500 ರೂಪಾಯಿಗಾಗಿ ವ್ಯಕ್ತಿಯ ರುಂಡವನ್ನೇ ಕತ್ತರಿಸಿ ಠಾಣೆ ಮೆಟ್ಟಿಲೇರಿದ ಮಹರಾಯ!!

ಕೋಪ ಎಂಬ ಆಯುಧ ಮನುಷ್ಯನನ್ನು ಯಾವೆಲ್ಲ ರೀತಿಲಿ ಆಟವಾಡಿಸುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ನಿಂತಿದೆ ಈ ಘಟನೆ. ಹೌದು. 500 ರೂಪಾಯಿಯ ಬೆಟ್ಟಿಂಗ್ ನಿಂದಾಗಿ ವ್ಯಕ್ತಿಯೊಬ್ಬನ ರುಂಡವನ್ನೇ ಕತ್ತರಿಸಿ ಕಾಲ್ನಡಿಗೆಯಲ್ಲಿ ಪೊಲೀಸ್ ಸ್ಟೇಷನ್ ಹೋದ ಭಯಾನಕ ಘಟನೆ ನಡೆದಿದೆ.

ಫುಟ್‌ಬಾಲ್ ಪಂದ್ಯದ ಮೇಲೆ ಕಟ್ಟಿದ್ದ 500 ರೂಪಾಯಿ ಬೆಟ್ಟಿಂಗ್ ವಿಚಾರಕ್ಕೆ ನಡೆದ ಗಲಾಟೆ ವೇಳೆ ವ್ಯಕ್ತಿಯೊಬ್ಬ ತನ್ನ ಸಹ ಗ್ರಾಮಸ್ಥನ ತಲೆ ತುಂಡರಿಸಿ, ಅದನ್ನು ಹಿಡಿದುಕೊಂಡು 25 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಆಘಾತಕಾರಿ ಘಟನೆ ಸೋಮವಾರ ಅಸ್ಸಾಂನಲ್ಲಿ ನಡೆದಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೋಯಲೂರು ಪ್ರದೇಶಲ್ಲಿ ಫುಟ್ ಬಾಲ್ ಪಂದ್ಯ ಆಯೋಜಿಸಲಾಗಿತ್ತು. ಈ ಪಂದ್ಯದ ಮುಗಿದ ಬಳಿಕ ಇಬ್ಬರ ನಡುವೆ ಜಗಳ ಆರಂಭವಾಗಿದೆ. ತುನಿರಾಮ್ ಮ್ಯಾಡ್ರಿ ಫುಟ್ ಬಾಲ್ ಪಂದ್ಯ ಆಡುತ್ತಿದ್ದ ಎರಡು ತಂಡಗಳಲ್ಲಿ ಒಂದು ತಂಡವನ್ನು ಬೆಂಬಲಿಸಿದ್ದ. ಹೇಮ್ ರಾಮ್ ಎಂಬಾತ ಇನ್ನೊಂದು ತಂಡದ ಅಭಿಮಾನಿಯಾಗಿದ್ದ. ಒಂದು ವೇಳೆ ಪಂದ್ಯದಲ್ಲಿ ತಮ್ಮ ನೆಚ್ಚಿನ ತಂಡ ಸೋತರೆ, 500 ರೂಪಾಯಿ ಕೊಡುವುದಾಗಿ ಇಬ್ಬರು ಬೆಟ್ಟಿಂಗ್ ಮಾಡಿದ್ದರು.

ಅದರಂತೆ ಹೇಮ್ ರಾಮ್ ಎಂಬಾತ ಬೆಟ್ಟಿಂಗ್‌ನಲ್ಲಿ ಗೆದ್ದು, ಮ್ಯಾಡ್ರಿ ಬಳಿ ಹಣ ಕೇಳಿದ್ದ. ಆದರೆ, ತಾನು ಕೊಟ್ಟಿದ್ದ ಮಾತನ್ನು ಮ್ಯಾಡ್ರಿ ಉಳಿಸಿಕೊಳ್ಳಲಿಲ್ಲ. ಬದಲಾಗಿ ಊಟಕ್ಕೆ ಹೋಗೋಣ ಎಂದು ಕರೆದಿದ್ದ. ಆದರೆ, ರಾಮ್ ಮಾತ್ರ ಹಣಕ್ಕಾಗಿ ಮ್ಯಾಡ್ರಿ ಬಳಿ ಸತಾಯಿಸುತ್ತಲೇ ಇದ್ದ. ಇದರಿಂದ ಆಕ್ರೋಶಗೊಂಡ ಮ್ಯಾಡ್ರಿ, ತನ್ನ ಬ್ಯಾಗ್‌ನಲ್ಲಿದ್ದ ಹರಿತವಾದ ಆಯುಧವನ್ನು ತೆಗೆದುಕೊಂಡು ರಾಮ್ ತಲೆಯನ್ನು ತುಂಡರಿಸಿದ್ದಾನೆ.

ಬಳಿಕ ಆರೋಪಿ ಮ್ಯಾಡ್ರಿ, ತುಂಡರಿಸಿದ ರಾಮ್ ತಲೆಯನ್ನು ಹಿಡಿದು ರಂಗಪರಾ ಪೊಲೀಸ್ ಠಾಣೆಗೆ ನಡೆದುಕೊಂಡೆ ಹೋಗಿ ತಡರಾತ್ರಿಯೇ ಶರಣಾಗಿದ್ದಾನೆ. ಇದೀಗ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Leave A Reply

Your email address will not be published.