ಉಡುಪಿಯಲ್ಲಿ ಮೊಳಗಿದ ಬುಲ್ಡೋಜರ್ ಸೌಂಡ್ | ಮೊಗವೀರ ಮಹಿಳಾ ಮೀನುಗಾರರ ಶೆಡ್ ನೆಲಸಮ

ನಗರದ ಕಿನ್ನಿಮುಲ್ಕಿ ಗೋಪುರ ಬಳಿ ಮುನಿಸಿಪಾಲಿಟಿ ಸದಸ್ಯರು ಸ್ವಂತ ಖರ್ಚಲ್ಲಿ ಮೀನುಗಾರ ಮೊಗವೀರ ಮಹಿಳೆಯರಿಗಾಗಿ ನಿರ್ಮಿಸಲಾಗಿದ್ದ ಶೀಟ್ ಶೆಡ್‌ಗಳನ್ನು ಉಡುಪಿ ನಗರಸಭೆ ಅಧಿಕಾರಿಗಳು ಬುಲ್ಡೋಜರ್ ತಂದು ಕೆಡವಿದ ದುರಂತ ಘಟನೆಗೆ ಜನರ ಆಕ್ರೋಶಗೊಂಡಿದ್ದಾರೆ

ಉಡುಪಿಯ ಕಿನ್ನಿಮುಲ್ಕಿ ಗೋಪುರ ಬಳಿ ಕಳೆದ 30 ವರ್ಷಗಳಿಂದ ಮೊಗವೀರ ಮಹಿಳೆಯರು ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಿಸಿಲು ಮಳೆಯನ್ನು ಲೆಕ್ಕಿಸದೇ, ಬೀದಿ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾ ಜೀವನವನ್ನು ಸಾಗಿಸುವ ಇಂತಹ ಬಡ ಮೊಗವೀರ ಮಹಿಳೆಯರಿಗೆ ಸ್ಥಳೀಯ ನಗರಸಭಾ ಸದಸ್ಯೆ ತನ್ನ ಗೌರವ ಧನ 2 ಲಕ್ಷ ರೂ. ಬಳಸಿ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಕಳೆದ 2-3 ದಿನಗಳಿಂದ ಈ ಪುಟ್ಟ ಶೆಡ್ ನಿರ್ಮಿಸಲಾಗುತ್ತಿತ್ತು. ಆದರೆ ಉಡುಪಿ ನಗರಸಭೆ ಅಧಿಕಾರಿಗಳು ಶೀಟ್ ಶೆಡ್ ಅನ್ನು ಬುಲ್ಡೋಜರ್ ತಂದು ಕೆಡವಿ ಹಾಕಿದ್ದಾರೆ.

ಆದರೆ ಇದರಿಂದ ಸ್ಥಳೀಯ ಆಟೋ ಸ್ಟ್ಯಾಂಡ್ ನಗರಸಭಾ ಸದಸ್ಯೆ, ನೂರಾರು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರಸಭೆಯ ಅಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಧಿಕ್ಕಾರ ಕೂಗಿದ್ದಾರೆ. ಅಧಿಕಾರಿಗಳು ಬಂದಿದ್ದ ಕಾರಿಗೆ ಮುತ್ತಿಗೆ ಹಾಕಿ ಸ್ಥಳದಿಂದ ತೆರಳದಂತೆ ದಿಗ್ಭಂಧನ ಮಾಡಿದ್ದಾರೆ.
ಆದರೆ ಅಧಿಕಾರಿಗಳು ಹೇಳುವ ಪ್ರಕಾರ, ಇದೊಂದು ಅಕ್ರಮ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರೋಡ್ ಪಕ್ಕದಲ್ಲೇ ಶೆಡ್ ಹಾಕಲಾಗಿದೆ. ಹೀಗಾಗಿ ನಾವು ತೆರವು ಮಾಡುತ್ತಿದ್ದೇವೆ ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದಾರೆ.

ಸುಮಾರು 2 ಗಂಟೆಗಳ ಕಾಲ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ವಾದ ಪ್ರತಿವಾದ ನಡೆಯಿತು. ನಂತರ ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ನಗರಸಭೆ ಆಡಳಿತದ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

Leave A Reply

Your email address will not be published.