ಕೊರೋನ ಪ್ರಕರಣ ಹೆಚ್ಚಳ ; ಅದ್ದೂರಿ ಗಣೇಶೋತ್ಸವಕ್ಕೆ ಬೀಳುತ್ತಾ ಬ್ರೇಕ್!

ಬೆಂಗಳೂರು : ಕೊರೋನ ಸಾಂಕ್ರಾಮಿಕ ಪಿಡುಗಿನ ಕಾರಣಕ್ಕೆ ಎರಡು ವರ್ಷಗಳಿಂದ ವಿಧಿಸಿದ್ದ ನಿರ್ಬಂಧವನ್ನು ಈ ಬಾರಿ ತೆರವುಗೊಳಿಸಿದ್ದು, ಕೊರೋನ ಪೂರ್ವದಲ್ಲಿದ್ದ ಹಾಗೆ ವೈಭವದಿಂದ ಗಣೇಶೋತ್ಸವ ಆಚರಿಸಬಹುದೆಂದು ಕಂದಾಯ ಸಚಿವರು ಸೋಮವಾರ ತಿಳಿಸಿದ್ದರು. ಆದರೆ, ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಹಬ್ಬಕ್ಕೆ ಕಠಿಣ ನಿಯಮಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ, ಇದೀಗ ರಾಜ್ಯ ಸರ್ಕಾರದಿಂದ ರಾಜ್ಯಾಧ್ಯಂತ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗಣೇಶ ಹಬ್ಬಕ್ಕೆ ಕಠಿಣ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಜನಜಂಗುಳಿ ಸೇರದಂತೆ ಗಣೇಶ ಹಬ್ಬಕ್ಕೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಕರ್ನಾಟಕಕ್ಕೆ ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿಯೂ ಗಣೇಶ ಹಬ್ಬಕ್ಕೆ ಹಲವು ನಿರ್ಬಂಧಗಳನ್ನು ಹೇರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ನಿನ್ನೆ ಕೋವಿಡ್ ನಿಯಂತ್ರಣ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ರಾಜ್ಯದಲ್ಲಿ ಇನ್ಮುಂದೆ ಮಾಸ್ಕ್ ಎಲ್ಲರೂ ಧರಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದು, ಕೊರೋನಾ ಹೆಚ್ಚಳ ಕಾರಣದಿಂದಾಗಿ 60 ವರ್ಷ ಮೇಲ್ಪಟ್ಟವರು ತಪ್ಪದೇ ಶೀಘ್ರವೇ 3ನೇ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆಯಬೇಕು ಎಂದು ಹೇಳಿದ್ದಾರೆ.

ಈ ಕಾರಣದಿಂದಾಗಿ ಈ ಬಾರಿಯೂ ಅದ್ದೂರಿ ಗಣೇಶೋತ್ಸವ ಸಂಭ್ರಮಕ್ಕೆ ಬ್ರೇಕ್ ಬೀಳುವ ಸೂಚನೆ ಇದ್ದು, ಹಲವು ನಿರ್ಬಂಧಗಳನ್ನು ಹೇರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

Leave A Reply