ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಬಿಸಿಯೂಟಕ್ಕೂ ಬೀಳುತ್ತಾ ಕತ್ತರಿ!
ಅತ್ತ ಒಂದು ಕಡೆಯಿಂದ ಸರ್ಕಾರ, ಮಕ್ಕಳಿಗೆ ಹಾಲು, ಮೊಟ್ಟೆ ನೀಡಬೇಕು ಎಂಬ ನಿರ್ಧಾರ ಕೈಗೊಂಡಿದ್ದರೆ, ಇತ್ತ ಕಡೆ ಬಿಸಿಯೂಟ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ. ಇದಕ್ಕೆಲ್ಲ ಕಾರಣ ಸರ್ಕಾರದ ನಿರ್ಧಾರ.
ಹೌದು. ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ ಸಿಗೋದು ಡೌಟ್ ಇದ್ದು, ಬಿಸಿಯೂಟ ಕಾರ್ಯ ಕರ್ತೆಯರು ಮತ್ತೆ ಹೋರಾಟಕ್ಕಿಳಿದಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸ್ಥಗಿತಗೊಂಡು ಎರಡು ದಿನವಾಗಿದೆ.
ಕೆಲಸದಿಂದ 6,500 ಬಿಸಿಯೂಟ ಕಾರ್ಯಕರ್ತೆಯರ ವಜಾಗೊಳಿಸಿದ ಹಿನ್ನೆಲೆ ಫ್ರೀಡಂಪಾರ್ಕ್ನಲ್ಲಿ ಕಾರ್ಯಕರ್ತೆಯರು ಅಹೋರಾತ್ರಿ ಪ್ರತಿಭಟನೆ ಮಾಡಿದ್ದು, ಇಂದು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ. 60 ವರ್ಷ ವಯಸ್ಸಾದ ಕಾರ್ಯಕರ್ತೆಯರನ್ನು ವಜಾ ಮಾಡಿದ ಹಿನ್ನೆಲೆ ಶಾಲೆಗಳಲ್ಲಿ ಬಿಸಿಯೂಟ ಮಾಡದಿರಲು ನಿರ್ಧಾರ ಮಾಡಿದ್ದಾರೆ.
ರಾಜ್ಯದಲ್ಲಿ 50 ಲಕ್ಷ ಬಡ, ರೈತ, ಕೃಷಿ ಕಾರ್ಮಿಕರು ಹಾಗೂ ದಿನ ದಲಿತರ ಮಕ್ಕಳಿಗೆ ದಿನನಿತ್ಯ ಬಿಸಿ ಆಹಾರ ತಯಾರಿಸಿ ನೀಡುತ್ತಿದ್ದರು. ಬಿಸಿಯೂಟ ಕಾರ್ಯಕರ್ತೆಯರಿಗೆ ಈ ಕೆಲಸವೆ ಆಧಾರ. ಇಂತಹ ತಾಯಂದಿರಿಗೆ ಆಧಾರಿತ ನಿವೃತ್ತಿ ವೇತನ ನಿಗದಿಪಡಿಸಬೇಕು.
ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ವಜಾಗೊಂಡಿರುವ ಕಾರ್ಯಕರ್ತೆಯರಿಗೂ ಗ್ರಾಚ್ಯುಟಿ ಜಾರಿ ಮಾಡಬೇಕು. ರಾಜ್ಯಾದ್ಯಂತ ಅಡುಗೆ ಕೆಲಸ ಬಂದ್ ಮಾಡಿ ನಾವು ಹೋರಾಟಕ್ಕೆ ಧುಮುಕಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಖಜಾಂಜಿ ಮಹದೇವಮ್ಮ ತಿಳಿಸಿದ್ದಾರೆ.
ಬಿಸಿಯೂಟ ಕಾರ್ಯಕರ್ತೆಯರ ಬೇಡಿಕೆಗಳು :
*60 ವರ್ಷ ಮೇಲ್ಪಟ್ಟ ನೌಕರರನ್ನು ಕೆಲಸದಿಂದ ವಜಾಗೊಳಿಸುವಾಗ 1 ಲಕ್ಷ ನಿವೃತ್ತಿ ವೇತನ ಕೊಡಬೇಕು
*ಬಿಸಿಯೂಟ ನೌಕರರನ್ನು ಖಾಯಂಗೊಳಿಸಬೇಕು, ಇವರನ್ನು ಸರ್ಕಾರಿ ಕಾರ್ಮಿಕರೆಂದು ಗುರುತಿಸಬೇಕು
*ಬಜೆಟ್ ನಲ್ಲಿ ಘೋಷಣೆ ಮಾಡಿದ್ದ 1 ಸಾವಿರ ರೂ. ಗಳನ್ನು ಜಾರಿ ಮಾಡಬೇಕು.
*ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಕಟ್ಟಿಕೊಡಬೇಕು.
*ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ನೀಡಬೇಕು
*ಬಿಸಿಯೂಟ ನೌಕರರ ವೇತನವನ್ನು 5 ಸಾವಿರಕ್ಕೆ ಹೆಚ್ಚಳ ಮಾಡಬೇಕು.