ಜಗವ ಬೆಳಗುವ ಶಿಕ್ಷಕನ ಬಾಳಿಗೇಕೆ ಈ ಕತ್ತಲು? ಖಾಲಿ ಹುದ್ದೆಗಳ ಭರ್ತಿ ಯಾವಾಗ ಎಂದು ಕಾಯುತ್ತಿವೆ ಬಡ ಜೀವಗಳು !

ಬರಗಾಲದಿಂದ ಬಸವಳಿದ ರೈತನಂತೆ ರಾಜ್ಯದ ಶಿಕ್ಷಕರ ಚಿತ್ತ ಸರ್ಕಾರದತ್ತ ನೆಟ್ಟಿದೆ. ಹೌದು, ಸರ್ಕಾರಿ ಶಾಲೆಗಳಂತೆಯೇ ಅನುದಾನಿತ ಪ್ರೌಢಶಾಲೆಗಳೂ ಕೂಡ ಈ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಆದರೆ ಈಗ ಇಂತಹ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳೂ ಕೂಡ ಸಮಸ್ಯೆಯ ಸುಳಿಯಲ್ಲಿ ಸಿಲುಕಿವೆ. ಇದಕ್ಕೆ ಕಾರಣ 2015ರವರೆಗೆ ಅನುದಾನಿತ ಹುದ್ದೆಗಳನ್ನು ಭರ್ತಿ ಮಾಡಿಕೊಂಡ ಘನ ಸರ್ಕಾರ ಹುದ್ದೆ ಭರ್ತಿಯತ್ತ ಗಂಭೀರ ಮೌನ ತಾಳಿದೆ. ವಯೋಮಿತಿ ಮೀರುತ್ತಿರುವ ಶಿಕ್ಷಕರು 2016 ರಿಂದ 2020ರವರೆಗೆ ಖಾಲಿಯಿರುವ ಸುಮಾರು 7000 ಹುದ್ದೆಗಳು ಇಂದಲ್ಲ ನಾಳೆ ಭರ್ತಿಯಾಗುತ್ತವೆ ಎಂದು ಚಾತಕ ಪಕ್ಷಿಯ ಹಾಗೆ ಕಾಯುತ್ತ ಕೂತಿದ್ದಾರೆ. ಈ ಕುರಿತು ಮಂತ್ರಿ ಮಹೋದಯರಿಗೆ ಫೋನಾಯಿಸಿ ,ಪತ್ರ ಬರೆದಾಗ ಏನಾದರೂ ಒಳಿತಾಗುವುದೇನೋ ಎಂದು ಕಾಯುವಷ್ಟರಲ್ಲಿ ಶಿಕ್ಷಣ ಮಂತ್ರಿಗಳು ಬದಲಾಗಿ ಸನ್ಮಾನ್ಯ ಶ್ರೀ ಬಿ.ಸಿ.ನಾಗೇಶ್ ರವರು ಶಿಕ್ಷಣದ ಚುಕ್ಕಾಣಿ ಹಿಡಿದಾಗ ಭರವಸೆಯ ಕಿರಣ ಮೂಡಿದ್ದೇನೋ ಸರಿ.

ಅಷ್ಟರಲ್ಲಿ ಕೊರೋನಾ ಮಹಾಮಾರಿ ಎಲ್ಲರನ್ನು ತಲ್ಲಣಗೊಳಿಸಿತು. ವಿಶೇಷವೆಂದರೆ, ಮದ್ಯಕ್ಕೆ ಹಾಗೂ ಇತರ ವ್ಯವಹಾರಗಳಿಗೆ ಕೊರೋನಾವಿಲ್ಲ. ಆದರೆ ಶಿಕ್ಷಕರ ನೇಮಕಾತಿಗೆ ಮಾತ್ರ ಕೊರೋನಾದ ಸಂಕಷ್ಟವೇ? ಶಿಕ್ಷಣದಿಂದಲೇ ರಾಷ್ಟ್ರ ಶಿಕ್ಷಣ ಎಂಬ ನಮ್ಮ ಘನ ಸರ್ಕಾರದ ಧ್ಯೇಯದ ಅಂಗವಾಗಿ ಈಗಾಗಲೇ ಜಾರಿಯಾಗಿರುವ ಹೊಸರಾಷ್ಟ್ರೀಯ ಶಿಕ್ಷಣ ನೀತಿಯ ಸಮರ್ಪಕ ಅನುಷ್ಟಾನಕ್ಕೆ ಸುಗಮಕಾರರಾಗಿ ಕಾರ್ಯನಿರ್ವಹಿಸಲು ಶಿಕ್ಷಕರು ಬೇಕೇ ಬೇಕು ಅಲ್ಲವೇ?

ಶಿಕ್ಷಣಕ್ಕೆ ತನ್ನ ಅತೀವ ಮಹತ್ವ ನೀಡುತ್ತಿರುವ   ನಮ್ಮ ಸರ್ಕಾರ ಮಕ್ಕಳಿಗೆ ಹಾಗೂ ಅವರಿಗೆ ಲಭಿಸುವ ಶಿಕ್ಷಣಕ್ಕೆ ಪೂರಕವಾದ ಅಗತ್ಯತೆಗಳಲ್ಲಿ ಒಂದಾದ ಅನುದಾನಿತ  ಶಿಕ್ಷಕರ ನೇಮಕಾತಿಯತ್ತಲೂ ಗಮನಹರಿಸಬೇಕಲ್ಲವೇ? ಕಳೆದ ಕೆಲವು ದಿನಗಳ ಹಿಂದೆ ತನ್ನ ಸಾಧನೆಗಳ ಪಟ್ಟಿಯಲ್ಲಿ ಸರ್ಕಾರವು 2015ರವರೆಗಿನ ಅನುದಾನಿತ ಹುದ್ದೆಗಳನ್ನು ತುಂಬಲು ಅನುಮತಿ ನೀಡಿದೆ ಎಂದಿದೆ.ಆದರೆ ಪ್ರಸ್ತುತ ನಾವಿರುವುದು 2022ನೇ ಇಸವಿಯಲ್ಲಿ. 2ವರ್ಷ ನಮ್ಮ ದಿಕ್ಕು ತಪ್ಪಿಸಿದ್ದು ಕೊರೋನಾ ಎಂದಾದರೂ ,ಕನಿಷ್ಟ ಪಕ್ಷ 2016ರಿಂದ 2020ಡಿಸೆಂಬರ್ ವರೆಗಿನ ಅನುದಾನಿತ ಪ್ರೌಢಶಾಲಾ ಹುದ್ದೆಗಳ ಭರ್ತಿಗೆ ಅನುಮತಿ ಶೀಘ್ರವಾಗಿ ಸಿಗುವಂತಾಗಲಿ.

ಕರ್ನಾಟಕ ರಾಜ್ಯದ ಅನುದಾನಿತ ಪ್ರೌಢಶಾಲೆಗಳಲ್ಲಿ ಹಲವು ಕಾರಣಗಳಿಂದಾಗಿ ಶಿಕ್ಷಕ ಹುದ್ದೆಗಳು 2016 ರಿಂದ 2020 ಡಿಸೆಂಬರ್ ವರೆಗೆ ಖಾಲಿಯಾಗಿರುತ್ತವೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ಹೊರಗುತ್ತಿಗೆಯ ಆಧಾರದ ಮೇಲೆ ಶಿಕ್ಷಕರನ್ನು ನೇಮಿಸಿಕೊಂಡು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವ ವ್ಯವಸ್ಥೆ ಮಾಡುತ್ತಿದ್ದು ಶಿಕ್ಷಣ ಸಂಸ್ಥೆಗಳು ಹಾಗೂ ಅತೀ ಕ‌ಡಿಮೆ ವೇತನ ಅಥವಾ ವೇತನವನ್ನೇ ಪಡೆಯದೇ ಇರುವ ಈ ಶಾಲೆಗಳ ಅತಿಥಿ ಶಿಕ್ಷಕರೂ ಕೂಡ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸರ್ಕಾರ 2016 ರಿಂದ 2020 ಡಿಸೆಂಬರ್ ವರೆಗೆ ವಿವಿಧ ಕಾರಣಗಳಿಂದ ಖಾಲಿಯಾದ ಅನುದಾನಿತ ಶಿಕ್ಷಕ ಹುದ್ದೆಗಳನ್ನು ತ್ವರಿತವಾಗಿ ತುಂಬಿಕೊಂಡು,ನನ್ನಂಥ ಶಿಕ್ಷಕರ ಬಾಳಿನಲ್ಲಿ ತುಂಬಿರುವ ಕತ್ತಲನ್ನು ದೂರ ಮಾಡಿರಿ ಎಂಬ ಪ್ರಾರ್ಥನೆ ನಮ್ಮದು.ಖಂಡಿತವಾಗಿ ನಮ್ಮ ಬೇಡಿಕೆಯನ್ನು ತುರ್ತಾಗಿ ಪೂರೈಸುತ್ತೀರೆಂಬ ಆಶಾವಾದ ನಮ್ಮದು. ಸರ್ಕಾರದ ಧನಾತ್ಮಕ ಉತ್ತರವನ್ನು ನಿರೀಕ್ಷಿಸುತ್ತಿದ್ದೇವೆ.

ವಂದನೆಗಳೊಂದಿಗೆ,ಇಂತಿ ನಿಮ್ಮ ವಿಶ್ವಾಸಿ: ನೆಲ್ಸನ್ ಮಿನಿನ್ ಗೊನ್ಸಾಲ್ವಿಸ್,
ಅತಿಥಿ ಶಿಕ್ಷಕರು ಹಾಗೂ ಅನುದಾನಿತ ಅತಿಥಿ ಶಿಕ್ಷಕ ಬಳಗ,
ಹೋಲಿ ರೋಸರಿ ಶಾಲೆ,ಯಲ್ಲಾಪುರ,ಉತ್ತರ ಕನ್ನಡ.

Leave A Reply

Your email address will not be published.