Migraine: ಮಾರಕ ಮೈಗ್ರೇನ್ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಕಾಯಕವೆ ಕೈಲಾಸ ಎಂದು ದುಡಿಯುತ್ತಿದ್ದ ನಮ್ಮ ಹಿರಿಯರು ಈಗಲೂ ಸದೃಢ ವಾಗಿ ಆರೋಗ್ಯದಿಂದ ಓಡಾಡುವುದನ್ನು ನಾವು ಗಮನಿಸಬಹುದು. ಆದರೆ ಈಗಿನ ಬದಲಾಗಿರುವ ಆಹಾರ ಕ್ರಮ, ಓಡಾಟ, ಒತ್ತಡಯುತ ಜೀವನಶೈಲಿಯಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ ಸಂಗತಿಯಾಗಿದೆ. ತಲೆನೋವು ಬಂದಾಗ ಪ್ಯಾರಾ ಸಿಟಾಮಲ್ ಮಾತ್ರೆ ನುಂಗಿ ಆ ಕ್ಷಣ ನೋವು ನಿವಾರಣೆಯಾದರೇ ಸಾಕೆಂದು ನಿರ್ಲಕ್ಷ್ಯ ಧೋರಣೆಯಿಂದ ಖಾಯಿಲೆ ಉಲ್ಬಣಗೊಂಡು ಪದೇ ಪದೇ ತಲೆ ನೋವು ಕಾಣಿಸಿಕೊಂಡಾಗ ವೈದ್ಯರನ್ನು ಭೇಟಿಯಾಗುವುದು ಸರ್ವೇ ಸಾಮಾನ್ಯ.

ಈ ರೀತಿಯ ತಲೆನೋವಿನಲ್ಲಿ ಮೈಗ್ರೇನ್ ಕೂಡ ಒಂದು. ಇದೊಂದು ನರ ವೈಜ್ಞಾನಿಕ ರೋಗ ಲಕ್ಷಣ ವಾಗಿದ್ದು, ದೈಹಿಕ ಗ್ರಹಿಕೆಯಲ್ಲಿ ವ್ಯತ್ಯಾಸ , ವಾಕರಿಕೆ, ವಿಪರೀತ ತಲೆ ನೋವು ಕಾಣಿಸಿಕೊಳ್ಳುತ್ತದೆ.
ಮೈಗ್ರೇನ್ ಗಂಭೀರ ತಲೆನೋವಾಗಿದ್ದು, ತಲೆಯ ಒಂದು ಬದಿ, ನಟ್ಟ ನಡುವೆ, ತಲೆಯ ಹಿಂಭಾಗ ಆವರಿಸುತ್ತದೆ. ಕೆಲವೊಮ್ಮೆ ತಲೆಯ ಎರಡು ಬದಿಯಲ್ಲಿ ಆವರಿಸುವುದುಂಟು. ಮೈಗ್ರೇನ್ ತೀವ್ರವಾದ ತಲೆನೋವಾಗಿದ್ದು ಚೂರಿ ಇರಿತದ ರೀತಿಯ ಅನುಭವವನ್ನು ಉಂಟುಮಾಡುತ್ತದೆ. ಇದು ಕೆಲವು ಗಂಟೆಗಳಿಂದ ಹಿಡಿದು ಮೂರು ದಿನಗಳವರೆಗೆ ಇರುತ್ತದೆ. ತಲೆನೋವಿನ ಜೊತೆಗೆ ಹೊಟ್ಟೆ ನೋವು, ವಾಕರಿಕೆ ಬಂದಂತೆ ವಾಂತಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಸಾಮಾನ್ಯ ತಲೆ ನೋವಿನಂತೆ ಪ್ರಾರಂಭ ವಾಗುವ
ನೋವು ಇಡೀ ತಲೆಯನ್ನು ಆವರಿಸುತ್ತದೆ.

ಇದರ ರೋಗಲಕ್ಷಣಗಳನ್ನು ಔಷಧಿಗಳು ಮತ್ತು ಕೆಲವು ರೀತಿಯ ಆಹಾರಗಳ ಸಹಾಯದಿಂದ ಗುಣಪಡಿಸಬಹುದು. ಇದಲ್ಲದೆ, ನೋವಿನಿಂದ ಪರಿಹಾರವನ್ನು ನೀಡುವ ಕೆಲವು ಆಯುರ್ವೇದ ಪರಿಹಾರಗಳೂ ಇವೆ.

ಶುಂಠಿ : ನಾವು ಪ್ರತಿ ದಿನ ನಮ್ಮ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುವ ಒಂದು ಅಡುಗೆ ಪದಾರ್ಥವೇ ಆಗಿದ್ದರೂ ಆಯುರ್ವೇದದಲ್ಲಿ ಇದಕ್ಕೆ ವಿಶೇಷವಾದ ಸ್ಥಾನಮಾನವಿದೆ. ಏಕೆಂದರೆ ಹಲವಾರು ಆರೋಗ್ಯ ಸಮಸ್ಯೆಗಳ ಪರಿಹಾರ ಮಾಡುವಲ್ಲಿ ಔಷಧಿ ತಯಾರಿಕೆ ಪ್ರಕ್ರಿಯೆಯಲ್ಲಿ ಜೊತೆಗೆ ಕೆಮ್ಮು, ಶೀತ, ಅಸಿಡಿಟಿಯಾದಾಗ ಶುಂಠಿಯನ್ನು ಉಪಯೋಗಿಸುವುದು ಎಲ್ಲರಿಗೂ ತಿಳಿದಿದೆ. ಸ್ವಲ್ಪ ಶುಂಠಿ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದರ ಜೊತೆಗೆ ಶುಂಠಿ ಚಹಾ ಕೂಡ ಸೇವನೆ ಮಾಡಬಹುದು.

ಬೆಳಿಗ್ಗೆ ಗಿಡಮೂಲಿಕೆಯ ಚಹಾವನ್ನು ಕುಡಿಯಬಹುದು ಮತ್ತು ನಂತರ 10-15 ನೆನೆಸಿದ ಒಣದ್ರಾಕ್ಷಿಗಳನ್ನು ತಿನ್ನಬಹುದು. ಇದು ಮೈಗ್ರೇನ್ ರೋಗಲಕ್ಷಣಗಳಿಗೆ ತಕ್ಷಣದ ಪರಿಹಾರವನ್ನು ಒದಗಿಸುತ್ತದೆ. ಇದನ್ನು 3-4 ತಿಂಗಳುಗಳ ಕಾಲ ನಿರಂತರವಾಗಿ ಕುಡಿಯುವುದರಿಂದ ಅಸಿಡಿಟಿ, ವಾಕರಿಕೆ, ತಲೆನೋವು, ಶಾಖ ಅಸಹಿಷ್ಣುತೆಯ ಲಕ್ಷಣಗಳನ್ನು ನಿವಾರಿಸುತ್ತದೆ.

ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟದ ನಂತರ ಅಥವಾ ಮೈಗ್ರೇನ್ ರೋಗಲಕ್ಷಣಗಳು ಕಂಡುಬಂದಾಗ ಜೀರಿಗೆ ಮತ್ತು ಏಲಕ್ಕಿ ಬಳಸಿದ ಚಹಾವನ್ನು ಕುಡಿಯಬಹುದು. ಇದನ್ನು ತಯಾರಿಸುವುದು ತುಂಬಾ ಸುಲಭ. ಅರ್ಧ ಲೋಟ ನೀರಿಗೆ ಒಂದು ಟೀ ಚಮಚ ಜೀರಿಗೆ, ಒಂದು ಏಲಕ್ಕಿಯನ್ನು ಸೇರಿಸಿ 3 ನಿಮಿಷಗಳ ಕಾಲ ಕುದಿಸಿ. ನಂತರ ಅದನ್ನು ಸೋಸಿ ಕುಡಿಯಿರಿ. ಈ ಗಿಡಮೂಲಿಕೆ ಚಹಾವು ವಾಕರಿಕೆ ಮತ್ತು ಒತ್ತಡವನ್ನು ನಿವಾರಿಸಲು ಸಹ ಕೆಲಸ ಮಾಡುತ್ತದೆ. ರಾತ್ರಿ ಮಲಗುವ ಮೊದಲು ಕುಡಿಯಬಹುದು.

ಹಸುವಿನ ತುಪ್ಪ – ದೇಹ ಮತ್ತು ತಲೆಯಲ್ಲಿನ ಹೆಚ್ಚುವರಿ ಪಿತ್ತವನ್ನು ಸಮತೋಲನಗೊಳಿಸಲು ಹಸುವಿನ ತುಪ್ಪಕ್ಕಿಂತ ಉತ್ತಮವಾದುದು ಬೇರೊಂದಿಲ್ಲ. ತುಪ್ಪವನ್ನು ಅನೇಕ ರೀತಿಯಲ್ಲಿ ಬಳಸಬಹುದು. ತರಕಾರಿಗಳನ್ನು ಚಪಾತಿಗಳಲ್ಲಿ ಬೇಯಿಸಬಹುದು, ಅನ್ನದೊಂದಿಗೆ ಬೆರೆಸಿ ಅಥವಾ ತುಪ್ಪದಲ್ಲಿಯೇ ಬೇಯಿಸಬಹುದು. ತುಪ್ಪವನ್ನು ರಾತ್ರಿ ಮಲಗುವ ಮೊದಲು ಹಾಲಿನೊಂದಿಗೆ ಸೇವಿಸಬಹುದು.
ಬ್ರಾಹ್ಮಿ, ಶಂಖ ಪುಷ್ಪಿ, ಯಸ್ತಿಮಧು ಮುಂತಾದ ಕೆಲವು ಗಿಡಮೂಲಿಕೆಗಳನ್ನು ತುಪ್ಪದೊಂದಿಗೆ ಸೇವಿಸುವುದರಿಂದ ಮೈಗ್ರೇನ್ ಗೆ ಪರಿಹಾರ ವಾಗುತ್ತದೆ.

ತಲೆ ನೋವಿನ ಸಮಸ್ಯೆ ನಿವಾರಣೆಗೆ ಬಳಕೆಗೆ ಐಸ್ ಪ್ಯಾಕ್ ಅಥವಾ ಕೋಲ್ಡ್ ಪ್ಯಾಕ್ ಬಳಕೆ ಮಾಡಬಹುದು. ಒಂದು ಶುದ್ಧವಾದ ಹತ್ತಿ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಅದ್ದಿ ಹಣೆಯ ಮೇಲ್ಭಾಗದಲ್ಲಿ ಸ್ವಲ್ಪ ಹೊತ್ತು ಇಟ್ಟುಕೊಳ್ಳಬಹುದು. ಇಲ್ಲವೆಂದರೆ ಕಣ್ಣು ಮುಚ್ಚಿ ಅಂಗಾತ ಮಲಗಿ ಐಸ್ ಬ್ಯಾಗ್ ಅನ್ನು ಹಣೆಯ ಮೇಲ್ಭಾಗದಲ್ಲಿ ಇಟ್ಟುಕೊಂಡು ಸ್ವಲ್ಪ ಹೊತ್ತು ಕಳೆದರೆ ತಲೆನೋವಿನಿಂದ ಮುಕ್ತಿ ಹೊಂದಬಹುದು.

ಈ ಕೋಲ್ಡ್ ಕಂಪ್ರೆಸ್ಸಿಂಗ್ ವಿಧಾನವನ್ನು ಹಣೆಯ ಮೇಲೆ ಸುಮಾರು 15 ರಿಂದ 20 ನಿಮಿಷಗಳು ಮಾಡುವುದು ಒಳ್ಳೆಯದು. ಒಂದು ವೇಳೆ ಐಸ್ ಬ್ಯಾಗ್ ಲಭ್ಯವಾದರೆ ಅದರಲ್ಲಿ ಕೆಲವು ಐಸ್ ಕ್ಯೂಬ್ ಗಳನ್ನು ಹಾಕಿ ಒಂದು ಪೇಪರ್ ಟವೆಲ್ ನಲ್ಲಿ ಸುತ್ತಿ ಹಣೆಯ ಮೇಲ್ಭಾಗದಲ್ಲಿ ಇಟ್ಟುಕೊಳ್ಳಬಹುದು.

ಎಲ್ಲರಿಗೂ ತಿಳಿದಿರುವ ಹಾಗೆ ಯೋಗಾಭ್ಯಾಸ ಮಾಡುವವರು ತುಂಬಾ ಆರೋಗ್ಯದಿಂದ ಕೂಡಿರುತ್ತಾರೆ. ಯೋಗ ಮಾಡುವುದರಿಂದ ಮನುಷ್ಯನ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಬಹುದು. ಮೈಗ್ರೇನ್ ಸಮಸ್ಯೆಯನ್ನು ಯೋಗದ ಭಂಗಿಗಳು ಪರಿಹರಿಸುತ್ತವೆ. ಪ್ರಮುಖವಾಗಿ ಮಾಡಲಾಗುವ ಬ್ರಾಹ್ಮರಿ ಪ್ರಾಣಾಯಾಮ ತಲೆ ನೋವು ಮತ್ತು ಮೈಗ್ರೇನ್ ಸಮಸ್ಯೆಗೆ ಪರಿಣಾಮಕಾರಿ ಯೋಗಾಭ್ಯಾಸ ಎಂದು ಹೇಳುತ್ತಾರೆ. ಮಾಂಸ – ಖಂಡಗಳ ಸೆಳೆತ ಕಡಿಮೆ ಮಾಡುವುದರಿಂದ ಹಿಡಿದು ತಲೆ ನೋವಿನ ಸಮಸ್ಯೆ ನಿವಾರಣೆಯಲ್ಲಿ ಯೋಗಾಭ್ಯಾಸದ ಭಂಗಿಗಳು ಕೆಲಸ ಮಾಡುತ್ತವೆ.

ಬೆಳಗಿನ ಸಮಯದಲ್ಲಿ ಹೆಚ್ಚಾಗಿ ತಲೆ ನೋವು ಕಂಡು ಬರುತ್ತಿದ್ದರೆ ಅದು ಬೆಳಕಿನ ಪ್ರಭಾವದಿಂದ ಎಂದು ತಿಳಿದುಕೊಳ್ಳಬಹುದು. ಹಾಗಾಗಿ ಮನೆಯಲ್ಲಿರುವ ತುಂಬಾ ಗಾಢವಾದ ಬೆಳಕು ಬೀರುವ ಲೈಟ್ ಗಳನ್ನು ಆರಿಸಿ ಮತ್ತು ಹೆಚ್ಚು ಶಬ್ದ ಬೀರುವ ಟೇಪ್ ರೆಕಾರ್ಡರ್ ಮತ್ತು ಟಿವಿ ಸ್ವಿಚ್ ಆಫ್ ಮಾಡಿ ಬೆಳಕಿಗೆ ಮತ್ತು ಶಬ್ದಕ್ಕೆ ಹೆಚ್ಚು ಸೂಕ್ಷ್ಮತೆಯನ್ನು ಹೊಂದಿರುವ ಜನರಿಗೆ ಮೈಗ್ರೇನ್ ಸಮಸ್ಯೆ ಹೆಚ್ಚಾಗಿ ಕಂಡು ಬರಬಹುದು. ಮನಸ್ಸನ್ನು ವಿಶ್ರಾಂತವಾಗಿರಿಸಿ ಶಬ್ದವಿಲ್ಲದ ಸ್ಥಳದಲ್ಲಿ ಕೆಲ ಸಮಯ ಕಳೆದರೆ ಮನಸ್ಸಿಗೆ ನೆಮ್ಮದಿ ದೊರೆಯುವುದು ಅಲ್ಲದೇ ಒತ್ತಡ ಕೂಡ ಕಡಿಮೆಯಾಗುತ್ತದೆ.

ತಲೆ ನೋವಿಗೆ ಇನ್ನೊಂದು ಪ್ರಮುಖ ಕಾರಣ ಎಂದರೆ ಅದು ಅತಿಯಾಗಿ ನಾವು ಯಾವುದಾದರೂ ವಿಷಯಕ್ಕೆ ತಲೆ ಕೆಡಿಸಿಕೊಂಡು ಮಾನಸಿಕವಾಗಿ ಒತ್ತಡ ತಂದುಕೊಳ್ಳುವುದು ಇದು ಮೈಗ್ರೇನ್ ಸಮಸ್ಯೆಯನ್ನು ಹೆಚ್ಚು ಮಾಡಿ ತಲೆನೋವು ನಿಯಂತ್ರಣಕ್ಕೆ ಸಿಗದಂತೆ ಮಾಡುತ್ತದೆ. ಅತಿಯಾದ ಮಾನಸಿಕ ಒತ್ತಡ ಆರೋಗ್ಯಕ್ಕೆ ತುಂಬಾ ಹಾನಿಯನ್ನು ಉಂಟುಮಾಡುತ್ತದೆ. ಹಾಗಾಗಿ ಒತ್ತಡ ನಿವಾರಣೆಯಲ್ಲಿ ನಮ್ಮ ಸಹಾಯಕ್ಕೆ ಬರುವ ಹಲವಾರು ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಬಹುದು ಉದಾಹರಣೆಗೆ, ಪೇಂಟಿಂಗ್ ಮಾಡುವುದು, ಡ್ಯಾನ್ಸಿಂಗ್ ಅಭ್ಯಾಸ ಮಾಡುವುದು, ಸ್ವಿಮ್ಮಿಂಗ್ ಗೆ ಹೋಗುವುದು, ಧ್ಯಾನ ಮಾಡುವುದು, ಕಥೆ ಕಾದಂಬರಿ ಪುಸ್ತಕಗಳನ್ನು ಓದುವುದು ಮತ್ತು ಬರೆಯುವುದು ಇತ್ಯಾದಿ ಅಭ್ಯಾಸಗಳನ್ನು ನಾವು ರೂಡಿ ಮಾಡಿಕೊಳ್ಳುವುದರಿಂದ ನಮ್ಮ ಮನಸ್ಸಿಗೆ ಸಾಕಷ್ಟು ವಿಶ್ರಾಂತಿ ಸಿಕ್ಕಿದಂತೆ ಆಗಿ ಮಾನಸಿಕ ಒತ್ತಡ ದೂರವಾಗುತ್ತದೆ.

Leave A Reply

Your email address will not be published.