ದಸರಾ ಹಬ್ಬ ಸರಕಾರಿ ನೌಕರರಿಗೆ ಶುಭ ಸುದ್ದಿ ಕೊಡುವುದೇ? ತುಟ್ಟಿಭತ್ಯೆ ಹೆಚ್ಚಳದ ಸಿಹಿ ಹಂಚುವ ಸಮಯ ಬಂತು!

ತುಟ್ಟಿ ಭತ್ಯೆ ಹೆಚ್ಚಳದ ಸಮಯ ಕೇಂದ್ರ ಸರ್ಕಾರಿ ನೌಕರರಿಗೆ ಹತ್ತಿರವಾಗಿದೆ. ವರದಿಗಳ ಪ್ರಕಾರ ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಶೇಕಡ 4 ರಷ್ಟು ಡಿಎ ಹೆಚ್ಚಳ ನೀಡಲಾಗುತ್ತದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಒಟ್ಟು 38 ಪ್ರತಿಶತ ಡಿಎ ಹೆಚ್ಚಳವಾಗುತ್ತದೆ. ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕ (AICPI) 129 ಕ್ಕಿಂತ ಹೆಚ್ಚಿದೆ. ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕ ಡೇಟಾದ ಆಧಾರದ ಮೇಲೆ ತುಟ್ಟಿಭತ್ಯೆ ಹೆಚ್ಚಳವನ್ನು ನಿರ್ಧಾರ ಮಾಡಲಾಗುತ್ತದೆ ಮತ್ತು 2022 ರ ಜನವರಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಶೇಕಡ 3ರಷ್ಟು ತುಟ್ಟಿಭತ್ಯೆ ಹೆಚ್ಚಳ ಪಡೆದಿದ್ದು, ಈಗ ಅದು ಶೇಕಡ 4ಕ್ಕೆ ಹೆಚ್ಚಾಗುತ್ತದೆ.

ತುಟ್ಟಿಭತ್ಯೆ ಹೆಚ್ಚಳ ಮುಂದಿನ ಸುತ್ತಿನ ಕ್ಯಾಬಿನೆಟ್ ಸಭೆಗಳ ನಂತರ ಘೋಷಣೆ ಮಾಡಬಹುದೆಂದು ಇತ್ತೀಚಿನ ವರದಿಗಳು ಖಚಿತಪಡಿಸಿವೆ. ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ನವರಾತ್ರಿ ಆರಂಭವಾಗಲಿದೆ. ಆ ಸಮಯದಲ್ಲಿ ಅಧಿಕೃತ ಘೋಷಣೆ ಆಗಬಹುದು. ಕೇಂದ್ರ ಸರ್ಕಾರಿ ನೌಕರರು ತಮ್ಮ ಸೆಪ್ಟೆಂಬರ್ ಪಾವತಿಗಳೊಂದಿಗೆ ಡಿಎ ಹೆಚ್ಚಳದ ಪ್ರಯೋಜನಗಳನ್ನು ಪಡೆಯಬಹುದು ಎಂದು ವರದಿಯಾಗಿದೆ.

ಕೊರೊನಾ ಸಾಂಕ್ರಾಮಿಕ ರೋಗ ಹರಡುವಿಕೆಯ ಸಂದರ್ಭ, ಜನವರಿ 2020 ಮತ್ತು ಜೂನ್ 2021 ರ ನಡುವೆ ತುಟ್ಟಿಭತ್ಯೆ ಹೆಚ್ಚಳವನ್ನು ಸ್ಥಗಿತಗೊಳಿಸಲಾಗಿತ್ತು. ಸ್ಥಗಿತಗೊಂಡ ಡಿಎ ಬಾಕಿ ನೀಡುವ ಬಗ್ಗೆ ಯಾವುದೇ ನಿಲುವು ಇಲ್ಲ ಎಂದು ಹೇಳಲಾಗಿದೆ.

18 ತಿಂಗಳ ಡಿಎ ಬಾಕಿ ಬಿಡುಗಡೆ ಮಾಡಬೇಕೆಂಬ ಕೇಂದ್ರ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಗೆ ಇನ್ನೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ಆದರೆ, ಕೇಂದ್ರ ನೌಕರರು ತಮ್ಮ ಬೇಡಿಕೆ ಮುಂದುವರೆಸಿದ್ದಾರೆ. ಡಿಎ ವೇತನದ ಒಂದು ಭಾಗ ಹಾಗೂ ವೇತನದಲ್ಲಿ ಯಾವುದೇ ವಿಳಂಬವಾದರೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಮತ್ತು ಅದು ನೌಕರರ ಹಕ್ಕು ಎಂದು ಸೂಚಿಸಲಾಗಿದೆ. ಬಾಕಿ ಪಾವತಿ ವಿಧಾನದ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಲು ನೌಕರರ ಕಡೆಯವರು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

7ನೇ ವೇತನ ಆಯೋಗದ ಪ್ರಕಾರ ತುಟ್ಟಿಭತ್ಯೆ (ಡಿಎ) ಶೇಕಡಾ 4 ರಷ್ಟು ಹೆಚ್ಚಾದರೆ ವೇತನದ ಲೆಕ್ಕಾಚಾರ ಹೀಗಿರಲಿದೆ. ಓರ್ವ ನೌಕರನ ಮೂಲ ವೇತನ 56,900 ರುಪಾಯಿ ಆಗಿದ್ದರೆ , ಆತ ಈಗ 19,346 ರುಪಾಯಿ ತುಟ್ಟಿಭತ್ಯೆ ಪಡೆಯಲು ಅರ್ಹನಾಗಿರುತ್ತಾನೆ. ಒಂದು ವೇಳೆ ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳವಾದರೆ 21,622 ರುಪಾಯಿ ಪಡೆಯಲು ಅರ್ಹರಾಗಿರುತ್ತಾರೆ.ಬಶೇಕಡಾ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದಿಂದ ವೇತನ 2,276 ರೂಪಾಯಿ ಹೆಚ್ಚಳವಾಗಲಿದೆ. ವಾರ್ಷಿಕವಾಗಿ ವೇತನ 27,312 ರೂಪಾಯಿ ಹೆಚ್ಚಳವಾಗಲಿದೆ.

Leave A Reply

Your email address will not be published.