ತನ್ನ ಸಾವು ಸೃಷ್ಟಿಸಿ ಬೇರೊಬ್ಬನ ಹೆಸರಿನಲ್ಲಿ ಬದುಕುತ್ತಿದ್ದ ವ್ಯಕ್ತಿ, ಇದೀಗ ಮರು ಜೀವಂತ !!
ಆತ 2015 ರಲ್ಲಿ ಸತ್ತು ಹೋಗಿದ್ದ. ಆತನ ಶವ ಕೂಡಾ ಸಿಕ್ಕಿತ್ತು. ಅದನ್ನು ಕುಟುಂಬಸ್ಥರು ಸೇರಿ ಮಣ್ಣು ಮಾಡಿದ್ದರು. ಆದರೆ ಸತ್ತು 7 ವರ್ಷದ ನಂತರ ಈಗ ಆತ ಬದುಕಿಬಂದಿದ್ದಾನೆ. ಅದೇ ಈ ಸ್ಟೋರಿಯ ರೋಚಕತೆ.
ಕಳೆದ 7 ವರ್ಷಗಳ ಹಿಂದೆ ಅಂದರೆ 2015 ರಲ್ಲಿ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ಅನಾಥ ಶವ ವೊಂದು ಪತ್ತೆಯಾಗಿತ್ತು.ಈ ಶವಕ್ಕೆ ತನ್ನದೇ ಬಟ್ಟೆಗಳನ್ನು ತೊಡಿಸಿ ಮೊಬೈಲ್ ಅನ್ನು ಆ ಬಟ್ಟೆಯೊಳಗಿಟ್ಟು ಆ ಮೃತ ದೇಹ ತನ್ನದೇ ಎಂಬಂತೆ ಬಿಂಬಿಸುವಲ್ಲಿ ಮುಖೇಶ್ ಯಾದವ್ ಯಶಸ್ವಿಯಾಗಿದ್ದ. ಇವನ ಕುಟುಂಬದವರು ಕೂಡ ಸಾಥ್ ನೀಡಿ ಶವದ ಅಂತ್ಯಕ್ರಿಯೆ ನಡೆಸಿ ಕುಟುಂಬದವರು ಮುಖೇಶ್ ಯಾದವ್ ಸತ್ತಿದ್ದಾನೆ ಎಂಬ ಸಾಕ್ಷಿ ನೀಡುವಂತೆ ಮಾಡಿ ಪೊಲೀಸರ ಕಣ್ಣಿಗೂ ಮಣ್ಣು ಎರಚಿದ್ದಾನೆ.
ಅನಾಥ ಶವ ಕ್ಕೆ ತನ್ನ ಬಟ್ಟೆ, ಮೊಬೈಲ್ ಇಟ್ಟು ಜಗತ್ತಿನ ಕಣ್ಣಿಗೆ ತಾನು ಸತ್ತಂತೆ ನಟಿಸಿ ಕೋಟಿಗಟ್ಟಲೇ ದುಡ್ಡು ಒಳಹಾಕುವ ರಣತಂತ್ರ ಹೆಣೆದ ಭೂಪನ ಮುಖವಾಡ ಮಹಿಳೆ ಯೊಬ್ಬಳಿಂದ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ 7 ವರ್ಷದಲ್ಲಿ ಶಹಜಾನ್ ಪುರದಲ್ಲಿ ಹೆಸರು ಬದಲಿಸಿಕೊಂಡು ವಿವಿಧ ವ್ಯವಹಾರದಲ್ಲಿ ತೊಡಗಿಸಿಕೊಂಡು ಅಕ್ರಮ ಹಣ ಸಂಪಾದಿಸಿದಲ್ಲದೇ, ಅನೇಕ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ ಕೊಲೆ,ಸುಲಿಗೆ,ಲೂಟಿ – ದರೋಡೆ ,ವಂಚನೆ ಪ್ರಕರಣ ಅವನ ಮೇಲೆ ಇದ್ದಿದ್ದರಿಂದ ಶಿಕ್ಷೆಯಿಂದ ನುಣುಚಿ ಕೊಳ್ಳುವ ಯೋಜನೆಯಿಂದ ಪೊಲೀಸರ ಗೂಸಾ ತಪ್ಪಿಸಿಕೊಳ್ಳುವ ಸಲುವಾಗಿ ಸಾವಿನ ನಾಟಕವಾಡಿದ್ದಾನೆ.
ಅಂತ್ಯಕ್ರಿಯೆಯ ಬಳಿಕ ಉತ್ತರ ಖಾಂಡ ದ ಪೊಲೀಸರು ತಯಾರಿಸಿದ ‘ಪಂಚ ನಾಮ ‘ ದ ಆಧಾರದ ಮೇಲೆ ಅವನ ಮರಣ ಪ್ರಮಾಣ ಪತ್ರವನ್ನು ಕುಟುಂಬ ಪಡೆದುಕೊಂಡಿತ್ತು. ಇದೇ ಪ್ರಮಾಣಪತ್ರದ ಆಧಾರದ ಮೇಲೆ ಬೆಂಬಲಿಗರ ನೆರವಿನಿಂದ ತನ್ನ ಮರಣಪತ್ರ ಪಡೆದು ವಿಮಾ ಸಂಸ್ಥೆಯಿಂದ ಕೋಟಿ ರೂಪಾಯಿ ಪರಿಹಾರ ಪಡೆದುಕೊಂಡು ಮೊಸವೆಸಗಿದ್ದಾನೆ.
ಪರಿಹಾರ ಮೊತ್ತ ಕೈ ಸೇರಿದ ಕೂಡಲೇ ಅಲ್ಲಿಂದ ಕಾಲ್ಕಿತ್ತು ತನ್ನ ನೆಲೆ ಬದಲಿಸಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಶಹಜಾನ್ ಪುರದಲ್ಲಿ ವಾಸವಾಗಿದ್ದ. ಮುನೇಶ್ ಯಾದವ್ ಎಂಬ ನಕಲಿ ಹೊಸ ಗುರುತಿನೊಂದಿಗೆ ಅಲ್ಲೇ ರಿಯಲ್ ಎಸ್ಟೇಟ್ ಮತ್ತು ಸೆಕೆಂಡ್ ಹ್ಯಾಂಡ್ ಕಾರ್ ರೀ- ಸೇಲ್ ವ್ಯವಹಾರ ಪ್ರಾರಂಭಿಸಿದ್ದ.
ಬರೋಬ್ಬರಿ 7 ವರ್ಷಗಳ ಕಾಲ ಜಗತ್ತಿನ ಕಣ್ಣಿಗೆ ತಿಳಿಯದಂತೆ ನಕಲಿ ನಾಮದೇಯದಲ್ಲಿ ಅಜ್ಞಾತವಾಗಿ ಜೀವಿಸುತ್ತಿದ್ದ ಕುಖ್ಯಾತ ಗ್ಯಾಂಗ್ ಸ್ಟಾರ್ ಶಾಜಹಾನ್ ಪುರದ ಪೊಲೀಸರು ಮೊರಾದಾಬಾದ್ ನಲ್ಲಿ ಬಂಧಿಸಿದ್ದಾರೆ. ಮಹಿಳೆಯೊಬ್ಬರ ದೂರಿನಿಂದ ಮುಖೇಶ್ ಯಾದವ್ ಎಂಬ ಕುಖ್ಯಾತ ಭೂಪ ನ ನಿಜ ಬಣ್ಣ ಬಯಲಾಗಿದೆ.
ಮಹಿಳೆಯಿಂದ ದರೋಡೆಕೋರ ನ ಬಗ್ಗೆ ಮಾಹಿತಿ ಕಲೆ ಹಾಕಿದ ಖಾಕಿ ಪಡೆ ಅದನ್ನು ಪರಿಶೀಲಿಸಿದಾಗ ಮುನೇಶ್ ಯಾದವ್ ಶಹಜಾನ್ ಪುರದ ರೋಜಾ ಪ್ರದೇಶದಲ್ಲಿ ನೆಲೆಸಿದ್ದಾನೆ ಎಂದು ತಿಳಿದುಬಂದಿದೆ.ಇದೀಗ ಮುಖೇಶ್ ಎಂಬ ಕುಖ್ಯಾತ ಗ್ಯಾಂಗ್ ಸ್ಟಾರ್ ಪೊಲೀಸರ ಅತಿಥಿಯಾಗಿದ್ದಾನೆ. ಬಂಧನದ ಬಳಿಕ ಅವನ ಬಳಿ ವಿವಿಧ ವಯಸ್ಸಿನ ಮೂರು ಆಧಾರ್ ಕಾರ್ಡನ್ನು ವಶಪಡಿಸಿ ಕೊಳ್ಳಲಾಗಿದೆಯೆಂದು ಶಹಜಾನ್ ಪುರದ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೇ ಅವನ ಕ್ರಿಮಿನಲ್ ಪ್ರಕರಣ ಗಳೆಲ್ಲವೂ ಪರಿಶೀಲನೆಯ ಬಳಿಕ ನಿಜವೆಂದು ರುಜುವಾತಾಗಿದೆ.
ಬಂಧನದ ಬಳಿಕ ಅವನ ಇತರ ಪ್ರಕರಣಗಳು ಕೂಡ ಬಯಲಿಗೆ ಬಂದಿವೆ. ಮೊರಾದಾ ಬಾದ್ ನಲ್ಲಿ ಖಾಸಗಿ ಭದ್ರತಾ ಏಜೆನ್ಸಿ ಯನ್ನು ನಡೆಸುತ್ತಿದ್ದ.ಕೊಲೆ,ದರೋಡೆ,ಸುಲಿಗೆ ಅಪರಾಧದಲ್ಲಿ ಭಾಗಿಯಾಗಿದಲ್ಲದೆ ವಿವಿದೆಡೆ 50 ಲಕ್ಷ ಪಡೆದಿದ್ದ.ಈ ಎಲ್ಲ ಪ್ರಕರಣದಿಂದ ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಸಾವಿನ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.