ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಎನ್‌ಐಎ ದಾಳಿಯಲ್ಲಿ ಪತ್ತೆಯಾದ ಡಿಜಿಟಲ್ ಸಾಧನಗಳು, ಬಳಸಿದ ಮದ್ದುಗುಂಡುಗಳು, ಸುಧಾರಿತ ಶಸ್ತ್ರಾಸ್ತ್ರಗಳು !

Share the Article

    ಪುತ್ತೂರು :  ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯವ ಮುಖಂಡನ  ಹತ್ಯೆ ಪ್ರಕರಣದ ತನಿಖೆಗೆ ಇಳಿದಿರುವ ರಾಷ್ಟ್ರೀಯ  ತನಿಖಾ ದಳ ಅಧಿಕಾರಿಗಳು ಸೆ.6ರಂದು ಬೆಳ್ಳಂಬೆಳಗ್ಗೆ ಪುತ್ತೂರು, ಉಪ್ಪಿನಂಗಡಿ, ಕಬಕ ಮತ್ತು ಸುಳ್ಯದ ಹಲವು ಕಡೆಗಳಿಗೆ ದಾಳಿ ನಡೆಸಿದ್ದು ಸುಮಾರು ನೂರಕ್ಕೂ ಅಧಿಕ ವಾಹನಗಳಲ್ಲಿ ತನಿಖಾ ದಳದ ಅಧಿಕಾರಿಗಳು ಗುಪ್ತವಾಗಿ ಆಗಮಿಸಿದ್ದು ವಿವಿದೆಡೆ ಶಂಕಿತರಿಗೆ ಬಲೆ ಬೀಸಿದ್ದಾರೆ. ಈಗಾಗಲೇ ಪ್ರವೀಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹತ್ತು ಮಂದಿಯನ್ನು ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ.

    ಪ್ರವೀಣ್ ನೆಟ್ಟಾರು (RC-36/2022/NIA/DLI)  ಹತ್ಯೆಗೆ ಸಂಬಂಧಿಸಿದಂತೆ ಎನ್ಐಎ ಕರ್ನಾಟಕದ ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೂವತ್ಮೂರು (33) ಸ್ಥಳಗಳಲ್ಲಿ ಶೋಧ ನಡೆಸಿದೆ.

    ತನಿಖೆಯ ಅಂಗವಾಗಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸಕ್ರಿಯ ಸದಸ್ಯರಾಗಿರುವ ಆರೋಪಿಗಳು ಸಮಾಜದ ಒಂದು ವರ್ಗದ ಸದಸ್ಯರಲ್ಲಿ ಭಯೋತ್ಪಾದನೆಯನ್ನು ಉಂಟುಮಾಡುವ ದೊಡ್ಡ ಪಿತೂರಿಯ ಭಾಗವಾಗಿ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಯೋಜಿಸಿದ್ದಾರೆ ಮತ್ತು ಮಾಡಿದ್ದಾರೆ ಎಂದು ತನಿಖೆಗಳು ಬಹಿರಂಗಪಡಿಸಿವೆ.

    ಅಷ್ಟು ಮಾತ್ರವಲ್ಲದೇ, ಆರೋಪಿಗಳು ಮತ್ತು ಶಂಕಿತರ ಆವರಣದಲ್ಲಿ ನಿನ್ನೆ ನಡೆಸಿದ ಶೋಧಗಳಲ್ಲಿ, ಡಿಜಿಟಲ್ ಸಾಧನಗಳು, ಬಳಸಿದ ಮದ್ದುಗುಂಡುಗಳು, ಸುಧಾರಿತ ಶಸ್ತ್ರಾಸ್ತ್ರಗಳು, ನಗದು, ದೋಷಾರೋಪಣೆ ದಾಖಲೆಗಳು, ಕರಪತ್ರಗಳು ಮತ್ತು ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ.

    ಎನ್.ಐ.ಎ ದಾಳಿಯಲ್ಲಿ ಕೆಲವೊಂದು ಕರಪತ್ರಗಳು ,ಪುಸ್ತಕಗಳು, ಲ್ಯಾಪ್ ಟ್ಯಾಪ್, ಹಾರ್ಡ್ ಡಿಸ್ಕ್ ಸೇರಿದಂತೆ ಕೆಲವೊಂದು ಗೌಪ್ಯ ಮಾಹಿತಿಗಳು ಪತ್ತೆಯಾಗಿದೆ. ಅದನ್ನು ತನಿಖೆಗಾಗಿ ವಶಪಡಿಸಿಕೊಂಡಿದ್ದಾರೆ. ಬಳಿಕ ಕೆಲವು ಶಂಕಿತ ವ್ಯಕ್ತಿಗಳನ್ನು ಪುತ್ತೂರು ನಿರೀಕ್ಷಣಾ ಮಂದಿರ(IB) ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವಾಹನದಲ್ಲಿ ಕೆಲವರನ್ನು ಕರೆತಂದು ವಿಚಾರಣೆಗೆ ಒಳಪಡಿಸಿದ್ದು ನಂತರ ಎನ್.ಐ.ಎ ಅಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡಿ ಕಳುಹಿಸಿದ್ದಾರೆ. ಇನ್ನೂ ದಾಳಿಯ ಸಂಪೂರ್ಣ ಮಾಹಿತಿಯನ್ನು ಎನ್.ಐ.ಎ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಿದ್ದಾರೆ.

    ನಿನ್ನೆ ಸಂಜೆ 7:30 ಗಂಟೆಗೆ ಎಲ್ಲಾ ಕಡೆಯ ಕಾರ್ಯಚರಣೆಯನ್ನು ಮುಕ್ತಾಯಗೊಳಿಸಿ ಎನ್.ಐ.ಎ ತಂಡದ ಅಧಿಕಾರಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ವಾಪಸ್ ಹೋಗಿದ್ದಾರೆ.

    Leave A Reply

    Your email address will not be published.