ಮಂಗಳೂರು: ವಾಮಂಜೂರು ರುತ್ ಲೆಸ್ ಮರ್ಡರ್ ಕಂಪ್ಲೀಟ್ ಸ್ಟೋರಿ | ಅಪರಾಧಿ ಪ್ರವೀಣ್ ನನ್ನು ಬಿಡುಗಡೆ ಮಾಡಬೇಕು, ಯಾಕೆ ಗೊತ್ತೇ?!
ಇದು ಮಂಗಳೂರು ಹೊರವಲಯದ ವಾಮಂಜೂರು ಎಂಬಲ್ಲಿ ನಡೆದ ಭೀಕರ ಕೊಲೆ ಪ್ರಕರಣ. ಮನೆ ಮಗನಂತಿದ್ದ ವ್ಯಕ್ತಿಯೊಬ್ಬ ನಾಲ್ವರನ್ನು ಕೊಲೆ ನಡೆಸಿದ ಘಟನೆಗೆ 28 ವರ್ಷಗಳೇ ಸಂದಿವೆ. ಸದ್ಯ ಆರೋಪಿಗೆ ಸರ್ಕಾರ ಮರಣ ದಂಡನೆ ವಿಧಿಸಿ, ಬಳಿಕ ಜೀವಾವಧಿ ಶಿಕ್ಷೆಗೆ ಖಾಯಂಗೊಳಿಸಲಾಗಿದ್ದು, ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ಮುಂದಾಗಿದ್ದು, ಈಗ ಸ್ವತಃ ಕುಟುಂಬಿಕರೇ ಆತನ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ಬಿಡುಗಡೆಗೊಳಿಸದಂತೆ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸಭೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು , 58 ಮಂದಿ ಸ್ವಯಂ ಪ್ರೇರಿತರಾಗಿ ಸಾಕ್ಷಿ ನುಡಿದಿದ್ದ, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿ, ಬಳಿಕ ಪೊಲೀಸರ ನಿರ್ಲಕ್ಷ್ಯದಿಂದಲೇ ಎಸ್ಕೇಪ್ ಆಗಿ ನಾಲ್ಕು ವರ್ಷಗಳ ಬಳಿಕ ಸಿಕ್ಕಂತಹ ಉಪ್ಪಿನಂಗಡಿಯ ಪೆರಿಯಡ್ಕ ನಿವಾಸಿ, ಮೃತ ಅಪ್ಪಿ ಶೇರಿಗಾರ್ತಿಯ ಹತ್ತಿರದ ಸಂಬಂಧಿ ಪ್ರವೀಣ್ ಗೆ ಜೈಲಿನಿಂದ ಮುಕ್ತಿ ಸಿಗುತ್ತದೆಯೇ ಎನ್ನುವುದು ಪ್ರಶ್ನೆಯಾಗುಳಿದಿದೆ. ಆತನನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆ ಬೇಡವೇ ಎಂಬ ಬಗ್ಗೆ ನಾವಿವತ್ತು ಚರ್ಚೆ ನಡೆಸಲಿದ್ದೇವೆ. ಅದಕ್ಕೂ ಮೊದಲು ಸರಿಸುಮಾರು ಮೂರು ದಶಕಗಳ ಹಿಂದೆ ನಡೆದ ಒಂದು ಡೆಡ್ಲಿ ಕ್ರೈಮ್ ರಿಪೋರ್ಟ್ ಅನ್ನು ಓದಿಕೊಂಡು, ನಂತರ ಚರ್ಚೆಗೆ ಇಳಿದರೆ ಅದು ಸೂಕ್ತವಾದೀತು.
1994 ರ ಫೆಬ್ರವರಿ 23. ಇಂದಿಗಿಂತ 28 ವರ್ಷಗಳ ಹಿಂದೆ….!
ಅಲ್ಲಿ ಅಂದು ಮುಂಜಾನೆ ಹೊತ್ತಿಗೆ ಸಣ್ಣ ಚಳಿ ಬಿದ್ದಿತ್ತು. ಅತ್ತ ಪೇಟೆಗೆ ಅಂಟಿಕೊಳ್ಳದೆ ದೂರವೇ ಇರುವ, ಅತ್ತ ಪೇಟೆಯೂ ಅಲ್ಲ, ಇತ್ತ ಹಳ್ಳಿಯೂ ಅಲ್ಲ ಎಂಬಂತಿದ್ದ ಮಂಗಳೂರಿನ ಹೃದಯಭಾಗಕ್ಕೆ ಕೆಲವೇ ಕಿಲೋಮೀಟರಗಳ ದೂರದಲ್ಲಿರುವ ವಾಮಂಜೂರಿನ ಬೀದಿಯೊಂದರ ಬಳಿ ರಕ್ತದ ವಾಸನೆ ಮೂಡಿತ್ತು. ಅಲ್ಲಿ ಅಮಾಯಕ ಹೆಂಗಸರ, ಗಂಡಸರ ಮತ್ತು ಮಕ್ಕಳೆಂದೂ ನೋಡದೆ ಭೀಕರವಾಗಿ ಹತ್ಯೆ ನಡೆಸಲಾಗಿತ್ತು.
ಅಂದಿನ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ ವಾಮಂಜೂರು ಎಂಬಲ್ಲಿ ಪಿಲಿಕುಳ ನಿಸರ್ಗಧಾಮಕ್ಕೆ ತೆರಳುವ ದಾರಿಯಲ್ಲಿ ಸಿಗುವ ಮನೆಯೊಂದರಲ್ಲಿ ನಾಲ್ವರನ್ನು ಭೀಕರವಾಗಿ ಕೊಂದು ಹಾಕಲಾಗಿತ್ತು. ಹಾಗೆ ಕಟುಕ ಮೆರೆದ ಕ್ರೌರ್ಯಕ್ಕೆ ರಕ್ತ ಹರಿದು ಹೋಗಿತ್ತು. ಆ ಮನೆಯಲ್ಲಿ ವಾಸವಿದ್ದ ಅಪ್ಪಿ ಶೇರಿಗಾರ್ತಿ, ಅವರ ಮಗಳು ಶಕುಂತಲಾ, ಮಗ ಗೋವಿಂದ ಹಾಗೂ ಮೊಮ್ಮಗಳಾದ ದೀಪಿಕಾ ನಾಲ್ವರ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಎಂದಿನಂತೆ ಆ ದಿನವೂ ಮನೆಗೆ ಹಾಲು ಹಾಕಲು ಬಂದಿದ್ದ ಬಾಲಕಿಯೊಬ್ಬಳ ಗಮನಕ್ಕೆ ಮೊದಲಿಗೆ ಈ ಕೊಲೆ ವಿಚಾರವು ತಿಳಿದು ಬರುತ್ತದೆ. ಕೆಲ ಹೊತ್ತಿನಲ್ಲೇ ವಾಮಂಜೂರು ಪ್ರದೇಶದೆಲ್ಲೆಡೆ ಸುದ್ದಿ ಹಬ್ಬಿದ್ದು, ಸಾವಿರಾರು ಮಂದಿ ಆತಂಕದಿಂದ ಸ್ಥಳಕ್ಕೆ ಗುಂಪಾಗಿ ಆಗಮಿಸಿದ್ದರು. ಸುಮಾರು 11 ಗಂಟೆಯ ಸುಮಾರಿಗೆ, ಸ್ವಲ್ಪ ತಡವಾಗಿ ಪೊಲೀಸರಿಗೆ ಮಾಹಿತಿ ದೊರಕಿದ್ದು, ಆ ಕೂಡಲೇ ಸ್ಥಳಕ್ಕೆ ಧಾವಿಸಿದ್ದರು.
ಪೊಲೀಸರ ತನಿಖೆ-ಕುತೂಹಲ ಕೆರಳಿಸಿದ ಆರೋಪಿಯ ಬಂಧನ
ಘಟನೆಯ ಭೀಕರತೆ ಅರಿತ ಹಿರಿಯ ಅಧಿಕಾರಿಗಳಾದ ಅಂದಿನ ಎಸ್ಪಿ ಎ.ಎಂ ಪ್ರಸಾದ್, ಅಂದಿನ ಡಿ.ಜಿ.ಪಿ ಕುಚ್ಚಣ್ಣ ಶ್ರೀನಿವಾಸ್,ಅಡ್ಡಿಷನಲ್ ಎಸ್ಪಿ ಪಾಂಡುರಂಗ ಎಚ್ ರಾಣೆ,ಇನ್ಸ್ಪೆಕ್ಟರ್ ಜೆ. ಪಾಪಯ್ಯ, ಸಬ್ ಇನ್ಸ್ಪೆಕ್ಟರ್ ವಿಶ್ವನಾಥ್ ಸ್ಥಳಕ್ಕೆ ಆಗಮಿಸಿದ್ದು, ಘಟನೆ ಕಂಡು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಲು ತಂಡ ರಚಿಸಿದರು. ಘಟನೆಯು ಮೇಲ್ನೋಟಕ್ಕೆ ದರೋಡೆಗಾಗಿ ನಡೆಸಿದಂತೆ ಕಂಡಿದ್ದು, ಪೊಲೀಸರ ಮೊದಲ ಅನುಮಾನ ಹಾಗೂ ತನಿಖೆ ಆ ಆಯಾಮದಲ್ಲಿಯೇ ಪ್ರಾರಂಭವಾಗಿತ್ತು. ಈ ವೇಳೆಗಾಗಲೇ ಇಡೀ ವಾಮಂಜೂರು ಪ್ರದೇಶ ಆತಂಕಗೊಂಡಿದ್ದು, ಈ ಘಟನೆಗೆ ಕೇವಲ ಹತ್ತು ವರ್ಷಗಳ ಹಿಂದೆ, ಅಂದರೆ 1986-87 ನೇ ಇಸವಿಯಲ್ಲಿ ದಕ್ಷಿಣ ಕನ್ನಡ- ಕಾಸರಗೋಡು ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದ್ದ ರಿಪ್ಪರ್ ಚಂದ್ರನ್ ಗ್ಯಾಂಗ್ ನಂತಹ ಇನ್ನೊಂದು ಗ್ಯಾಂಗ್ ಹುಟ್ಟಿಕೊಂಡಿದೆಯೇ ಎನ್ನುವ ಪ್ರಶ್ನೆಯ ಜೊತೆಗೆ ಭಯದ ವಾತಾವರಣ ಸೃಷ್ಟಿಯಾಗಿತ್ತು.
ಆಗ ತನಿಖೆಗೆ ಇಳಿದವರು ಸ್ವತಃ ಕರಾವಳಿಯವರೇ ಆದ ಖಡಕ್ ಪೊಲೀಸ್ ಅಧಿಕಾರಿ ಜಯಂತ್ ವಿ. ಶೆಟ್ಟಿಯವರು. ಅವರ ನೇತೃತ್ವದ ತಂಡ ಪಣಂಬೂರು ಸಬ್ ಡಿವಿಷನ್ ಸ್ಕಾಡ್, ಹಾಗೂ ಮನೋಹರ್ ಸೋನ್ಸ್ ನೇತೃತ್ವದ ಡಿಸಿಐಬಿ ಪೊಲೀಸರ ತಂಡ ಸ್ಥಳ ಮಹಜರು ನಡೆಸಿದಲ್ಲಿಂದ ಹಿಡಿದು ಮನೆಯಲ್ಲಿ ಸಿಕ್ಕಂತಹ ಕೆಲವು ಸೂಕ್ಷ್ಮ ವಸ್ತುಗಳನ್ನು ತನಿಖೆಗೆ ಉಪಯೋಗಿಸಿಕೊಂಡರು. ಅಂದಿನ ಡಿಸಿಐಬಿ ಸಿಬ್ಬಂದಿಯಾಗಿದ್ದ, ಹಲವು ಪತ್ತೇದಾರಿ ಪ್ರಕರಣದ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾರಾಯಣ ಮಣಿಯಾನಿ ತನಿಖೆಯಲ್ಲಿ ಕೊಂಚ ತಿರುವು ಕಂಡುಕೊಳ್ಳಲು ಘಟನೆಯನ್ನು ಮೊದಲು ಕಂಡ ಬಾಲಕಿಯ ಹೇಳಿಕೆಯನ್ನು ಮತ್ತೊಮ್ಮೆ ದಾಖಲಿಸಿಕೊಂಡರು. ಇಲ್ಲಿ ಇಡೀ ಪ್ರಕರಣ ತಿರುವು ಕಂಡಿದ್ದು, ಮನೆಯೊಳಗೇ ಇದ್ದವರಿಂದಲೇ ಕೃತ್ಯ ನಡೆದಿದೆ ಎನ್ನುವ ಅನುಮಾನವೊಂದು ಪೊಲೀಸರಿಗೆ ಕಾಡಿದ್ದು, ಆಗ ತನಿಖೆ ಸರಿಯಾದ ದಿಕ್ಕಿಗೆ ತಿರುಗಿ ನಿಲ್ಲುತ್ತದೆ. ತನಿಖೆ ಏಕಾಏಕಿ ವೇಗ ಪಡೆದುಕೊಳ್ಳುತ್ತದೆ.
ಕೂಡಲೇ ಪೊಲೀಸರು, ಆ ಮನೆಗೆ ಇರುವ ಆಪ್ತರು ಯಾರು, ನೆಂಟರು ಯಾರು ? ಯಾರೆಲ್ಲ ಮನೆಗೆ ಬಂದು ಹೋಗ್ತಾರೆ, ಮನೆಗೆ ಯಾರು ಬಂದಿದ್ದರು ಹೀಗೆ ಹಲವು ಹಲವು ಪ್ರಶ್ನೆಗಳನ್ನು ತಾವೇ ಸೃಷ್ಟಿಸಿಕೊಂಡು, ನಂತರ ಅದಕ್ಕೆ ತಾವೇ ಉತ್ತರ ಕಂಡುಕೊಳ್ಳುವ ಇನ್ವೆಸ್ಟಿಗೇಟೀವ್ ಮೋಡ್ ಗೆ ಇಳಿದು ಬಿಡುತ್ತಾರೆ. ಹಾಗೆ ನಡೆಸಿದ ಎಲ್ಲ ಪ್ರಶ್ನಾರ್ಥಕ ವಿಚಾರಣೆಗಳಲ್ಲೂ ಎಲ್ಲರ ಕೈ ಪ್ರವೀಣನನ್ನೇ ಬೊಟ್ಟು ಮಾಡಿ ತೋರಿಸುತ್ತವೆ. ಆ ಹಿನ್ನೆಲೆಯಲ್ಲಿ ಪೊಲೀಸರ ತಂಡ ಕುತ್ತಾರಿನಲ್ಲಿರುವ ಪ್ರವೀಣನ ಅತ್ತೆ ಮನೆಯತ್ತ ಸ್ಟೇರಿಂಗ್ ತಿರುಗಿಸುತ್ತಾರೆ. ಅಲ್ಲಿ ಸಿಕ್ಕಿದ ಮಾಹಿತಿಗೂ ಘಟನೆಗೂ ಒಂದಕ್ಕೊಂದು ಲಿಂಕ್ ಆಗಿದ್ದು ಪೊಲೀಸರ ಅನುಮಾನ ಇನ್ನಷ್ಟು ಬಲಗೊಳ್ಳುತ್ತದೆ. ತನಿಖೆಯಲ್ಲಿ ಕುತೂಹಲ ಹೆಚ್ಚಾಗುತ್ತದೆ.
ಮನೆ ಮಂದಿಯನ್ನೇ ನಂಬಿಸಿದ್ದ
ಕೃತ್ಯ ಎಸಗಿದ ಬಳಿಕ ಉಪ್ಪಿನಂಗಡಿಗೆ ಬಂದಿದ್ದ ಪ್ರವೀಣನಿಗೆ ದಾರಿಯಲ್ಲಿ ಆತನ ತಂದೆ ತಾಯಿ ಎದುರಾಗಿದ್ದು,ಈತನನ್ನು ಕಂಡ ಕೊಡಲೇ ಅತ್ತೆ ಹಾಗೂ ಮಕ್ಕಳನ್ನು ಕೊಂದಿದ್ದಾರೆ ಅಲ್ಲಿಗೆ ಹೊರಟಿದ್ದೇವೆ ಎಂದಿದ್ದಾರೆ. ಬಳಿಕ ಪ್ರವೀಣ ಮನೆ ಕಡೆಗೆ ಹೋಗಿದ್ದು, ಆತನ ಹೆತ್ತವರು ವಾಮಂಜೂರಿಗೆ ಬಂದಿದ್ದರು. ಮಾರನೇ ದಿನ ನಾಲ್ವರ ಅಂತ್ಯಸಂಸ್ಕಾರಕ್ಕೂ ಪ್ರವೀಣ ಬಂದಿದ್ದು, ಯಾರಿಗೂ ಅನುಮಾನ ಬಾರದಂತೆ ಎಲ್ಲಾ ಕಾರ್ಯದಲ್ಲೂ ಆತ ಪಾಲು ಪಡೆದಿದ್ದ. ಅಲ್ಲಿ ಸತ್ತವರ ಸಾವಿಗೆ ಆತ ಇತರ ಜನರ ಜೊತೆ ತಾನೂ ಮರುಗಿದ್ದ.
ಬಳಿಕ ಪೊಲೀಸರ ತಂಡ ಉಪ್ಪಿನಂಗಡಿಗೆ ಬಂದಿಳಿಯುತ್ತದೆ. ಹಾಗೆ ಬಂದವರೇ ನೇರ ಪ್ರವೀಣನ ಮನೆಗೆ ತೆರಳಿ ಮನೆಮಂದಿಯನ್ನು ವಿಚಾರಿಸಿ ಬಳಿಕ ಯಾವುದೇ ಅನುಮಾನ ಬಾರದಂತೆ ಪ್ರವೀಣನನ್ನು ಮಂಗಳೂರಿನತ್ತ ಕರೆ ತಂದಿದ್ದರು. ಬರುವಾಗ ದಾರಿಯ ಮಧ್ಯ ಆತನಿಗೆ ಒಳ್ಳೆಯ ಮೀನು ಊಟ ಕೂಡಾ ಮಾಡಿಸಿದ್ದರು. ಆತ ಕೂಡಾ ಚಪ್ಪರಿಸಿ ಮೀನೂಟ ಸವಿದಿದ್ದ. ಹೀಗೆ ಕರೆತರುತ್ತಿರುವಾಗ ಆತನೊಂದಿಗೆ ಊಟ ಮಾಡಿದ ಪೊಲೀಸರು ಬಳಿಕ ಆತನ ಬಾಯಿಯಿಂದಲೇ ಒಂದೊಂದೇ ಮಾಹಿತಿಯನ್ನು ಆತನ ಅರಿವಿಗೆ ಬರದಂತೆ ಉದುರಿಸಲು ಶುರುಮಾಡಿದ್ದರು.
ಘಟನೆ ನಡೆದ ಎರಡನೇ ದಿನ ಸ್ಥಳಕ್ಕೆ ಆತನನ್ನು ಪೊಲೀಸರು ಕರೆ ತಂದಾಗ ಎಲ್ಲರಿಗೂ ಆಶ್ಚರ್ಯ. ಮನೆ ಮಗನೇ ಕೃತ್ಯ ಎಸಗಿದ್ದಾನೆ ಎನ್ನುವ ವಿಚಾರ ಬರುತ್ತಿದ್ದಂತೆ ಪ್ರವೀಣ ಅಲ್ಲೊಂದು ನಾಟಕ ನಡೆಸಿದ್ದು, ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿ ಒಪ್ಪಿಸಿದ್ದಾರೆ ಎನ್ನುತ್ತಾನೆ. ಇದನ್ನು ಕೇಳಿದ ಮನೆಮಂದಿ ಪೊಲೀಸರ ಮೇಲೆಯೇ ಮುಗಿಬೀಳಲು ಮುಂದಾಗಿದ್ದರು. ಆಗ ಪೊಲೀಸರು ಆರೋಪಿಯನ್ನು ಪುನಃ ಕರೆತಂದು ಬಿಸಿಬಿಸಿ ಕಜ್ಜಾಯ ನೀಡಿದ್ದಲ್ಲದೆ, ಆತನನ್ನು ಕರೆದುಕೊಂಡು ಹೋಗಿ ಆತ ಅಡಗಿಸಿಟ್ಟಿದ್ದ ಬಂಗಾರವನ್ನು ವಶಕ್ಕೆ ತೆಗೆದುಕೊಂಡಾಗ ಜನರಲ್ಲಿನ ಅನುಮಾನಕ್ಕೆ ಮುಕ್ತಿ ಸಿಗುತ್ತದೆ, ಅಲ್ಲದೇ ಪ್ರವೀಣನೇ ನೈಜ ಆರೋಪಿ ಎನ್ನುವುದು ತಿಳಿಯುತ್ತದೆ.
ಆರೋಪಿ ಪ್ರವೀಣ ಯಾರು?
ಆರೋಪಿ ಪ್ರವೀಣ ಮೃತ ಅಪ್ಪಿ ಶೇರಿಗಾರ್ತಿಯ ಅಳಿಯನಾಗಿದ್ದು, ಮನೆ ಮಗನಂತೆಯೇ ಇದ್ದ ಆತ ವೃತ್ತಿಯಲ್ಲಿ ಟೈಲರ್. ಮಂಗಳೂರಿನಿಂದ ಹೊಲಿಗೆಗೆ ಬಟ್ಟೆಗಳನ್ನು ಕೊಂಡು, ಹೊಲಿಗೆಯ ಬಳಿಕ ಮರಳಿಸಿ ವಾಮಂಜೂರಿನಲ್ಲಿರುವ ಅತ್ತೆ ಮನೆಗೆ ಬಂದು ಹೋಗುತ್ತಿದ್ದ. ಅಲ್ಲೇ ಅತ್ತೆ ಮನೆಯಲ್ಲಿ ಉಣ್ಣುತ್ತಿದ್ದ. ಹಾಗೆ ಉಂಡ ಮನೆಗೆ, ಮನೆ ಮಗನಂತೆ ಊಟ ಕೊಟ್ಟು, ಮನೆಯಲ್ಲೇ ಆಶ್ರಯ ನೀಡಿದ್ದ ಮಹಾತಾಯಿಯೊಬ್ಬರ ಮನೆಯನ್ನೇ ಮಸಣ ಮಾಡಿದ್ದ ಈ ಪ್ರವೀಣ್. ಈಗ ಹಣದ ಆಸೆಗಾಗಿ ನಾಲ್ವರನ್ನು ಕೊಂದು ಮುಗಿಸಿ ಏನೂ ತಿಳಿಯದವನಂತೆ ಜಾಗ ಖಾಲಿ ಮಾಡಿದ್ದ.
ರಾಮಣ್ಣನ ಹರಕೆ-ಮಗನೇ ಆರೋಪಿ !
ಪ್ರವೀಣನ ತಂದೆ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಯಾರು ಕೃತ್ಯ ಎಸಗಿದ್ದಾರೆಯೋ ಕೂಡಲೇ ಅವರ ಬಂಧನವಾಗಿ ಕಠಿಣ ಶಿಕ್ಷೆಯಗಬೇಕು ಎಂದು ಕಾರ್ಣಿಕ ದೈವಕ್ಕೆ ಹರಕೆ ಹೇಳಿಕೊಂಡಿದ್ದರಂತೆ. ಹರಕೆ ಹೇಳಿದ ಒಂದು ವಾರದ ಒಳಗೆ ನೈಜ ಆರೋಪಿಯ ಬಂಧನವಾಗಿದ್ದು, ಯಾರೂ ಊಹಿಸದ ಆರೋಪಿ ಪ್ರವೀಣನನ್ನು ಪೊಲೀಸರು ಹೆಡೆಮುರಿಕಟ್ಟಿದ್ದು, ಆತನ ಹೆತ್ತವರೂ ಸೇರಿ ಇಡೀ ಕುಟುಂಬವೇ ಸೂತಕದ ಮೌನ ಮುರಿದು ಆರೋಪಿಯ ಬಗ್ಗೆ ಆಕ್ರೋಶ ಹೊರಹಾಕಿದ್ದರು.
ಪೊಲೀಸರ ಎಡವಟ್ಟು ಆರೋಪಿ ಪರಾರಿ
ಹೌದು. ಘಟನೆಯ ಬಳಿಕ ಬಂಧನವಾಗಿದ್ದ ಪ್ರವೀಣನನ್ನು ಬೆಳಗಾವಿಯ ಹಿಂಡಲಗ ಜೈಲಿಗೆ ಕಳುಹಿಸಲಾಗಿದ್ದು, ವಿಚಾರಣೆಯ ಹಿನ್ನೆಲೆಯಲ್ಲಿ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆತರುವ ದಿನ ಇಬ್ಬರು ಸಿಬ್ಬಂದಿಗಳು ಬಸ್ಸಿನ ಮೂಲಕ ಕರೆತರುತ್ತಿದ್ದರು. ಹೀಗೆ ಕರೆತರುತ್ತಿರುವಾಗ ಪ್ರವೀಣ ಪೊಲೀಸರ ಎಡವಟ್ಟಿನಿಂದ ತಪ್ಪಿಸಿಕೊಂಡಿದ್ದು, ಈ ಘಟನೆಯು ಇಡೀ ಪೊಲೀಸ್ ಇಲಾಖೆಗೆ ದೊಡ್ಡ ಕಪ್ಪು ಚುಕ್ಕಿಯನ್ನು ನಡುಹಣೆಗೆ ತಂದು ಇಟ್ಟಿತು. ಪೊಲೀಸರ ತನಿಖೆ ಮತ್ತು ಒಂದು ವಾರದ ಶ್ರಮವೆಲ್ಲಾ ಇಲ್ಲಿ ವ್ಯರ್ಥವಾಗಿದ್ದು, ಹೀಗೆ ಮುಂದೂಡಿದ ವಿಚಾರಣೆ ಆರೋಪಿಯ ಪತ್ತೆಯಾಗುವವರೆಗೆ ಹಾಗೇ ಉಳಿದಿತ್ತು. ಆರೋಪಿ ಯಾರ ಕೈಗೂ ಸಿಗದೇ, ಎಲ್ಲೂ ಗೋಚರ ಕೂಡಾ ಆಗದೆ ಅದೃಶ್ಯನಾಗಿ ಹೋಗಿದ್ದ.
ಆಗ ಅದೇ ಆರೋಪಿ ಪ್ರವೀಣನ ಕುಟುಂಬ ಪೋಲೀಸರ ಸಹಾಯಕ್ಕೆ ಇಳಿದಿತ್ತು. ಆಗಲೇ ನಾಲ್ಕು ವರ್ಷ ಕಳೆದು ಹೋಗಿತ್ತು. ಸುಮಾರು ನಾಲ್ಕು ವರ್ಷಗಳ ಬಳಿಕ, ಮೃತರ ಕುಟುಂಬಸ್ಥರು ಪೇಪರ್ ನಲ್ಲಿ ಜಾಹೀರಾತು ಹಾಕಿದ್ದು, ಪ್ರವೀಣನ ಗುರುತು ಪತ್ತೆಮಾಡಿದವರಿಗೆ ಒಂದು ಲಕ್ಷ ಬಹುಮಾನ ಘೋಷಣೆ ಮಾಡಿದ್ದರು. ಆ ಜಾಹೀರಾತು ಕಂಡ ಗೋವಾ ಮೂಲದ ಯುವಕನೊಬ್ಬ ಬಂದರು ಪೊಲೀಸ್ ಠಾಣೆಗೆ ಕರೆ ಮಾಡುತ್ತಾನೆ. ಮಂಗಳೂರಿನಿಂದ ತಪ್ಪಿಸಿಕೊಂಡು ಹೋಗಿದ್ದ ಪ್ರವೀಣ ಗೋವಾದಲ್ಲಿ ಟೈಲರ್ ಶಾಪ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದು, ಅಲ್ಲೇ ಯಲ್ಲಾಪುರ ಮೂಲದ ಯುವತಿಯೊಬ್ಬಳನ್ನು ಮದುವೆಯಾಗಿ ಒಂದು ಮಗು ಕೂಡಾ ಕರುಣಿಸಿ ಟೈಲರಿಂಗ್ ಕೆಲಸ ಮಾಡುತ್ತಾ ಹಾಯಾಗಿದ್ದ. ಇತ್ತ ಖಚಿತ ಮಾಹಿತಿಯನ್ನು ಆಧರಿಸಿ ಮಂಗಳೂರು ಪೊಲೀಸರ ತಂಡ ಗೋವಾದತ್ತ ತೆರಳಿದ್ದು, ಅಲ್ಲಿ ಆತನ ಮನೆಯಲ್ಲೇ ಮುದ್ದೆ ಮಾಡಿಕೊಂಡು ವಶಕ್ಕೆ ಪಡೆದು ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೆ.
ಹೀಗೆ ಹಾಜರು ಪಡಿಸಿದ ಬಳಿಕ ಆತನನ್ನು ಪುನಃ ಬೆಳಗಾವಿಯ ಹಿಂಡಲಗ ಜೈಲಿಗೆ ಕಳುಹಿಸಿದ್ದು, ಆತನಿಗೆ ಮರಣ ದಂಡನೆ ವಿಧಿಸಲಾಗಿತ್ತು. ಆತ ಅದರ ಮೇಲೆ ಮೇಲ್ಮನವಿ ಹೋಗುತ್ತಾನೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರವೀಣನಿಗೆ ಗಲ್ಲು ಶಿಕ್ಷೆ ಜೀವಾವಧಿಗೆ ಬದಲಾಗಿದೆ. ಇದೆಲ್ಲ ಹಳೆಯ ಕಥೆ. ಘಟನೆ ನಡೆದು 28 ವರ್ಷಗಳೇ ಆಗಿ ಹೋಗಿದೆ.
ಜೈಲಿನಲ್ಲಿ ಹೇಗಿದ್ದ ಪ್ರವೀಣ್ ?
ಜೈಲಿನಲ್ಲಿ ತನ್ನ ಪಾಡಿಗೆ, ಜೈಲರ್ ಕೊಟ್ಟ ಕೆಲಸವನ್ನು ಮಾಡುತ್ತಾ ತನ್ನ ಪಾಡಿಗೆ ಇದ್ದ ಪ್ರವೀಣ್. ಜೈಲು ಎಂದರೆ ಅದು ಕೂಡಾ ಒಂದು ಸಮಾಜ ತಾನೇ? ಅಲ್ಲೂ ಜನ ಇರತಾರೆ. ಒಳಗೆ ಖೈದಿಗಳು ಬೆರೆಯಲು ಸಮಯ ಇರ್ತದೆ. ಪರಸ್ಪರ ಪ್ರೊವೋಕ್ ಆಗಲು ಅವಕಾಶ ಕೂಡಾ ಇರ್ತದೆ. ಅಂತಹ ಕಡೆಗಳಲ್ಲಿ ಕೂಡಾ ಯಾವುದೇ ಗಲಾಟೆಗಳಿಲ್ಲದೆ, ವ್ಯಾಜ್ಯಗಳಿಗೆ ಹೋಗದೆ, ಸುದೀರ್ಘ 20 ವರ್ಷಗಳ ಕಾಲ ಆತ ಸನ್ನಡತೆ ತೋರ್ಪಡಿಸಿದ್ದಾನೆ. ಹಾಗೆ ಸರ್ಕಾರದ ನೀತಿಯಂತೆ ಸನ್ನಡತೆ ಆಧಾರದಲ್ಲಿ ಆತನ ಬಿಡುಗಡೆಗೆ ಸರ್ಕಾರ ಸಜ್ಜಾಗಿ ನಿಂತಿದೆ. ಆಗ ಎದ್ದಿದೆ ಕೂಗು : ಬೇರೆ ಯಾರದ್ದೂ ಅಲ್ಲ, ಆತನ ಸ್ವಂತ ಕುಟುಂಬದ್ದು : ” ಬಿಡಬೇಡಿ ಆತನನ್ನು !” ಈಗ ಅದಕ್ಕೆ ಜನರೂ ದನಿ ಕೂಡಿಸಿದ್ದಾರೆ. ಈಗ ರಾಜಕೀಯ ನಾಯಕರುಗಳು ಕೂಡಾ ಮನೆಯವರೊಂದಿಗೆ ಸೇರಿಕೊಂಡು ಪ್ರವೀಣನನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಗೃಹಮಂತ್ರಿ ಅರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಆದರೆ ಗೆಳೆಯರೇ, ಇನ್ನೊಂದು ಮುಖದಲ್ಲಿ ನಾವು ನೋಡೋಣ. ದೇಶದ ಪರಮೋಚ್ಚ ಪದವಿಯನ್ನು ಅಲಂಕರಿಸಿದ್ದ, ಪ್ರಧಾನಿ ಸ್ಥಾನದಲ್ಲಿ ಕುಳಿತಿದ್ದ ರಾಜೀವ್ ಗಾಂಧಿಯನ್ನು ಎಲ್ ಟಿ ಟಿ ಉಗ್ರ ಸಂಘಟನೆ ತಮಿಳುನಾಡಿನ ಶ್ರೀ ಪೆರುಂಬದೂರ್ ನಲ್ಲಿ ಮಾನವ ಬಾಂಬ್ ಉಡಾಯಿಸಿ ಕೊಲೆ ಮಾಡಿದ್ದರು. ಬಾಂಬಿನ ಮಾಲೆ ಹಾಕಿದ ಶುಭ ಜೊತೆ ರಾಜೀವ್ ಗಾಂಧಿಯವರು ಚಿದ್ರವಾಗಿ ಹೋಗಿದ್ದರು. ಆ ಕೊಲೆ ಆರೋಪಿಗಳಲ್ಲಿ ಒಬ್ಬನಾದ ಪೆರಾರಿವೇಲನ್ ಎಂಬಾತನನ್ನು ಶಿಕ್ಷೆ ಮುಗಿಸಿದ ನಂತರ ಕೋರ್ಟು ಬಿಡುಗಡೆ ಮಾಡಿದೆ. ಇದೀಗ ಮತ್ತೋರ್ವ ಆಪರಾಧಿ, ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ನಳಿನಿ ಇದೀಗ ತನ್ನ ಬಿಡುಗಡೆಗಾಗಿ ಪ್ರಯತ್ನಗಳನ್ನು ಮುಂದುವರಿಸಿದ್ದಾಳೆ. ಇಂದಲ್ಲ ನಾಳೆ ಪೆರಾರಿವೇಲನ್ ನಂತೆ ಆಕೆಯ ಬಿಡುಗಡೆ ಆಗುತ್ತದೆ. ಹೀಗೆ ಬಿಡುಗಡೆಯಾಗಿ ಬಂದ ಅವರಿಬ್ಬರೂ ಮತ್ತೆ ಇನ್ನೊಂದು ಪ್ರಧಾನಿಯ ಕೊಲೆಗೆ ಪ್ರಯತ್ನ ನಡೆಸುತ್ತಾರಾ ? ಅಥವಾ ಮತ್ತೆ ಎಲ್ಟಿಟಿಈ ಸಂಘಟನೆ ಅಥವಾ ಇನ್ಯಾವುದೋ ಸಂಘಟನೆಯನ್ನು ಸೇರಿಕೊಂಡು ಮತ್ತೆ ನರಮೇಧಕ್ಕೆ ಮನಸ್ಸು ಮಾಡುತ್ತಾರೆಯೇ? ಖಂಡಿತವಾಗಿಯೂ ನಿಮ್ಮ ಉತ್ತರ ಇಲ್ಲ ಎನ್ನುತ್ತದೆ. ಹಾಗೆ ಅಂದು ತೀರಿಕೊಂಡ ಪ್ರಧಾನಿಯ ಪತ್ನಿ ಮಕ್ಕಳು ಇವತ್ತು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಂಡಿದ್ದಾರೆ. ಅವರ್ಯಾರು ಪ್ರವೀಣನ ಕುಟುಂಬದಂತೆ ಅಪರಾಧಿಗಳನ್ನು ಬಿಡುಗಡೆ ಮಾಡಬಾರದೆಂದು ಸರಕಾರದ ಅಥವಾ ಕೋರ್ಟಿನ ಮೊರೆ ಹೋಗಿಲ್ಲ. ಕಾರಣ ಸಂದು ಹೋದ ಬಹುದೀರ್ಘ ಸಮಯದ ಕಾಲ !!
ಈಗ ಪ್ರವೀಣ ಬಿಡುಗಡೆಯ ವಿಷಯದಲ್ಲಿ ನೋಡಿದರೆ ಟೆಕ್ನಿಕಲಿ ಆತ ಬಿಡುಗಡೆಗೆ ಯೋಗ್ಯ. ಭಾವನಾತ್ಮಕ ವಿಷಯಗಳನ್ನು ಪಕ್ಕಕ್ಕೆ ಇರಿಸಿ ನೋಡೋಣ. ಒಂದು ವ್ಯಕ್ತಿ ಹೆಚ್ಚು ಕಮ್ಮಿ ತನ್ನ ಅರ್ಧ ಜೀವಮಾನವನ್ನು ಜೈಲಿನಲ್ಲಿ ನಿರಂತರವಾಗಿ ಒಳ್ಳೆಯ ಹೆಸರು ಪಡೆದುಕೊಂಡು ಬದುಕಿದ ಮೇಲೆ ಕೂಡ ಆತನ ಮೇಲೆ ದ್ವೇಷ ಸಾಧಿಸುವುದು ಎಷ್ಟರಮಟ್ಟಿಗೆ ಸರಿ ? 28 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ನಂತರ ಕೂಡ ಆತ ಹಳೆಯ ಪ್ರವೀಣನೇ ಆಗಿರುತ್ತಾನೆಯೇ?! ಆ ಸಾಧ್ಯತೆಗಳು ಹೆಚ್ಚುಕಮ್ಮಿ ಶೂನ್ಯ. ಆತನ ಪರವಾಗಿ ಇವತ್ತು ವಾದಕ್ಕೆ ಕೂತರೆ ಸಿಗುವುದು ಕಳೆದು ಹೋದ ಸಮಯದ ಮೌಲ್ಯ ಮಾತ್ರ. ಬೇರೆ ಯಾವುದೇ ವಿಷಯದ ಮೇಲೆ ಕೂಡ ಆತನ ಮೇಲೆ ಕರುಣೆ ತೋರಲು ಯಾರಿಗೂ ಕಾರಣ ಹುಡುಕಿದರೂ ಸಿಗುವುದಿಲ್ಲ. ಆದರೆ ಪ್ರತಿಯೊಂದಕ್ಕೂ ಒಂದು ಕಾಲಮಿತಿ ಎನ್ನುವುದು ಇರುತ್ತದೆ. ಆ ಕಾಲದ ಸಮಯದ ಪರಿಮಿತಿಯ ನಂತರ ಕೂಡ ಹಠ, ದ್ವೇಷ ಭಾವನೆ, ವಿನಾಕಾರಣದ ಊಹೆಗಳನ್ನು ಮಾಡಿಕೊಂಡು ಬದುಕುವುದು ಯಾಕೋ ಸರಿಯಲ್ಲ ಎನಿಸುತ್ತಿದೆ. ಇದೀಗ ಆತನನ್ನು ಬಿಡುಗಡೆ ಮಾಡಬಾರದೆಂದು ಒತ್ತಾಯ ಕೇಳಿ ಬಂದ ಮೇಲೆ ಗೃಹ ಸಚಿವರು ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ. ಸಚಿವರು ನಿರ್ಧಾರ ಕೈಗೊಳ್ಳಬೇಕಿರುವುದು ಅಧಿಕಾರಿಗಳ ಜೊತೆ ಚರ್ಚಿಸಿ ಅಲ್ಲ. ಕರ್ನಾಟಕದಲ್ಲಿ ದೊಡ್ಡ ದೊಡ್ಡ ಮನಶ್ಶ್ಯಾಸ್ತ್ರಜ್ಞರಿದ್ದಾರೆ. ವೈದ್ಯರುಗಳಿದ್ದಾರೆ, ಇಂತದೇ ನರ ಹಂತಕರನ್ನು ಪಳಗಿಸಿದ ಕೌನ್ಸಿಲ್ ಮಾಡಿದ ಕೌನ್ಸಿಲರ್ಗಳಿದ್ದಾರೆ. ಮುಖ ನೋಡಿ ವ್ಯಕ್ತಿತ್ವವನ್ನು ಅಳೆಯಬಲ್ಲ ಪಂಡಿತರುಗಳಿದ್ದಾರೆ. ಇಂತಹ ಪರಿಣಿತ ಜನರ ಮುಂದೆ ಪ್ರವೀಣನನ್ನು ನಿಲ್ಲಿಸಿ ಆತನ ಮಾಪನ ಮಾಡಿಸುವುದು ಉತ್ತಮ. ಆ ಮೌಲ್ಯಮಾಪನದಲ್ಲಿ ಆತ ಪಾಸಾದರೆ ಆತ ಬಿಡುಗಡೆಗೆ ಯೋಗ್ಯ. ಹಠವನ್ನು ದ್ವೇಷವನ್ನು ಸಾಯುವ ತನಕ ಎಳೆದುಕೊಂಡು ಹೋಗುವುದು ಮನುಷ್ಯತ್ವ ಅಲ್ಲ. ನೀವೇನಂತೀರಿ, ನಮಗೆ ಬರೆದು ತಿಳಿಸಿ.