ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯ ; ಸಣ್ಣ ವ್ಯಾಪಾರಿಗಳಿಂದ ಹೆಚ್ಚಿದ ವಿರೋಧ
ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಲೈಸೆನ್ಸ್ ಪಡೆಯಬೇಕು ಎಂದು ಸರ್ಕಾರ ನಿಯಮ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ರಾಜ್ಯ ಸಣ್ಣ ಬೀಡಿ-ಸಿಗರೆಟ್ ಮಾರಾಟಗಾರರ ಸಂಘದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಳಿಕ ಸಂಘದ ಅಧ್ಯಕ್ಷ ಬಿ.ಎಂ.ಮುರಳಿಕೃಷ್ಣ ಮಾತನಾಡಿ, ಸರ್ಕಾರವು ಎನ್ಜಿಒಗಳ ಒತ್ತಡದಿಂದ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ಪಡೆಯಬೇಕು ಎಂಬ ಕಾನೂನು ಜಾರಿಗೆ ತರಲು ಮುಂದಾಗಿದೆ. ತಂಬಾಕು ಚಿಲ್ಲರೆ ವ್ಯಾಪಾರವನ್ನು ವಿದೇಶಿ ಕಂಪನಿಗಳು, ಸೂಪರ್ ಮಾರ್ಕೆಟ್ಗಳಿಗೆ ವರ್ಗಾಯಿಸುವ ಹುನ್ನಾರ ಇದರ ಹಿಂದಿದೆ ಎಂದು ಆರೋಪಿಸಿದರು. ದೇಶದಲ್ಲಿ ಈಗಾಗಲೇ ಕಠಿಣವಾದ ತಂಬಾಕು ನಿರೋಧಕ ಕಾನೂನು ಜಾರಿಯಲ್ಲಿದೆ. ಪಾಕೆಟ್ಗಳ ಮೇಲೆ ಶೇ.85ರಷ್ಟುಭಾಗ ಆರೋಗ್ಯದ ಎಚ್ಚರಿಕೆ ನೀಡುವ ಚಿತ್ರಗಳನ್ನು ಮುದ್ರಿಸಲಾಗುತ್ತಿದೆ. ಅಪ್ರಾಪ್ತರಿಗೆ ಮಾರಾಟ ಮಾಡುವಂತಿಲ್ಲ. ಶಿಕ್ಷಣ ಸಂಸ್ಥೆಗಳ 100 ಅಡಿ ಅಂತರದಲ್ಲಿ ವ್ಯವಹಾರ ನಡೆಸುವಂತಿಲ್ಲ ಎಂದು ಕಾನೂನು ಜಾರಿ ಮಾಡಲಾಗಿದೆ. ಹೀಗಿರುವಾಗ ಹೊಸ ಕಾನೂನಿನ ಅವಶ್ಯಕತೆಯಾದರೂ ಏನು ಎಂದು ಪ್ರಶ್ನಿಸಿದರು.
ಅನಕ್ಷರಸ್ಥರಾದ ನಾವು ಕಾನೂನಿನ ನೀತಿ-ನಿಯಮ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಲೈಸೆನ್ಸ್ ಪಡೆಯಲು ಯಾರನ್ನು ಸಂಪರ್ಕಿಸಬೇಕು ಎಂದು ತಿಳಿಯುವುದಿಲ್ಲ. ಪ್ರತಿ ವರ್ಷವೂ ಲೈಸೆನ್ಸ್ ನವೀಕರಣ ಮಾಡಬೇಕಿರುವುದರಿಂದ ಹಣಕಾಸಿನ ತೊಂದರೆ ಉಂಟಾಗುತ್ತದೆ. ಈಗಾಗಲೇ ಯಾವುದೇ ನಿಯಮ ಇಲ್ಲದಿದ್ದರೂ ಕೆಲವು ಕಾರ್ಪೊರೇಷನ್ ಮತ್ತು ಪೊಲೀಸರು ನಿತ್ಯ ಶೋಷಣೆ ಮಾಡುತ್ತಿದ್ದಾರೆ. ಹೊಸ ನಿಯಮ ಜಾರಿಯಾದರೆ ಮತ್ತಷ್ಟುಭ್ರಷ್ಟಾಚಾರಕ್ಕೆ ಆಸ್ಪದ ನೀಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.