Onam 2022 : ಓಣಂ ಯಾವಾಗ ? ಈ ಹಬ್ಬದ ಮಹತ್ವ, ಆಚರಣೆ, ಹಿನ್ನೆಲೆ ಏನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಕೇರಳದ ಜನರು ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಓಣಂ ಕೂಡ ಒಂದು. ಈ ಹಬ್ಬವನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಸುಗ್ಗಿಯ ಹಬ್ಬ , ತಿರುವೋಣಂ ಎಂಬ ಹೆಸರಿನಿಂದ ಕೂಡಾ ಕರೆಯಲಾಗುತ್ತದೆ. ಐಶ್ವರ್ಯ, ಸಮೃದ್ಧಿಯ ಹಬ್ಬವಾದ ಓಣಂ ಹಬ್ಬವನ್ನು ಹಳದಿ ಬಣ್ಣದ ಹೂಗಳ ಅಲಂಕಾರದಿಂದ “ಪೂಕಳಂ” ರಚಿಸುತ್ತಾರೆ. ಈ ವರ್ಷ, ಆಗಸ್ಟ್ 30 ರಂದು ಓಣಂ ಹಬ್ಬ ಬರುತ್ತದೆ. ಹಲವು ಕಾರಣಗಳಿಂದ ಅಥಮ್ ಅನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮಲಯಾಳಂ ಕ್ಯಾಲೆಂಡರ್ ಪ್ರಕಾರ, ಆಗಸ್ಟ್/ಸೆಪ್ಟೆಂಬರ್ ಗೆ ಅನುರೂಪವಾಗಿರುವ ಚಿಂಗಂ ತಿಂಗಳಲ್ಲಿ ಅಥಮ್ ಅನ್ನು ಆಚರಿಸಲಾಗುತ್ತದೆ.
ಹಬ್ಬದ ಆಚರಣೆಗಳು ಅಥಂ ದಿನದಿಂದ ಆರಂಭಗೊಳ್ಳುತ್ತದೆ. ಈ ದಿನವನ್ನು ಮಂಗಳಕರವಾದ ದಿನವೆಂದು ಪರಿಗಣಿಸಲಾಗುತ್ತದೆ. ಹತ್ತು ದಿನಗಳವರೆಗೆ ಸಡಗರದಿಂದ ಜರುಗುವ ಈ ಹಬ್ಬ ಕೇರಳದ ಹಲವಾರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಯೊಂದಿಗೆ ಬೆಸೆದುಕೊಂಡಿದೆ.
ಈ ಹಬ್ಬವನ್ನು ರಾಜ ಮಹಾಬಲಿಯ ಬರುವ ನೆನಪಿಗಾಗಿ ಆಚರಿಸಲಾಗುತ್ತದೆ.
ಓಣಂ ವಿಷ್ಣುವಿನ ವಾಮನ ಅವತಾರವನ್ನು ಮತ್ತು ಪೌರಾಣಿಕ ಚಕ್ರವರ್ತಿ ಮಹಾಬಲಿಯ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ.
ರಾಜ ಮಹಾಬಲಿಯ ಅಟ್ಟ ಹಾಸವನ್ನು ತೊಡೆದು ಹಾಕಲು ಇಂದ್ರದೇವ ಶ್ರೀಹರಿಯ ಮೊರೆಯಿಟ್ಟಾಗ ಇಂದ್ರನ ರಾಜ್ಯವನ್ನು ಮರಳಿಸುವ ಸಲುವಾಗಿ ವಾಮನ ರೂಪದಲ್ಲಿ ಬಂದು ಮಹಾಬಲಿಯ ಬಳಿ ‘ಮೂರು ತುಂಡು ಭೂಮಿ’ ನೀಡುವಂತೆ ಕೇಳಿಕೊಂಡಾಗ, ಮೊದಲ ಹೆಜ್ಜೆಯನ್ನು ಭೂಮಿ, ಎರಡನೇ ಹೆಜ್ಜೆ ಆಕಾಶಕ್ಕೆ ಇಟ್ಟು,
ಮೂರನೇ ಹೆಜ್ಜೆ ಇಡಲು ಜಾಗ ಇಲ್ಲದಾಗ ಮಹಾಬಲಿ ತನ್ನ ತಲೆಯನ್ನು ಕೊಟ್ಟನು. ಅವನ ತ್ಯಾಗಕ್ಕೆ ಮನಸೋತ ವಿಷ್ಣು ಪ್ರತಿ ವರ್ಷದ ‘ಓಣಂ’ ಹಬ್ಬದ ಸಮಯದಲ್ಲಿ ತನ್ನ ಪ್ರಜೆಗಳನ್ನು ಬೇಟಿ ಮಾಡುವ ವರ ನೀಡಿದನು.
ಅದರಂತೆ ಪ್ರಜೆಗಳ ಕಷ್ಟಗಳನ್ನು ತೊಡೆದು ಹಾಕಲು ಓಣಂ ದಿನ ಮಹಾಬಲಿ ಬರುವನೆಂಬ ನಂಬಿಕೆ ಜನರಲ್ಲಿ ಈಗಲೂ ಇದೆ.
ತ್ರಿಕ್ಕಾಕಾರ ದೇವಸ್ಥಾನವನ್ನು ಮಹಾಬಲಿಯ ವಾಸಸ್ಥಾನವೆಂದು ಪರಿಗಣಿ ಸಲಾಗಿದೆ. ಓಣಂ ಹಬ್ಬದ ಸಮಯದಲ್ಲಿ ಹಬ್ಬದ ಧ್ವಜ ಎತ್ತುವ ಮತ್ತು ಮೆರವಣಿಗೆ ನಡೆಸುವ ಪೂಜಾ ಕೇಂದ್ರವಾಗಿದೆ.
ಅತ್ತ ಚಮಯಂ ಎಂಬ ಭವ್ಯವಾದ ಮೆರವಣಿಗೆ ಕೂಡ ಕೊಚ್ಚಿ ಬಳಿಯ ತ್ರಿಪುಣಿತ್ತೂರ ದಿಂದ ಆರಂಭಗೊಳ್ಳುತ್ತದೆ. ಈ ಸ್ಥಳದಿಂದ ರಾಕ್ಷಸನನ್ನು ಹೊರಹಾಕಲಾಗಿದೆ ಎಂಬ ನಂಬಿಕೆಯಿದೆ. ಓಣಂ ಹಬ್ಬದಲ್ಲಿ ಕೇವಲ ಮನೆ ಶೃಂಗರಿಸಿ ಪೂಕಳಂ ಜೊತೆಗೆ ಮನೆ ಮಂದಿಯೆಲ್ಲ ಹೊಸ ಬಟ್ಟೆ ಧರಿಸಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸು ವುದಷ್ಟೆ ಅಲ್ಲದೇ ಕೇರಳದಲ್ಲಿ ಅನೇಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದಲ್ಲಿ ವಿಶಿಷ್ಠವಾದ ಪುಲಿಕಲ್ಲಿ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ಇದು ಕೇರಳದ ಜಾನಪದ ಕಲೆ. ಇದರಲ್ಲಿ ಎಲ್ಲ ಪುರುಷರು ಹುಲಿ ಮತ್ತು ಚಿರತೆಯ ಬಣ್ಣದಲ್ಲಿ ಅಲಂಕಾರ ಮಾಡಿಕೊಂಡು ಬೀದಿಗಳಲ್ಲಿ ಸಂಚರಿಸಿ ನೃತ್ಯ ಮಾಡುವುದು ವಾಡಿಕೆ.
ಓಣಸದ್ಯ ಎಂಬುದು ಓಣಂ ದಿನ ಮಾಡುವ ವಿಶೇಷ ಊಟ. ಹೊಸ ಬೆಳೆಗಳನ್ನು ತಂದು ಈ ದಿನ ಆಹಾರ ತಯಾರಿಸಲಾಗುತ್ತದೆ. ಮೂರು ಬಗೆಯ ಪಾಯಸ ಮತ್ತು ನಾನಾ ಬಗೆಯ ಖಾದ್ಯಗಳನ್ನು ತಯಾರಿಸುವುದು ಮಹಾಬಲಿ ಯ ಸಂತೋಷ ಮತ್ತು ಸಮೃದ್ಧಿಯನ್ನು ಪ್ರತಿಬಿಂಬಿಸುತ್ತದೆ ಎಂದು ನಂಬಲಾಗಿದೆ.
ತುಂಬಿತುಲ್ಲಾಲ್ ಎಂಬುದು ಓಣಂ ಹಬ್ಬದಲ್ಲಿ ಆಯೋಜಿಸುವ ಸಾಂಪ್ರದಾಯಿಕ ನೃತ್ಯವಾಗಿದ್ದು , ಕೇರಳದ ಮಹಿಳೆಯರು ಈ ನೃತ್ಯವನ್ನು ಪ್ರದರ್ಶಿಸುತ್ತಾರೆ. ಸಾಂಪ್ರದಾಯಿಕ ಉಡುಪು, ಮಲ್ಲಿಗೆ, ಚಿನ್ನಾಭರಣಗಳನ್ನು ಈ ನೃತ್ಯದ ಸಂದರ್ಭದಲ್ಲಿ ತೊಡುವುದು ವಿಶೇಷ.
ಇದರೊಂದಿಗೆ ಓಣಥಲ್ಲು ಎಂಬುದು ಸಾಂಪ್ರದಾಯಿಕ ಸಮರ ಕಲೆಯಾಗಿದೆ. ಈ ಆಚರಣೆಯನ್ನು ಯೋಧ ಕುಲವೆಂದು ಗುರುತಿಸಿಕೊಂಡಿರುವ ನಾಯರ್ ಸಮುದಾಯದ ಪುರುಷರು ಅನೇಕ ಶತಮಾನಗಳಿಂದ ಚಾಲ್ತಿಯಲ್ಲಿದ್ದ ಸಾಂಪ್ರದಾಯಿಕ ಯುದ್ದ ತಂತ್ರಗಳನ್ನು ಪ್ರದರ್ಶಿಸುತ್ತಾರೆ.
ಹಬ್ಬಕ್ಕೆ ಸಾಂಪ್ರದಾಯಿಕ ಮೆರುಗು ನೀಡುವ ಉಡುಗೆಗಳು ಪುರುಷರು ಮುಂಡು ಮತ್ತು ಶರ್ಟ್ ತೊಟ್ಟರೆ, ಮಹಿಳೆಯರು ಅದೇ ತರಹದ ಮುಂಡುವಿನ ಮೇಲೊಂದು ಚಿನ್ನದ ಬಣ್ಣದ ನರಿಯತ್ತು ಎಂದು ಕರೆಯಲ್ಪಡುವ ಮೇಲಂಗಿಯನ್ನು ತೊಟ್ಟು ಸಂಭ್ರಮಿಸುತ್ತಾರೆ.