BPL ಕಾರ್ಡ್ ಹೊಂದಿರುವ ಪ್ರತಿಯೊಂದು ಕುಟುಂಬದವರಿಗೂ ಮನೆ

ಕಾಕನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಶನಿವಾರ ಹಿರೇಹಳ್ಳ ಯೋಜನೆಯ ಪುನರ್ನಿರ್ಮಾಣ ಅಡಿಯಲ್ಲಿ ಪುನರ್ವಸತಿ ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ, ಗ್ರಂಥಾಲಯ ಕಟ್ಟಡ, ಶೌಚಾಲಯ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ, ಕಾಂಪೌಂಡ್ ಗೋಡೆ ನಿರ್ಮಾಣ, ನೀರಿನ ಪೈಪ್‌ಲೈನ್ ಅಳವಡಿಕೆ ಹಾಗೂ ಪಾರ್ಕ್‌ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಹಾಲಪ್ಪ ಅವರು, ಯಲಬುರ್ಗಾ ಮತ್ತು ಕುಕನೂರು ತಾಲೂಕಿಗೆ 4,500 ಸಾವಿರ ಮನೆಗಳನ್ನು ಮಂಜೂರು ಮಾಡಿಸಿದ್ದೇನೆ, ಕುಕನೂರು ಗ್ರಾಮದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿ ಕುಟುಂಬಕ್ಕೆ ಮನೆಗಳನ್ನು ಮಂಜೂರು ಮಾಡಿಸುತ್ತೇನೆ, ಅಂತಹವರ ಪಟ್ಟಿಯನ್ನು ಸಲ್ಲಿಸಬೇಕು ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.

ತಾಲೂಕಿನಲ್ಲಿ ಉದ್ಯೋಗವಿಲ್ಲದೆ ಗೋವಾ, ಬೆಂಗಳೂರು, ಮಂಗಳೂರು ಕಡೆಗಳಿಗೆ ಗುಳೆ ಹೋಗುತ್ತಾರೆ. ಕ್ಷೇತ್ರದಲ್ಲಿ ನೀರಾವರಿ ಮಾಡಿದ್ದರೆ ಯುವಕರಿಗೆ, ರೈತರಿಗೆ, ಕಾರ್ಮಿಕರಿಗೆ ಅನುಕೂಲವಾಗುತ್ತಿತ್ತು. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಭಾರತ ದೇಶ ಆರ್ಥಿಕವಾಗಿ ಶಕ್ತಿಶಾಲಿಯಾಗಿದೆ ಎಂದು ವಿದೇಶಿಗರು ಹೇಳುತ್ತಾರೆ. ದೇಶದ 10 ಕೋಟಿ ಕುಟುಂಬಕ್ಕೆ ಉಜ್ವಲ ಗ್ಯಾಸ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳು ಉನ್ನತಮಟ್ಟದ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಸಾವಿರ ಕೋಟಿ ರು. ಮಂಜೂರು ಮಾಡಿ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಿ ಹೆಣ್ಣುಮಕ್ಕಳಿಗೆ ಆಶ್ರಯ ಕಲ್ಪಿಸಿದ್ದಾರೆ ಎಂದು ಹೇಳಿದ್ದಾರೆ.

ಕಳಕಪ್ಪ ಕಂಬಳಿ, ಬಸವನಗೌಡ ತೊಂಡಿಹಾಳ, ಪ್ರಭುಗೌಡ ಪಾಟೀಲ್, ನಿವೃತ್ತ ಎಸ್‌ಪಿ ಯು. ಶರಣಪ್ಪ, ಈಶಪ್ಪ ದೊಡ್ಡಮನಿ, ಲಿಂಗನಗೌಡ ಇನಾಮತಿ, ದತ್ತನಗೌಡ ಮಾಲೀಪಾಟೀಲ್, ಪ್ರಭುರಾಜ ಕಲಬುರ್ಗಿ,
ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ, ತಾಪಂ ಇಒ ರಾಮಣ್ಣ ದೊಡ್ಡಮನಿ, ಶಿರೂರು ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ಮಾಲಿಪಾಟೀಲ್, ಉಪಾಧ್ಯಕ್ಷೆ ದೇವಕ್ಕ ವಾಲ್ಮೀಕಿ, ಹಿರೇಬೀಡಿನಾಳ ಗ್ರಾಪಂ ಅಧ್ಯಕ್ಷ ರೇವಣಸಿದ್ದನಗೌಡ, ಮುಖಂಡರಾದ ಬಸಲಿಂಗಪ್ಪ ಭೂತೆ, ಸಿ.ಎಚ್. ಪಾಟೀಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.