ಗಿಫ್ಟ್ ಕೂಪನ್ ಆಸೆಗೆ ಬಿದ್ದು 65 ಸಾವಿರ ರೂಪಾಯಿ ಕಳೆದುಕೊಂಡ ಕುರಿಗಾಹಿ

ತುಮಕೂರು: ಗಿಫ್ಟ್ ಕೂಪನ್ ಆಸೆಯಿಂದ ಕುರಿಗಾಹಿಯೊಬ್ಬರು 65 ಸಾವಿರ ರೂಪಾಯಿಯನ್ನು ಕಳೆದುಕೊಂಡ ಘಟನೆ ನಡೆದಿದೆ.

 

ಮಧುಗಿರಿ ತಾಲೂಕು ದೊಡ್ಡೇರಿಯ ರಂಗನಾಥ್​  ಎಂಬುವವರೇ ಈ ವಂಚನೆಗೆ ಒಳಗಾದವರು. ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ಬರುವ ಗಿಫ್ಟ್​ ಕೂಪನ್​ ಆಸೆಗಾಗಿ   ಇದ್ದ ಹಣವನ್ನೂ ಕಳೆದುಕೊಂಡಿದ್ದಾರೆ. ಇವರಿಗೆ ಗಿಫ್ಟ್​ ಕಾರ್ಡ್​ನ ಸ್ಕ್ರಾಚ್​ ಮಾಡಿದ ವೇಳೆ 12.50 ಲಕ್ಷ ರೂ. ನಗದು ಬಹುಮಾನ ಬಂದಿದ್ದು, ಇದನ್ನು ಪಡೆಯುವ ಆಸೆಗೆ ಈವರೆಗೆ 65 ಸಾವಿರ ರೂ. ಕಳೆದುಕೊಂಡಿದ್ದಾರೆ.

ರಂಗನಾಥ್​ ಅವರ ಮನೆ ವಿಳಾಸಕ್ಕೆ ಪ್ರತಿಷ್ಠಿತ ಕಂಪನಿಯೊಂದರ ಹೆಸರಲ್ಲಿ ಕೂಪನ್​ ಬಂದಿದ್ದು, ನಂತರ ಮೊಬೈಲ್​ ಸಂಖ್ಯೆ 9355059216 ನಿಂದ ಕರೆ ಮಾಡಿ ‘ನಿಮಗೆ ಕೂಪನ್​ ಮೂಲಕ ಬಂದಿರುವ 12.50 ಲಕ್ಷ ರೂಪಾಯಿ ವರ್ಗಾಯಿಸಲು ಜಿಎಸ್​ಟಿ ಹಣ ಪಾವತಿಸಬೇಕು. ಆಗ ನಿಮಗೆ ಹಣ ವರ್ಗಾಯಿಸಲು ಸಾಧ್ಯ’ವೆಂದು ಪುಸಲಾಯಿಸಲಾಗಿದೆ.

ಅದನ್ನು ನಂಬಿ ದೇವನಹಳ್ಳಿಯ ಎಸ್​ಬಿಎಂ ಶಾಖೆ ಖಾತೆ ಸಂಖ್ಯೆ 38500334422 ಹಾಗೂ 36049406861 ಗಳಿಗೆ ಹಂತ ಹಂತವಾಗಿ ಒಟ್ಟು 50,000 ರೂಪಾಯಿಯನ್ನು ರಂಗನಾಥ್​ ವರ್ಗಾಯಿಸಿದ್ದಾರೆ. ಆ ಬಳಿಕ 15,000 ರೂಪಾಯಿಯನ್ನು ಯುಪಿಐ ಟ್ರಾನ್ಸ್​ಫರ್​ ಮಾಡಿದ್ದಾರೆ.

ಸಿಕ್ಕಿದ್ದೇ ಚಾನ್ಸ್ ಅಂದುಕೊಂಡು ಇಷ್ಟಕ್ಕೆ ಸುಮ್ಮನಾಗದ ವಂಚಕರು, ಬೇರೆ ಬೇರೆ ಸಂಖ್ಯೆಯಿಂದ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ರಂಗನಾಥ್​ ಗೆ ಮೋಸದ ಜಾಲ ತಿಳಿದು ಬಂದಿದೆ. ಬಳಿಕ ಸೈಬರ್​ ಕ್ರೈಂ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿದ್ದಾರೆ.

Leave A Reply

Your email address will not be published.