ಭಾರೀ ಭೂಕುಸಿತ : ಮನೆ ಮೇಲೆ ಬಿತ್ತು ದೊಡ್ಡ ಬಂಡೆ ಹಾಗೂ ಭಾರೀ ಪ್ರಮಾಣದ ಮಣ್ಣು | ಇಡುಕ್ಕಿಯ ಒಂದೇ ಕುಟುಂಬದ 4 ವರ್ಷದ ಬಾಲಕನ ಸಹಿತ ಐವರ ದಾರುಣ ಸಾವು|

ಭಾರೀ ಮಳೆ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿರುವುದು ಅಕ್ಷರಶಃ ಸತ್ಯ. ಅಲ್ಲಲ್ಲಿ ಭೂಕಂಪ, ನೆರೆ ಇದರಿಂದ ಜನರು ತತ್ತರಿಸಿ ಹೋಗಿದ್ದಾರೆ ಎಂದೇ ಹೇಳಬಹುದು. ಈಗ ಇಲ್ಲೊಂದು ಕಡೆ ಭೂಕುಸಿತ ಉಂಟಾಗಿ ಒಂದೇ ಕುಟುಂಬದ ಐವರು ಜನ ಮರಣ ಹೊಂದಿರುವ ದಾರುಣ ಘಟನೆಯೊಂದು ನಡೆದಿದೆ.

ಈ ಘಟನೆ ಮುಂಜಾನೆ 3 ಗಂಟೆಗೆ ಸಂಭವಿಸಿದೆ. ರವಿವಾರ ರಾತ್ರಿ 11.30ರಿಂದ ಸೋಮವಾರ ಮುಂಜಾನೆ 3 ಗಂಟೆ ವರೆಗೆ ಧಾರಾಕಾರ ಮಳೆ ಸುರಿದಿದೆ. ಈ ಪ್ರದೇಶದಲ್ಲಿ 131 ಎಂಎಂ ಮಳೆ ಸುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಇಡುಕ್ಕಿ ಜಿಲ್ಲೆಯ ತೊಡುಪುಳದ ಸಮೀಪದ ಕುಡಯತ್ತೂರಿನಲ್ಲಿ ನಡೆದಿದೆ. ಭಾರೀ ಮಳೆಯಿಂದಾಗಿ ಸೋಮವಾರ ಸಂಭವಿಸಿದ ಭೂಕುಸಿತದಿಂದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಭೂಕುಸಿತದ ಸಂದರ್ಭ ದೊಡ್ಡ ಬಂಡೆ ಹಾಗೂ ಮಣ್ಣು ಬಿದ್ದ ಪರಿಣಾಮ ಕುಡಯತ್ತೂರಿನ ಸಂಗಮ ಜಂಕ್ಷನ್‌ನ ಮಲಿಯೆಕ್ಕಾಲ್ ಕಾಲನಿಯಲ್ಲಿರುವ ಸೋಮನ್ ಎಂಬವರ ಮನೆ ಗುರುತೇ ಸಿಗದಂತೆ ನೆಲಸಮವಾಗಿದೆ.

ಈ ದುರಂತದಲ್ಲಿ ಸೋಮನ್, ಅವರ ಪತ್ನಿ ಶಿಜಿ, ತಾಯಿ ತಂಕಮ್ಮ, ಪುತ್ರಿ ಶೀಮಾ ಹಾಗೂ ಮೊಮ್ಮಗ 4 ವರ್ಷದ ದೇವಾನಂದ ಅವರ ಮೃತದೇಹ ಶೋಧ ಕಾರ್ಯಾಚರಣೆ ಸಂದರ್ಭ ಪತ್ತೆಯಾಗಿದೆ. ಮನೆಯ ಅವಶೇಷಗಳ ಅಡಿಯಿಂದ ಪತ್ತೆಯಾಗಿರುವ ಮೃತದೇಹಗಳನ್ನು ತೊಡುಪುಳದಲ್ಲಿರುವ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಇಲ್ಲಿನ ನಾಲ್ಕು ಕುಟುಂಬಗಳನ್ನು ಸಮೀಪದ ಪರಿಹಾರ ಕೇಂದ್ರಗಳಿಗೆ ವರ್ಗಾಯಿಸಲಾಗಿದೆ ಎಂದು ಇಡುಕ್ಕಿ ಜಿಲ್ಲಾಧಿಕಾರಿ ಶೀಬಾ ಜಾರ್ಜ್ ಅವರು ಹೇಳಿದ್ದಾರೆ. ರಾಜ್ಯ ಕಂದಾಯ ಸಚಿವ ಕೆ. ರಾಜನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.

Leave A Reply

Your email address will not be published.