ಮದ್ಯ ಸೇವನೆ ಹೆಚ್ಚು ಮಾಡಲು ಈ ದೇಶ ಹಮ್ಮಿಕೊಂಡಿದೆ ಕುಡುಕರಿಗಾಗಿ ಸ್ಪರ್ಧೆ
‘ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ’ ಎಂಬ ಎಚ್ಚರಿಕೆಯ ಸಂದೇಶ ಎಲ್ಲೆಡೆ ಹಬ್ಬುತ್ತಿದ್ದರೆ, ಇಲ್ಲೊಂದು ಕಡೆ ಮದ್ಯವನ್ನು ಹೆಚ್ಚು ಕುಡಿಯಲು ಉತ್ತೇಜಸುವುದು ಅಲ್ಲದೆ ಸ್ಪರ್ಧೆಯನ್ನೇ ಏರ್ಪಡಿಸಿದ್ದಾರೆ. ನಿಮಗೂ ಅತೀ ಹೆಚ್ಚು ಮದ್ಯ ಸೇವಿಸುವ ತಾಕತ್ತು ಇದ್ದರೆ, ನೀವೂ ಕೂಡ ಹೋಗಿ ಸ್ಪರ್ಧಿಸಬಹುದು.
ಇಂತಹುದೊಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲಿ ಎನ್ನುವ ಪ್ರಶ್ನೆ ಕಾಡಿರಬೇಕಲ್ವಾ?.. ಕುಡುಕರಿಗೆ ಉತ್ತೇಜಿಸುವ ಸ್ಪರ್ಧೆ ಹಮ್ಮಿಕೊಂಡಿದ್ದು ಜಪಾನ್ ದೇಶ. ಇಲ್ಲಿ ಕುಡುಕರು ಕಮ್ಮಿ ಕುಡಿಯೋದ್ರಿಂದ ಸರ್ಕಾರಕ್ಕೆ ಟೆನ್ಷನ್ ಹೆಚ್ಚಾಗಿದೆಯಂತೆ.
ಹೌದು. ಮದ್ಯ ಸೇವನೆ ಕಡಿಮೆಯಾಗಿದ್ದರಿಂದ ಜಪಾನ್ ದೇಶದ ಆದಾಯ ಕುಸಿದಿದೆ. ಹಾಗಾಗಿ ಜನರಿಗೆ ಹೆಚ್ಚೆಚ್ಚು ಮದ್ಯಪಾನ ಮಾಡಲು ಜಪಾನ್ ಪ್ರೋತ್ಸಾಹಿಸುತ್ತಿದೆ. ಇದಕ್ಕಾಗಿ ಸರ್ಕಾರ ರಾಷ್ಟ್ರಮಟ್ಟದ ಸ್ಪರ್ಧೆಯನ್ನೂ ಆರಂಭಿಸಿದೆ. ಹೆಚ್ಚು ಆಲ್ಕೋಹಾಲ್ ಸೇವಿಸುವಂತೆ ಜನರನ್ನು ಉತ್ತೇಜಿಸಲು ಜಪಾನ್ ಸರ್ಕಾರ ‘ದಿ ಸೇಕ್ ವಿವಾ! ಕ್ಯಾಂಪೇನ್’ ಎಂಬ ಅಭಿಯಾನವನ್ನು ನಡೆಸುತ್ತಿದೆ.
ನ್ಯಾಷನಲ್ ಟ್ಯಾಕ್ಸ್ ಏಜೆನ್ಸಿ (NTA) ನಡೆಸುತ್ತಿರುವ ಈ ಸ್ಪರ್ಧೆಯು 20-39 ವಯಸ್ಸಿನ ಜನರನ್ನು ಮದ್ಯದ ಜನಪ್ರಿಯತೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುವ ಪ್ಲಾನ್‌ಗಳೊಂದಿಗೆ ಬರುವಂತೆ ಸೂಚಿಸುತ್ತದೆ. ಈ ಸ್ಪರ್ಧೆ ಸೆಪ್ಟೆಂಬರ್ 9 ರವರೆಗೆ ನಡೆಯಲಿದೆ. ಇದರಲ್ಲಿ ಹೊಸ ಉತ್ಪನ್ನ ಮಾತ್ರವಲ್ಲದೆ ಹಳೆಯ ಉತ್ಪನ್ನದ ಬಳಕೆಯನ್ನು ಹೆಚ್ಚಿಸುವಂತೆ ಕೇಳಲಾಗುತ್ತಿದೆ. ಈ ಮೂಲಕ ಮನೆಯಲ್ಲಿ ಕುಡಿಯುವ ಪ್ರವೃತ್ತಿಯನ್ನು ಹೆಚ್ಚಿಸಬಹುದು ಎಂಬುದು ಸರ್ಕಾರದ ಲೆಕ್ಕಾಚಾರ. ಜಪಾನ್ ಆಯೋಜಿಸಿರುವ ಮದ್ಯ ಸೇವನೆ ಸ್ಪರ್ಧೆಯ ಅಂತಿಮ ಸುತ್ತು ಪ್ರವೇಶಿಸಿದವರನ್ನು ನವೆಂಬರ್ 10 ರಂದು ಟೋಕಿಯೊದಲ್ಲಿ ನಡೆಯಲಿರುವ ಗಾಲಾ ಪ್ರಶಸ್ತಿ ಸಮಾರಂಭಕ್ಕೆ ಆಹ್ವಾನಿಸಲಾಗುತ್ತದೆ.
ಆಲ್ಕೋಹಾಲ್ ಮಾರಾಟದಲ್ಲಿನ ಕಡಿತವು ಜಪಾನ್‌ನ ಬಜೆಟ್‌ಗೆ ಹೊಡೆತ ನೀಡಿದೆ. ಈಗಾಗಲೇ 290 ಬಿಲಿಯನ್ ಡಾಲರ್ ಕೊರತೆಯನ್ನು ಅದು ಎದುರಿಸುತ್ತಿದೆ. 2020 ರ ಆರ್ಥಿಕ ವರ್ಷದಲ್ಲಿ, ಜಪಾನಿನ ಸರ್ಕಾರವು 1980 ಕ್ಕೆ ಹೋಲಿಸಿದರೆ ಆಲ್ಕೋಹಾಲ್ ಮೇಲಿನ ತೆರಿಗೆಯಿಂದ 110 ಶತಕೋಟಿ ಪೌಂಡ್‌ನಷ್ಟು ಆದಾಯದ ನಷ್ಟವನ್ನು ಅನುಭವಿಸಿತು. ಇದು 30 ವರ್ಷಗಳಲ್ಲೇ ಅತಿ ದೊಡ್ಡ ಕುಸಿತ ಎನ್ನಲಾಗ್ತಿದೆ. ಕೋವಿಡ್ ಬಿಕ್ಕಟ್ಟಿನಿಂದಾಗಿ ಮನೆಯಿಂದಲೇ ಕೆಲಸ ಮಾಡುವ ಪ್ರವೃತ್ತಿ ಹೆಚ್ಚಾಗಿದ್ದು, ಮದ್ಯ ಸೇವನೆಯ ಅಭ್ಯಾಸ ನಿಂತು ಹೋಗಿದೆ. ಜಪಾನ್‌ನಲ್ಲಿ ಬಿಯರ್ ಮಾರಾಟ ಸಹ ಶೇ.20 ರಷ್ಟು ಕಡಿಮೆಯಾಗಿದೆ.
ಹೀಗಾಗಿ ಸರ್ಕಾರದ ಬೊಕ್ಕಸ ತುಂಬಿಸಲು ಜಪಾನ್ ಕುಡುಕರಿಗೆ ಸ್ಪರ್ಧೆಯನ್ನು ಇಟ್ಟು ಉತ್ತೇಜಿಸಲು ಮುಂದಾಗಿದೆ. ಈ ಸ್ಪರ್ಧೆ ಬಳಿಕ ಮದ್ಯ ಸೇವನೆಯಿಂದ ಎಷ್ಟು ಆದಾಯ ಹೆಚ್ಚಾಗಬಹುದೆಂದು ನೋಡಬೇಕಷ್ಟೆ..