ಕೇವಲ ಒಂದು ಮುರುಕು ಹಪ್ಪಳದ ಕಾರಣದಿಂದಾಗಿ 20 ಜನರಿಗೆ ಗಾಯ ; ಕಲ್ಯಾಣ ಮಂಟಪಕ್ಕೆ ಬರೋಬ್ಬರಿ 1.5 ಲಕ್ಷ ಲಾಸ್ !!

ಮದುವೆ ಅಂದ್ರೆ ಅಲ್ಲಿ ಖುಷಿ ಸಂಭ್ರಮ ಮನೆ ಮಾಡಿರುತ್ತದೆ. ಹೊಸ ಪರಿಚಯದ ಜನರೊಂದಿಗೆ ಹೊಸಜೀವನವನ್ನು ಪ್ರಾರಂಭಿಸುವ ನವಜೋಡಿಗೆ ಇದೊಂದು ಸಂತೋಷದ ದಿನವಾಗಿರುತ್ತದೆ. ಆದರೆ ಇಲ್ಲೊಂದು ಜೋಡಿಗೆ ಹಪ್ಪಳವೇ ಶತ್ರುವಾಗಿ ಪರಿಣಮಿಸಿದೆ.

ಹೌದು. ಕೇವಲ ಒಂದು ಸೈಡ್ ತುಂಡಾದ, ಮುದುರಿದ ಹಪ್ಪಳದಿಂದ ಮದುವೆ ಸಮಾರಂಭವೇ ಕೆಟ್ಟುಹೋಗಿದೆ. ಪ್ರೀತಿ, ಸಹನೆ ಬಿಟ್ಟು ಜಗಳ ಎಂಬ ಭೂತ ಆವರಿಸಿಕೊಂಡಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂದು ಮುಂದೆ ಹೇಳುತ್ತೇವೆ ನೋಡಿ.

ಮದುವೆ ವೇಳೆ ವರನ ಕಡೆಯವರು ಎರಡನೇ ಬಾರಿಗೆ ಹಪ್ಪಳವನ್ನು ಕೇಳಿದರು. ಏನೋ ಹಪ್ಪಳ ಚೆನ್ನಾಗಿದ್ದಿರಬಹುದು, ಅಥವಾ ನೆಂಜಿಕೊಂಡು ತಿನ್ನಲು ಹಪ್ಪಳ ಬೇಕು ಅನ್ನಿಸಿರಬಹುದು. ಇದು ಎರಡು ಗುಂಪಿನ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ವಾಗ್ವಾದ ಹೊಡೆದಾಟಕ್ಕೂ ತಿರುಗಿ, ಕಲ್ಯಾಣ ಮಂಟಪದಲ್ಲೇ ಎರಡು ಗುಂಪಿನವರು ಬಡಿದಾಡಿಕೊಂಡರು. ಮದುವೆ ಸಮಾರಂಭದ ವೇಳೆ ಹೆಚ್ಚುವರಿ ಹಪ್ಪಳಕ್ಕಾಗಿ ನಡೆದ ಗಲಾಟೆಯಲ್ಲಿ ಟೇಬಲ್ಸ್​ ಮತ್ತು 25 ಕುರ್ಚಿಗಳಿಗೆ ಹಾನಿಯಾಗಿದ್ದು ಸೇರಿದಂತೆ ಕಲ್ಯಾಣ ಮಂಟಪಕ್ಕೆ ಸುಮಾರು 1.5 ಲಕ್ಷ ರೂಪಾಯಿ ನಷ್ಟವಾಗಿರುವ ಘಟನೆ ಕೇರಳದ ಹರಿಪಾದದಲ್ಲಿ ಭಾನುವಾರ ನಡೆದಿದೆ. ಹಪ್ಪಳದ ಕಾರಣಕ್ಕಾಗಿ ಹಪ್ಪಳ ತುಂಡಾಗುವ ವೇಗದಷ್ಟೇ ಸ್ಪೀಡ್ ಆಗಿ ಸಂಬಂಧಗಳು ಮುದುರಿವೆ.

ಇದೇ ಸಂದರ್ಭದಲ್ಲಿ ಕಲ್ಯಾಣ ಮಂಟಪದ ಮಾಲೀಕರು ಎರಡು ಗುಂಪಿನ ನಡುವೆ ಮಾತನಾಡಿ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದಾರೆ. ಗಲಾಟೆಯಲ್ಲಿ ಮಾಲೀಕರೂ ಸೇರಿದಂತ ಸುಮಾರು 20 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಲ್ಯಾಣ ಮಂಟಪದ ಒಂದೂವರೆ ಲಕ್ಷಕ್ಕೂ ಅಧಿಕ ಆಸ್ತಿಗೆ ನಷ್ಟ ಆಗಿದೆ ಎನ್ನಲಾಗಿದೆ.

Leave A Reply

Your email address will not be published.