ಭಾರತದ ಮೇಲೆ ದಾಳಿ ಮಾಡಲು ಪಾಪಿ ಪಾಕಿಸ್ತಾನ ಒಳಸಂಚು | ಸೆರೆ ಸಿಕ್ಕ ಉಗ್ರನಿಂದ ಸ್ಫೋಟಕ ಮಾಹಿತಿ

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಸೆರೆಯಾದ ಪಾಕಿಸ್ತಾನಿ ಉಗ್ರನಿಗೆ ಅಲ್ಲಿನ ಗುಪ್ತಚರ ದಳವು ಭಾರತದ ಸೇನಾ ನೆಲೆ ಮೇಲೆ ದಾಳಿ ನಡೆಸಲು ₹30 ಸಾವಿರ ಕೊಟ್ಟಿರುವುದು ತನಿಖೆಯಲ್ಲಿ ಹೊರಬಂದಿದೆ.


Ad Widget

Ad Widget

ಬಂಧಿತ ಉಗ್ರ, 32 ವರ್ಷದ ತಬರಕ್‌ ಹುಸೈನ್‌ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೋಟ್ಲಿ ಪ್ರದೇಶದ ಸಬ್ಸ್‌ಕೋಟ್‌ ಗ್ರಾಮದ ನಿವಾಸಿ. ಭಾನುವಾರ ನೌಶೇರಾ ಸೆಕ್ಟರ್‌ನಲ್ಲಿ ಭಾರತೀಯ ಸೇನೆ ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ ಹುಸೈನ್‌ನನ್ನು ಬಿಟ್ಟು ಉಳಿದ ಉಗ್ರರು ಪಲಾಯನಗೈದಿದ್ದಾರೆ. ಈ ವೇಳೆ ಹುಸೈನ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಕಳೆದ 6 ವರ್ಷಗಳ ಅವಧಿಯಲ್ಲಿ ಎರಡನೇ ಬಾರಿಗೆ ಹುಸೈನ್‌ ಭಾರತೀಯ ಸೇನೆಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಮೊದಲು ಅಕ್ರಮವಾಗಿ ಗಡಿ ನುಸುಳಲು ಪ್ರಯತ್ನಿಸಿ ಬಂಧನಕ್ಕೆ ಒಳಪಟ್ಟಿದ್ದ.


Ad Widget

ಆಗಸ್ಟ್‌ 21ರಂದು ಬೆಳಗ್ಗೆ ಜಾನ್ಗರ್‌ ಪ್ರದೇಶದಲ್ಲಿ 2-3 ಉಗ್ರರು ಗಡಿ ನಿಯಂತ್ರಣ ರೇಖೆಯನ್ನು ದಾಟಲು ಪ್ರಯತ್ನಿಸುತ್ತಿರುವ ಸೂಚನೆ ಸಿಕ್ಕಿತ್ತು. ತಕ್ಷಣ ಕಾರ್ಯೋನ್ಮುಖರಾದ ಭದ್ರತಾ ಪಡೆ ಕಾರ್ಯಾಚರಣೆಗೆ ಇಳಿದಿತ್ತು. ಎಚ್ಚರಿಕೆಯ ನಡುವೆ ಬೇಲಿಯನ್ನು ತುಂಡರಿಸಿ ಒಳನುಗ್ಗಲು ಪ್ರಯತ್ನಿಸಿದ್ದ ಹುಸೈನ್‌ ಮೇಲೆ ದಾಳಿ ನಡೆಸಿದ ಸೇನೆ ಆತನನ್ನು ಸೆರೆ ಹಿಡಿದಿದೆ. ಗಾಯಗೊಂಡಿರುವ ಉಗ್ರನಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾರತೀಯ ಸೇನಾ ನೆಲೆ ಮೇಲೆ ದಾಳಿ ಮಾಡುವ ಉದ್ದೇಶ ಹೊಂದಿದ್ದಾಗಿ ಹಾಗೂ ತನ್ನ ಜೊತೆ ಬಂದಿದ್ದ ಇನ್ನಿಬ್ಬರು ಉಗ್ರರು ಪಲಾಯನಗೈದಿರುವುದಾಗಿ ಹುಸೈನ್‌ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಜೊತೆಗೆ ಬಂದಿದ್ದವರು ತನ್ನನ್ನು ಸಿಕ್ಕಿಸಿ ಓಡಿ ಹೋದರೆಂದು ದೂರಿದ್ದಾನೆ. ಈ ದಾಳಿ ನಡೆಸಲು ತನಗೆ ಪಾಕಿಸ್ತಾನ ಗುಪ್ತಚರ ದಳದ ಕರ್ನಲ್‌ ಯುನಸ್‌ ಚೌಧರಿ ಎಂಬಾತ ₹30 ಸಾವಿರ (ಪಾಕಿಸ್ತಾನಿ ರೂಪಾಯಿ) ಕೊಟ್ಟಿದ್ದಾಗಿ ಹೇಳಿದ್ದಾನೆ. ಪಾಕಿಸ್ತಾನ ಸೇನೆಯ ಮೇಜರ್‌ ರಜಾಕ್‌ ತರಬೇತಿ ನೀಡಿದ್ದಾಗಿ ಹಾಗೂ ಅಲ್ಲಿನ ಭಯೋತ್ಪಾದಕರ ಜೊತೆ ದೀರ್ಘಕಾಲೀನ ಒಡನಾಟ ಹೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

‘ಆತ್ಮಾಹುತಿ ದಾಳಿ ಮೂಲಕ ಪ್ರಾಣವನ್ನು ಕೊಡಲು ಬಂದಿದ್ದೆ. ಆದರೆ ಸಹಚರರು ತನಗೆ ಮೋಸ ಮಾಡಿ ತಪ್ಪಿಸಿಕೊಂಡರು. ನಾನು 6 ತಿಂಗಳು ತರಬೇತಿ ಪಡೆದಿದ್ದೆ. ಲಷ್ಕರ್‌ ಎ ತಯಬಾ ಮತ್ತು ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಗಳಿಗಾಗಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ಹಲವಾರು ಭಯೋತ್ಪಾದಕ ಕ್ಯಾಂಪ್‌ಗಳಿಗೆ ಹೋಗಿದ್ದೆ’ ಎಂದು ಬಂಧಿತ ಹುಸೈನ್‌ ಹೇಳಿರುವುದಾಗಿ ರಾಜೌರಿಯ ಸೇನಾ ಆಸ್ಪತ್ರೆಯ ಬ್ರಿಗೆಡಿಯರ್‌ ರಾಜೀವ್‌ ನಾಯರ್‌ ತಿಳಿಸಿದ್ದಾರೆ.
ಹಲವು ಆತ್ಮಾಹುತಿ ಪ್ರಕರಣಗಳಂತೆ ಈತನಿಗೂ ದಾಳಿಗೆ ಕಳುಹಿಸುವ ಮುನ್ನ ಖಾಸಗಿ ಅಂಗಾಂಗಳ ಕೂದಲನ್ನು ಕ್ಷೌರ ಮಾಡಿಸಿ ಕಳುಹಿಸಿರುವುದು ಪತ್ತೆಯಾಗಿದೆ.

Ad Widget

Ad Widget

Ad Widget

2016 ಏಪ್ರಿಲ್‌ 25ರಂದು ಅಮೃತಸರದ ಅಟ್ಟಾರಿ-ವಾಘಾ ಗಡಿ ಪ್ರದೇಶದಲ್ಲಿ ಹುಸೈನ್‌ ತನ್ನ ಸಹೋದರ ಹರೂನ್‌ ಅಲಿ ಜೊತೆ ಅಕ್ರಮವಾಗಿ ನುಸುಳಲು ಯತ್ನಿಸಿ ಇಬ್ಬರೂ ಸೆರೆಯಾಗಿದ್ದರು. 26 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದರು. 2019 ಡಿಸೆಂಬರ್‌ 16ರಂದು ಹುಸೈನ್‌ನ ಮತ್ತೊಬ್ಬ ಸಹೋದರ ಮೊಹಮ್ಮದ್‌ ಸಯೀದ್‌ನನ್ನು ಉಗ್ರ ಚಟುವಟಿಕೆಗೆ ಸಂಬಂಧಿಸಿ ಬಂಧಿಸಲಾಗಿತ್ತು.

error: Content is protected !!
Scroll to Top
%d bloggers like this: