ಈ ಗ್ರಾಮದಲ್ಲಿ ‘ ಯಾರು ಯಾರ ಹೆಂಡತಿ, ಯಾರ ಗಂಡ ‘ ಎಂಬುದೇ ತಿಳಿಯುತ್ತಿಲ್ಲವಂತೆ !
ಈ ಗ್ರಾಮದಲ್ಲಿ ಯಾರು ಯಾರ ಹೆಂಡತಿ, ಯಾರ ಗಂಡ ಎಂಬುದೇ ತಿಳಿಯುತ್ತಿಲ್ಲ. ಎಲ್ಲವೂ ಅಯೋಮಯ. ಕಾರಣ ಇಲ್ಲಿ ನೀಡಲಾದ ಮದುವೆ ಪ್ರಮಾಣಪತ್ರಗಳು. ಮದುವೆ ಎಂಬುದು ಕೇವಲ ವಧು-ವರರ ಸುಂದರ ಘಟ್ಟ ಮಾತ್ರವಲ್ಲದೆ, ಇದೀಗ ಇದೇ ಹೆಸರಿನಲ್ಲಿ ವಂಚನೆಗಳೂ ನಡೆಯಲಾರಂಭಿಸಿದೆ. ಹೌದು. ಇಲ್ಲೊಂದು ಕಡೆ ಗ್ರಾಮದಲ್ಲಿ 1,500 ಜನರು ವಾಸವಿದ್ದಾರೆ. ಆದರೆ, ಇಲ್ಲಿ ವಿತರಣೆಯಾದ ಮದುವೆ ಪ್ರಮಾಣಪತ್ರದ ಸಂಖ್ಯೆ ಮಾತ್ರ 1,470. ಇದರಿಂದಾಗಿ ಯಾರು ಯಾರ ಗಂಡ, ಹೆಂಡತಿ ಎಂಬುದೇ ತಿಳಿಯುತ್ತಿಲ್ಲ. ಹಾಗಿದ್ರೆ ಆ ಗ್ರಾಮದ ಅಷ್ಟೂ ಜನರಿಗೂ ಮದುವೆ ಆಗಿದ್ಯಾ? ಪ್ರತಿಯೊಬ್ಬರಿಗೂ ಬೇರೆ ಬೇರೆ ಮದುವೆ ಪ್ರಮಾಣಪತ್ರ ಸಾಧ್ಯ ? ಇದು ಈ ಗ್ರಾಮದಲ್ಲಿ ಮೂಡಿಬಂದ ಪ್ರಶ್ನೆಗಳು.
ಇಲ್ಲಿ ಯಾರು ಯಾರ ಹೆಂಡತಿ, ಯಾರು ಯಾರ ಗಂಡ ಎನ್ನುವ ಕನ್ಫ್ಯೂಷನ್ ಗೆ ಕೊನೆಗೂ ಉತ್ತರ ಸಿಕ್ಕಿದೆ. ಇದು ಮದುವೆ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ. ಗುಜರಾತ್ನ ರೇಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನಂದ್ ಎಂಬ ಗ್ರಾಮದಲ್ಲಿ ಮಾತ್ರ ಮದುವೆಯ ಹೆಸರಿನಲ್ಲಿ ಬೇರೊಂದು ರೀತಿಯ ವಂಚನೆ ನಡೀತಿದೆ. ಅದೇನೆಂದರೆ ಈ ಗ್ರಾಮದಲ್ಲಿ ಇರೋರೆ ಒಂದೂವರೆ ಸಾವಿರದಷ್ಟು ಮಂದಿ. ಆದರೆ ಗ್ರಾಮದಲ್ಲಿ ವಿತರಣೆಯಾದ ಒಟ್ಟಾರೆ ಮದುವೆ ಪ್ರಮಾಣಪತ್ರಗಳ ಸಂಖ್ಯೆ 1,470. ಮದುವೆ ಪ್ರಮಾಣ ಪತ್ರದ ಹೆಸರಿನಲ್ಲಿ ಭಾರಿ ದಂಧೆ ಈ ಗ್ರಾಮದಲ್ಲಿ ನಡೆಯುತ್ತಿದೆ.
ಮದುವೆ ಪ್ರಮಾಣಪತ್ರಗಳನ್ನು ಆಯಾ ಗ್ರಾಮದ ನಿವಾಸಿಗಳಿಗೆ ಮಾತ್ರವೇ ವಿತರಿಸಲು ಪಂಚಾಯಿತಿ ಕಾರ್ಯದರ್ಶಿಗೆ ಅವಕಾಶವಿದೆ. ಆದರೆ, ಹಣ ಪಡೆದು ಯಾರಿಗೆ ಬೇಕಾದರೂ ಪ್ರಮಾಣ ಪತ್ರ ಕೊಡುತ್ತಿರುವ ಕಾರಣ, ಇಂಥದ್ದೊಂದು ದಂಧೆ ಈಗ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಾಥಮಿಕ ತನಿಖೆ ಆಧಾರದ ಮೇಲೆ ಈಗಾಗಲೇ ಪಂಚಾಯಿತಿಯ ಕಾರ್ಯದರ್ಶಿ ಅರವಿಂದ್ ಮಾಕ್ವಾನ ಎಂಬವವರನ್ನು ಅಮಾನತುಗೊಳಿಸಲಾಗಿದೆ.
ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಪಡೆದು ಮೊಬೈಲ್ಗೆ ಮದುವೆ ಪ್ರಮಾಣಪತ್ರ ಕಳಿಸುತ್ತಿರುವುದು ಬೆಳಕಿಗೆ ಬಂದಿದೆ. ಏಜೆಂಟ್‌ಗಳ ಮೂಲಕ ಅಂತಹ ಪ್ರಮಾಣಪತ್ರಗಳನ್ನು ಪಂಚಾಯಿತಿಯ ಕಾರ್ಯದರ್ಶಿ ವಿತರಿಸುತ್ತಿದ್ದರು. ಯಾವುದೇ ವಿವಾಹದ ಪುರಾವೆ ಅಥವಾ ದಂಪತಿ ಮಾಹಿತಿಯ ದಾಖಲೆಗಳಿಲ್ಲದೆ ಇದ್ದರೂ ಪ್ರಮಾಣಪತ್ರ ಕೊಡಲಾಗುತ್ತಿತ್ತು. ಮೆಹ್ಸಾನಾ, ಅಹಮದಾಬಾದ್ ಮತ್ತು ಮುಂಬೈಯಂತಹ ಜಿಲ್ಲೆಗಳಲ್ಲಿ ವಾಸಿಸುವ ಅಪ್ರಾಪ್ತರ ಹೆಸರಿನಲ್ಲೂ ಮದುವೆ ಪ್ರಮಾಣಪತ್ರಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ.
ದುಡ್ಡಿನ ಆಸೆಗಾಗಿ ಕೇಳಿದವರಿಗೆಲ್ಲಾ ಮದುವೆ ಪ್ರಮಾಣ ಪತ್ರ ನೀಡಲಾಗುತ್ತಿದೆ. ನಿಜವಾಗಿಯೂ ಯಾರು ಯಾರ ಹೆಂಡತಿ, ಯಾರು ಯಾರ ಗಂಡ ಎಂಬುದು ಇಲ್ಲಿಯವರು ಪಡೆಯುತ್ತಿರುವ ಪ್ರಮಾಣ ಪತ್ರದಿಂದ ತಿಳಿಯುತ್ತಲೇ ಇಲ್ಲ. ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಪಡೆದು ಬೇಕಾದವರ ಹೆಸರನ್ನು ಈ ಮದುವೆ ಪ್ರಮಾಣ ಪತ್ರದಲ್ಲಿ ಸೇರಿಸಲಾಗುತ್ತಿರುವ ಘಟನೆ ನಡೆಯುತ್ತಿದೆ.