಯದ ಬಳಿಯ ರೋಹನಿಯಾ ಗ್ರಾಮದಲ್ಲಿ ಈ ವಾರದ ಆರಂಭದಲ್ಲಿ ನಡೆದಿದೆ.
ಮಹಿಳೆಯು ತೋಟದಲ್ಲಿ ತನ್ನ ಒಂದೂವರೆ ವರ್ಷದ ಮಗುವನ್ನು ನೋಡಿಕೊಳ್ಳುತ್ತಿದ್ದಾಗ ಹುಲಿ ದಾಳಿ ಮಾಡಿದೆ. ಆದರೆ, ಮಹಿಳೆಯ ಬಳಿ ಯಾವುದೇ ಆಯುಧ ಇರಲಿಲ್ಲ. ಆದರೂ ತನ್ನ ಮಗುವಿನ ಮೇಲೆ ಹುಲಿ ದಾಳಿ ನಡೆಸದಂತೆ ತಡೆಯಲು ಸಾಧ್ಯವಾದಷ್ಟು ಪ್ರಯತ್ನಪಟ್ಟ ಮಹಿಳೆ, ಬಳಿಕ ನೆರವಿಗಾಗಿ ಕೂಗಿಕೊಳ್ಳುತ್ತಿದ್ದಳು. ಕೊನೆಗೆ ಗ್ರಾಮಸ್ಥರು ಓಡಿಬಂದಾಗ ಜನರ ಗುಂಪು ನೋಡಿದ ಹುಲಿ ಅಲ್ಲಿಂದ ಓಡಿ ಹೋಗಿದೆ.
ಈ ಬಗ್ಗೆ ಮಾತನಾಡಿದ ಮಹಿಳೆಯ ಪತಿ ಭೋಲಾ ಚೌಧರಿ ಮಾತನಾಡಿ , ಮಗುವನ್ನು ತೋಟಕ್ಕೆ ಕರೆದೊಯ್ದಾಗ ಹುಲಿ ದಾಳಿ ಮಾಡಿದೆ. ಹುಲಿ ಹೊರಗಡೆ ಅಡ್ಡಾಡುತ್ತಿದೆ ಎಂಬುದರ ಅರಿವು ಆಕೆಗೆ ಇರಲಿಲ್ಲ. ಹುಲಿ ಅಡಗಿದ್ದ ಜಮೀನಿಗೆ ಮಗುವನ್ನು ಕರೆದುಕೊಂಡು ಹೋದಳು. ಅದು ಅವಳ ಮೇಲೆ ದಾಳಿ ಮಾಡಿತು ಮತ್ತು ಅವಳು ತೀವ್ರವಾಗಿ ಗಾಯಗೊಂಡಳು ಎಂದು ತಿಳಿಸಿದ್ದಾರೆ.
ಹುಲಿಯು ಸಂರಕ್ಷಿತಾರಣ್ಯದ ಹೊರ ಭಾಗದಲ್ಲಿ ಅಡ್ಡಾಡುತ್ತಿದೆ ಎಂದು ನಾನು ಸೂಚನೆ ನೀಡಿದ್ದೆವು. ಆದರೂ ಜನರು ಹುಲಿಯನ್ನು ನೋಡಲು ಹೊರಗಡೆ ಬಂದಿದ್ದರು. ಆದರೆ, ಮಹಿಳೆಗೆ ಹುಲಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇಬ್ಬರ ಮೇಲೆಯು ಹುಲಿ ದಾಳಿ ಮಾಡಿತು. ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಜಬಲ್ಪುರ್ ಮೆಡಿಕಲ್ ಕಾಲೇಜಿಗೆ ಸ್ಥಳಾಂತರ ಮಾಡಲಾಯಿತು. ಮಗ ಮತ್ತು ತಾಯಿ ಗಾಯಗೊಂಡಿದ್ದು, ಸದ್ಯ ಅಮ್ಮ-ಮಗನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಬಾಂಧವಗಢ ಹುಲಿ ಸಂರಕ್ಷಿತಾರಣ್ಯದ ಮ್ಯಾನೇಜರ್ ಲಾವಿತ್ ಭಾರತಿ ಅವರು ಮಾಹಿತಿ ನೀಡಿದ್ದಾರೆ.