ಅಂಗಡಿಗೆ ಕರೆದುಕೊಂಡು ಹೋಗಿಲ್ಲ ಅಂತ ಸಾವಿಗೆ ಶರಣಾದ 11 ವರ್ಷದ ಬಾಲಕಿ
ಹೆತ್ತವರು ತಮ್ಮ ಮಕ್ಕಳನ್ನು ಎಷ್ಟೋ ಕಷ್ಟಪಟ್ಟು ಸಾಲ ಸೋಲ ಮಾಡಿ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸುತ್ತಾರೆ. ಮಕ್ಕಳ ಬಗ್ಗೆ ಸಾಕಷ್ಟು ಕನಸುಗಳನ್ನ ಕಟ್ಟಿಕೊಂಡು ಇರುತ್ತಾರೆ. ಆದರೆ ಮಕ್ಕಳು ಮಾನಸಿಕವಾಗಿ ಎಷ್ಟು ಸೂಕ್ಷ್ಮಮತಿಗಳಾಗುತ್ತಿದ್ದಾರೆ ಎಂಬುದಕ್ಕೆ ಬೆಂಗಳೂರಿನ ಚಾಮರಾಜಪೇಟೆಯ 11 ವರ್ಷದ ಪುಟ್ಟು ಹುಡುಗಿ ಸಾಕ್ಷಿ ಆಗಿದ್ದಾಳೆ. ಆಕೆ ನೇಣಿಗೆ ಶರಣಾಗುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಒದಗಿಸಿದೆ.
ಮಕ್ಕಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಜಾಗರೂಕತೆಯಿಂದ ಬೆಳೆಸಬೇಕಾದ ಪರಿಸ್ಥಿತಿಯಲ್ಲಿ ಇಂದು ಪೋಷಕರಿದ್ದಾರೆ. ಪೋಷಕರು ಶಾಪಿಂಗ್ ಹೋಗುವಾಗ ಮಗಳು ತಾನೂ ಬರುತ್ತೇನೆ ಎಂದು ಹೇಳಿದ್ದಾಳೆ. ನೀನು ಬೇಡ, ಓದ್ಕೋ ಎಂದು ಪೋಷಕರು ಗದರಿದ್ದಾರೆ. ಹೀಗೆ ಹೆತ್ತವರು ತನ್ನನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಿಲ್ಲ ಎಂಬ ಸಣ್ಣ ಕಾರಣಕ್ಕೆ 11 ವರ್ಷದ ಬಾಲಕಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಈ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.
ಹೆತ್ತವರು ಶಾಪಿಂಗ್‌ಗೆ ಹೋಗಿದ್ದಾಗ ನೇಣಿಗೆ
ಶಾಪಿಂಗ್ ಮುಗಿಸಿ ಬಂದ ಪೋಷಕರು ಮನೆಯ ಬಾಗಿಲನ್ನು ತೆರೆಯುವಂತೆ ವೈಶಾಲಿಗೆ ತಿಳಿಸಿದ್ದಾರೆ. ಆದರೆ ಆಕೆ ಬಾಗಿಲು ತೆರೆಯಲಿಲ್ಲ. ಆ ಬಳಿಕ ಆಕೆ ನೇಣು ಬಿಗಿದುಕೊಂದಿರುವುದನ್ನು ಕಿಟಕಿ ಮೂಲಕ ತಿಳಿದುಬಂದಿದೆ. ತಕ್ಷಣವೇ ಬಾಗಿಲು ಮುರಿದು ಒಳಗೆ ನೋಡಿದರೆ ವೈಶಾಲಿ ಸಾವನ್ನಪ್ಪಿದ್ದಳು. ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.