GST : ಇನ್ನು ಮುಂದೆ ಮನೆ ಬಾಡಿಗೆಗೂ ಜಿಎಸ್ ಟಿ!!!
ಎಲ್ಲರಿಗೂ ತಿಳಿದಿರುವ ಹಾಗೇ, ವಾಣಿಜ್ಯ ಆಸ್ತಿಗಳನ್ನು ಯಾರಾದರೂ ಬಾಡಿಗೆಗೆ ಪಡೆದರೆ ಮಾತ್ರ ಜಿಎಸ್ಟಿ ತೆರಬೇಕಾಗಿತ್ತು. ಆದರೆ ಇನ್ನು ಮುಂದೆ ಹಾಗಲ್ಲ. ಯಾರೇ ಜಿಎಸ್ಟಿ ನೋಂದಾಯಿತ ವ್ಯಕ್ತಿಗಳು ವಸತಿ ಮನೆ ಬಾಡಿಗೆದಾರರಾಗಿದ್ದರೂ ಜಿಎಸ್ಟಿ ಕಟ್ಟಲೇಬೇಕು. ಈ ಹೊಸ ಜಿಎಸ್ಟಿ ನಿಯಮದ ಅನುಸಾರ, ಜಿಎಸ್ಟಿ ನೋಂದಾಯಿತ ಉದ್ಯಮಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರೆ ಆತ ಬಾಡಿಗೆ ಕೊಡುವ ಹಣದ ಜೊತೆಗೆ ಶೇ.18 ರಷ್ಟು ಜಿಎಸ್ಟಿಯನ್ನು ಇನ್ನು ಮುಂದೆ ಪಾವತಿಸಬೇಕು. ಆದರೆ ಮನೆ ಮಾಲೀಕರು ಜಿಎಸ್ಟಿ ಪಾವತಿಸಬೇಕಿಲ್ಲ. ಸಾಮಾನ್ಯ ಸಂಬಳದಾರರು ಜಿಎಸ್ಟಿ ನೋಂದಾವಣೆ ಆಗದಿದ್ದರೇ ಜಿಎಸ್ಟಿ ಪಾವತಿಸಬೇಕಿಲ್ಲ.
ಹೊಸ ಜಿಎಸ್ಟಿ ನಿಯಮಗಳ ಪ್ರಕಾರ, ಮನೆಯ ತಿಂಗಳ ಬಾಡಿಗೆ 20 ಸಾವಿರ ರೂಪಾಯಿ ಇದ್ದರೆ, ಶೇ.18 ರಷ್ಟು ಜಿಎಸ್ಟಿಯಾಗಿ 3,600 ರೂಪಾಯಿ ಪಾವತಿಸಬೇಕು
ಕೇಂದ್ರ ಸರಕಾರ ಜುಲೈ 18ರಿಂದ ಈ ನಿಯಮ ಜಾರಿಗೆ ತರುತ್ತಿದೆ. ಜುಲೈ 18ರಿಂದ ಜಾರಿಯಾಗುತ್ತಿರುವ ಹೊಸ ನಿಯಮದ ಪ್ರಕಾರ ಜಿಎಸ್ ಟಿ ನಿಯಮದ ಪ್ರಕಾರ ನೋಂದಾಯಿತ ಬಾಡಿಗೆದಾರರಿಗೆ ಮಾತ್ರ ಈ ನಿಯಮ ಅನ್ವಯ ಆಗಲಿದೆ.
ಇದಕ್ಕೂ ಮುನ್ನ ವಾಣಿಜ್ಯ ಬಳಕೆದಾರರು ಅಂದರೆ ಕಚೇರಿ, ಅಂಗಡಿ, ಬಾಡಿಗೆ ಜಾಗಗಳಿಗೆ ಮಾತ್ರ ಜಿಎಸ್ ಟಿ ಅನ್ವಯ ಆಗುತ್ತಿತ್ತು. ಆದರೆ ಕಾರ್ಪೊರೇಟ್ ಹಾಗೂ ವೈಯಕ್ತಿಕ ಮನೆಗಳ ಬಾಡಿಗೆ ಅಥವಾ ಭೋಗ್ಯದ ಮೇಲೆ ಜಿಎಸ್ ಟಿ ವಿಧಿಸಲಾಗುತ್ತಿರಲಿಲ್ಲ. ಜಿಎಸ್ಟಿ ಅಡಿಯಲ್ಲಿ ನೋಂದಾಯಿತ ಬಾಡಿಗೆದಾರರಿಗೆ ಮಾತ್ರ ಈ ನಿಯಮ ಅನ್ವಯವಾಗುವುದು.
ಹೊಸ ನಿಯಮಗಳ ಪ್ರಕಾರ, ಜಿಎಸ್ಟಿ ನೋಂದಾಯಿತ ಬಾಡಿಗೆದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ. ಅದಾಗ್ಯೂ ಆತ ಇನ್ಪುಟ್ ತೆರಿಗೆ ಕ್ರೆಡಿಟ್ ಅಡಿಯಲ್ಲಿ ಪಾವತಿಸಿದ ಜಿಎಸ್ಟಿಯನ್ನು ಕಡಿತವಾಗಿ ಕ್ಲೈಮ್ ಮಾಡಬಹುದು. ಜಿಎಸ್ಟಿ ಅಡಿಯಲ್ಲಿ ನೋಂದಾಯಿಸಿಕೊಂಡಾಗ ಮತ್ತು ಜಿಎಸ್ಟಿ ರಿಟರ್ನ್ಗಳನ್ನು ಸಲ್ಲಿಸಲು ಹೊಣೆಗಾರನಾಗಿದ್ದರೆ ಮಾತ್ರ ತೆರಿಗೆ ಅನ್ವಯಿಸುತ್ತದೆ. ಆದರೆ ವಸತಿ ಆಸ್ತಿಯ ಮಾಲೀಕರು ಜಿಎಸ್ಟಿ ಪಾವತಿಸಲು ಜವಾಬ್ದಾರರಾಗಿರುವುದಿಲ್ಲ.
ಹೊಸ ನಿಯಮ ಯಾರ ಮೇಲೆ ಪ್ರಭಾವ ಬೀರಲಿದೆ?
ಜಿಎಸ್ಟಿ ಮಂಡಳಿಯ 47ನೇ ಸಭೆಯಲ್ಲಿ ಅನುಮೋದನೆಗೊಂಡ ಈ ಹೊಸ ಬಲದಾವಣೆಗಳು, ವಸತಿ ಕಟ್ಟಡಗಳನ್ನು ಬಾಡಿಗೆಗೆ ಅಥವಾ ಲೀಸಿಗೆ ಪಡೆದುಕೊಂಡಿರುವ ಕಂಪೆನಿಗಳು ಹಾಗೂ ವೃತ್ತಿಪರರ ಮೇಲೆ ಅನ್ವಯವಾಗಿದೆ. ಕಂಪೆನಿಗಳು ಗೆಸ್ಟ್ ಹೌಸ್ಗಳಿಗಾಗಿ ಅಥವಾ ಉದ್ಯೋಗಿಗಳ ವಸತಿಗಾಗಿ ಬಾಡಿಗೆಗೆ ಪಡೆದುಕೊಂಡಿರುವ ಕಟ್ಟಡದ ಬಾಡಿಗೆಗಳ ಮೇಲೆ ಶೇ 18 ಜಿಎಸ್ಟಿ ಪಾವತಿಸಬೇಕಿದೆ. ಇದರಿಂದಾಗಿ ಉದ್ಯೋಗಿಗಳಿಗೆ ಉಚಿತ ವಸತಿ ಒದಗಿಸುವ ಕಂಪನಿಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.