ಪೈಲಟ್‍ಗಳ ಮುಷ್ಕರದಿಂದ 800 ವಿಮಾನ ಸಂಚಾರ ರದ್ದು ; ಪ್ರಯಾಣಿಕರಿಂದ ಆಕ್ರೋಶ
ವೇತನ ಹೆಚ್ಚಳ ಕುರಿತಂತೆ ಪೈಲಟ್‍ಗಳು ಮುಷ್ಕರ ನಡೆಸುತ್ತಿದ್ದು, ಇದರಿಂದಾಗಿ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಜನಜಂಗುಳಿಯಿಂದ ತುಂಬಿ ಹೋಗಿದೆ.
ಪೈಲೆಟ್‍ಗಳ ವೇತನ ಹೆಚ್ಚಳ ಕುರಿತಂತೆ ಒಂದು ದಿನದಿಂದ ಮುಷ್ಕರ ನಡೆಸಲಾಗುತ್ತಿದ್ದು, ಲುಫ್ತಾನ್ಸಾ ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ನೂರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಐಜಿಐ ವಿಮಾನ ನಿಲ್ದಾಣದ ಟಿ3 ಟರ್ಮಿನಲ್‌ನಲ್ಲಿ ಸುಮಾರು 700 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ದೆಹಲಿಯಿಂದ ಲುಫ್ಥಾನ್ಸ ವಿಮಾನಯಾನ ಸಂಸ್ಥೆಯು ಫ್ರಾಂಕ್‌ಫರ್ಟ್ ಮತ್ತು ಮ್ಯೂನಿಚ್‌ಗೆ ಎರಡು ವಿಮಾನಗಳು ಹೊರಡಬೇಕಿತ್ತು. ಮಧ್ಯರಾತ್ರಿ 12.15ಕ್ಕೆ ವಿಮಾನ ಹಾರಾಟ ರದ್ದಾಗಿರುವುದಾಗಿ ಮಾಹಿತಿ ಬಂದಿದೆ. ದಿಢೀರನೆ ವಿಮಾನ ರದ್ದಾಗಿದ್ದರಿಂದ ಕಂಗಾಲಾದ ಪ್ರಯಾಣಿಕರು ಡಿಪಾರ್ಚರ್ ಗೇಟ್ ಎದುರು ಜಮಾಯಿಸಿದ್ದರು.
ವಿಮಾನಯಾನವನ್ನು ರದ್ದುಗೊಳಿಸಿರುವುದರಿಂದ ಪ್ರಯಾಣಿಕರು ತಮ್ಮ ವಿಮಾನ ದರವನ್ನು ಮರುಪಾವತಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ವಿಮಾನ ನಿಲ್ದಾಣದಲ್ಲಿರುವ ಪ್ರಯಣಿಕರನ್ನು ದೆಹಲಿ ಪೊಲೀಸರು ಮತ್ತು ಸಿಐಎಸ್‍ಎಫ್ ಅಧಿಕಾರಿಗಳು ಸಮಾಧಾನಪಡಿಸಿ, ಏರ್‍ಲೈನ್ ಕಂಪನಿಯಿಂದ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಫ್ರಾಂಕ್‍ಫರ್ಟ್ ಮತ್ತು ಮ್ಯೂನಿಚ್‍ಗೆ ತೆರಳುತ್ತಿದ್ದ ಪ್ರಯಾಣಿಕರು ನಿರ್ಗಮನ ಗೇಟ್ಸ್ ಸಂಖ್ಯೆ 6 ಮತ್ತು 7 ರಲ್ಲಿ ಚೆಕ್-ಇನ್ ಪ್ರದೇಶದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು, ಅವರಲ್ಲಿ ಕೆಲವರು ಟರ್ಮಿನಲ್‍ನಿಂದ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ತಕ್ಷಣವೇ ಸಿಐಎಫ್ ಸಿಬ್ಬಂದಿ ಮತ್ತು ದೆಹಲಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು.
ಯಾವುದೇ ಪೂರ್ವ ಸೂಚನೆಯಿಲ್ಲದೆ ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ಪ್ರಯಾಣಿಕರು ಮತ್ತವರ ಸಂಬಂಧಿಕರು ಆಕ್ರೋಶಗೊಂಡಿದ್ದರು. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಐಜಿಐ ವಿಮಾನ ನಿಲ್ದಾಣದ ಡಿಸಿಪಿ ತನು ಶರ್ಮಾ ತಿಳಿಸಿದ್ದಾರೆ. ಲುಫ್ಥಾನ್ಸ ವಿಮಾನದ ಮೂಲಕ ಪ್ರಯಾಣಿಸಬೇಕಿದ್ದವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು.
ಸೆಪ್ಟೆಂಬರ್ 2 ರಂದು ಲುಫ್ತಾನ್ಸಾ 800 ವಿಮಾನಯಾನಗಳನ್ನು ರದ್ದುಗೊಳಿಸಿದ್ದು, ಇದರಿಂದ ಸುಮಾರು 1 ಲಕ್ಷ 30 ಸಾವಿರ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿದೆ. ಪೈಲಟ್‍ಗಳ ವೇತನವನ್ನು ಪ್ರತಿ ತಿಂಗಳಿಗೆ 900 ಯೂರೋ ಹೆಚ್ಚಿಸುವ ಅತ್ಯುತ್ತಮ ಪ್ರಸ್ತಾವನೆಯನ್ನು ಕಂಪನಿ ಮುಂದಿಟ್ಟಿತ್ತು. ಆದರೂ ಈ ಆಫರ್ ಒಪ್ಪಿಕೊಳ್ಳದ ಪೈಲಟ್‍ಗಳ ಕ್ರಮದ ಬಗ್ಗೆ ಕಂಪನಿ ವಿಷಾದ ವ್ಯಕ್ತಪಡಿಸಿದೆ. ಈ ವರ್ಷಾಂತ್ಯಕ್ಕೆ ಶೇ 5.5 ರಷ್ಟು ವೇತನ ಹೆಚ್ಚಳ, ಹಣದುಬ್ಬರಕ್ಕೆ ಪರಿಹಾರ, ಸ್ಯಾಲರಿ ಗ್ರಿಡ್ ಹೊಂದಾಣಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಪೈಲಟ್‍ಗಳು ಮುಷ್ಕರ ನಡೆಸುತ್ತಿದ್ದಾರೆ. ಇದೀಗ ಇದರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.