ಕರಾವಳಿ ಸೊಗಡನ್ನು ಎತ್ತಿ ತೋರಿಸಿ, ಭಾರೀ ಸದ್ದು ಮಾಡುತ್ತಿದೆ ‘ ಕಾಂತಾರಾ’ ಟ್ರೈಲರ್ !!!

ರಿಷಬ್ ಶೆಟ್ಟಿ ಈ ಬಾರಿ ಹೊಸ ಗೆಟಪ್ ನಲ್ಲಿ ಹೊಸ ಅವತಾರದಲ್ಲಿ ಜನರನ್ನು ಮೆಚ್ಚಿಸಲು ಬಂದಿದ್ದಾರೆ ಅಂತಾನೇ ಹೇಳಬಹುದು. ಇದಕ್ಕೆ ಕಾರಣ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾದ ಟ್ರೈಲರ್. ನಿಜಕ್ಕೂ ಇದರಲ್ಲಿ ಕರಾವಳಿಗರ ಸೊಗಡೇ ತುಂಬಿ ತುಳುಕುತ್ತಿದೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ ಎಂದರೆ ತಪ್ಪಾಗಲಾರದು. ಟ್ರೈಲರ್ ತುಂಬಾ ಕರಾವಳಿ ಸೊಗಡೇ ತುಂಬಿಕೊಂಡಿದ್ದು, ಕಾಡು ಮತ್ತು ನಾಡು ಜನರ ಸಂಘರ್ಷವೇ ಸಿನಿಮಾದ ಕಥಾಹಂದರ ಎನ್ನುವುದು ಗೊತ್ತಾಗುತ್ತದೆ.

ಕರಾವಳಿ ಮೂಲದ ಜನಸಾಮಾನ್ಯರ ಒಂದು ಭಾಗವೇ ಆಗಿರುವ ಕಾಡು, ಭೂತಕೋಲ, ಕಂಬಳ ಕ್ರೀಡೆ, ಹಲವು ಸಂಪ್ರದಾಯಗಳು, ಆಚಾರ ವಿಚಾರಗಳನ್ನು ಟ್ರೈಲರ್ ನಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಕಾಂತಾರಾ ಚಿತ್ರದ ಹಾಡು ನೋಡಿ ಮೆಚ್ಚಿಕೊಂಡಿದ್ದ ಸಿನಿ ರಸಿಕರು ಇದೀಗ ಟ್ರೈಲರ್ ನೋಡಿ ಮತ್ತಷ್ಟು ಉತ್ಸುಕರಾಗಿದ್ದಾರೆ.

ಟ್ರೈಲರ್ ನಲ್ಲಿ ಕಿಶೋರ್ ಅರಣ್ಯಾಧಿಕಾರಿಯಾಗಿ ಕಾಣಿಸಿಕೊಂಡಿದ್ದು ರಿಷಬ್ ಶೆಟ್ಟಿ ನಾನಾ ಅವತಾರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅರಣ್ಯ ಉತ್ಪನ್ನಗಳ ಕಳುವು ಸೇರಿದಂತೆ ಹತ್ತು ಹಲವು ವಿಚಾರಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕಾಂತಾರಾ ಸಿನಿಮಾದ ಟ್ರೈಲರ್ ಬಗ್ಗೆ ಹಲವು ರೀತಿಯಲ್ಲಿ ನೋಡುಗರು ಪ್ರತಿಕ್ರಿಯಿಸಿದ್ದು, ಹಿನ್ನೆಲೆ ಸಂಗೀತದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ. ರಿಷಭ್ ಅವರ ಹಿಂದಿನ ಸಿನಿಮಾಗಳಿಗಿಂತಲೂ ಇದು ಹೆಚ್ಚು ಕುತೂಹಲ ಮೂಡಿಸಿದೆ ಎಂದಿದ್ದಾರೆ ಕೆಲವರು.

ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಕಾಂತಾರಾ ಸಿನಿಮಾದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Leave A Reply