SSY : ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಉಳಿತಾಯ ಮಾಡಿ, ಹಲವು ಲಾಭ ಗಳಿಸಿ
2015 ರಲ್ಲಿ ಹೆಣ್ಣು ಮಕ್ಕಳ ಒಳಿತಿಗಾಗಿ ಪ್ರಾರಂಭಿಸಿದ ಯೋಜನೆಯೇ ಸುಕನ್ಯಾ ಸಮೃದ್ಧಿ ಯೋಜನೆ. ಸಣ್ಣ ಉಳಿತಾಯ ಯೋಜನೆಗಳಿಗೆ ಬೆಂಬಲ ನೀಡುವ ಸಲುವಾಗಿ ಭಾರತ ಸರ್ಕಾರ ಈ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯು ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಲು 10 ವರ್ಷ ವಯಸ್ಸಿನ ಒಳಗಿನ ಹೆಣ್ಣುಮಕ್ಕಳ ಪೋಷಕರಿಗೆ ಅವಕಾಶ ನೀಡುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ (SSY)ಯು ತೆರಿಗೆ-ಮುಕ್ತ ಆದಾಯವನ್ನು ನೀಡುತ್ತದೆ. 1961 ರ ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80C ಅಡಿಯಲ್ಲಿ ಒಂದು ಹಣಕಾಸಿನ ವರ್ಷದಲ್ಲಿ ಒಂದು ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯಲ್ಲಿ ರೂ 1.5 ಲಕ್ಷದವರೆಗಿನ ಹೂಡಿಕೆಯು ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ. ಈ ಯೊಜನೆಯು ಹಲವಾರು ವಿನಾಯಿತಿಯನ್ನು ನೀಡುತ್ತದೆ.
ಹೆಣ್ಣು ಮಗುವಿನ ಪೋಷಕರು ಸುಕನ್ಯಾ ಸಮೃದ್ಧಿ ಯೋಜನೆ (SSY) ಯಲ್ಲಿ ಹಣ ಹೂಡಿಕೆ ಮಾಡಿದರೆ, ಮುಂದಿನ 14 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಆದರೆ ತಮ್ಮ ಹೆಣ್ಣು ಮಗುವಿಗೆ 21 ವರ್ಷ ವಯಸ್ಸಾಗುವವರೆಗೆ ತಮ್ಮ ಸಂಪೂರ್ಣ ಹೂಡಿಕೆಯನ್ನು ಹಿಂಪಡೆಯಲು ಸಾಧ್ಯವಿಲ್ಲ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ ಶೇಕಡಾ 50 ರಷ್ಟು ಹಣವನ್ನು ಹಿಂಪಡೆಯುವ ಆಯ್ಕೆಯೂ ಇದೆ. ಆದರೆ, ಈ ಆಯ್ಕೆಯನ್ನು ಆರಿಸಿಕೊಳ್ಳದಿದ್ದರೆ ಮತ್ತು ಸಂಪೂರ್ಣ ಅವಧಿಗೆ 7.60% ಫ್ಲಾಟ್ SSY ಬಡ್ಡಿ ದರವನ್ನು ಊಹಿಸಿದರೆ, SSY ಕ್ಯಾಲ್ಕುಲೇಟರ್ ಅಂದಾಜಿನ ಪ್ರಕಾರ ಯೋಜನೆ ಪೂರ್ಣಗೊಳ್ಳುವ ಸಮಯದಲ್ಲಿ ಸುಮಾರು 64 ಲಕ್ಷ ರೂ. ಪಡೆಯಬಹುದಾಗಿದೆ.
ಹಣಕಾಸು ವರ್ಷದ ಎರಡನೇ ಕ್ವಾರ್ಟರ್ ನ ಸುಕನ್ಯಾ ಸಮೃದ್ಧಿ ಯೋಜನೆ (SSY) ಬಡ್ಡಿ ದರವು 7.6% ಆಗಿದೆ. ಇದು ಸರಾಸರಿ ಹಣದುಬ್ಬರ ದರಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಆದ್ದರಿಂದ, ಹೆಣ್ಣು ಮಕ್ಕಳ ಪೋಷಕರಿಗೆ SSY ಖಾತೆಗಳು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಹೂಡಿಕೆದಾರರು ಹೆಣ್ಣು ಮಗುವಿಗೆ ಉತ್ತಮ ಆರ್ಥಿಕ ಭವಿಷ್ಯವನ್ನು ಖಾತ್ರಿಪಡಿಸುವ ಉಳಿತಾಯ ಮಾರ್ಗವಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಯು 21 ವರ್ಷಗಳ ಲಾಕ್
ಇನ್ ಪೀರಿಯಡ್ ಹೊಂದಿದೆ. ಒಬ್ಬ ವ್ಯಕ್ತಿಯು ತಿಂಗಳಿಗೆ
ರೂ 12,500 ಹೂಡಿಕೆ ಮಾಡಿದರೆ, ತಮ್ಮ ಹೆಣ್ಣು
ಮಗುವಿಗೆ ಸರಿಸುಮಾರು ರೂ 64 ಲಕ್ಷವನ್ನು ಕೂಡಿಡಲು ಸಾಧ್ಯವಾಗುತ್ತದೆ. ಇದು SSY ಯೋಜನೆಯಡಿ ಅನುಮತಿಸಲಾದ ಗರಿಷ್ಠ ತೆರಿಗೆ-ಮುಕ್ತ ಹಣವಾಗಿದೆ.