ಮಂಗಳೂರು – ಗಲ್ಫ್ ಪ್ರಯಾಣ ದರ ಗಗನಮುಖಿ | ಕೇರಳವನ್ನೇ ನೆಚ್ಚಿಕೊಂಡ ಗಲ್ಫ್ ರಾಷ್ಟ್ರಗಳ ಪ್ರಯಾಣಿಕರು!!!
ಅನಿವಾಸಿ ಕನ್ನಡಿಗರಿಗೆ ಮಂಗಳೂರು-ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನಯಾನ ದರ ಒಂದೇ ಸಮನೆ ಏರುತ್ತಿದ್ದು ನಿಜಕ್ಕೂ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ನೆರೆಯ ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣ ದರ ಕರ್ನಾಟಕಕ್ಕಿಂತ ಅರ್ಧದಷ್ಟು ಕಡಿಮೆಯಿದ್ದು, ಇದರಿಂದ ಗಲ್ಫ್ ರಾಷ್ಟ್ರಗಳ ಪ್ರಯಾಣಿಕರು ಬಹುತೇಕ ಕೇರಳವನ್ನೇ ನೆಚ್ಚಿಕೊಂಡಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೊಲ್ಲಿ ರಾಷ್ಟ್ರಗಳಿಂದ ಮಂಗಳೂರಿಗೆ ಪ್ರಯಾಣ ಸಾವಿರಾರು ಮಂದಿ ಅನಿವಾಸಿ ಕನ್ನಡಿಗರಿಗೆ ಒಂದು ರೀತಿಯ ವರದಾನವಾಗಿತ್ತು ಎಂದೇ ಹೇಳಬಹುದು. ಆದರೆ ಈ ದರ ಏರಿಕೆ ಆ ಎಲ್ಲಾ ಖುಷಿಗೆ ಭಂಗ ತಂದಿದೆ. ಅನಿವಾಸಿ ಭಾರತೀಯ ಆಕ್ರೋಶಕ್ಕೆ ಕಾರಣವಾಗಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೂಲಕ ಕೇರಳದ ಕಣ್ಣೂರು ಪ್ರಯಾಣಿಕರು ಅಬುಧಾಬಿಯಿಂದ 450 ಧಿರಮ್ (9,700 ರೂ.) ದರದಲ್ಲಿ ಪ್ರಯಾಣಿಸಿದರೆ, ಮಂಗಳೂರಿಗೆ ಎರಡು ಪಟ್ಟು ಹೆಚ್ಚಳ 850 ಧಿರಮ್ (18,350 ರೂ.) ದರ ತೆತ್ತು ಪ್ರಯಾಣಿಸಬೇಕಾಗಿದೆ. ಕೇರಳಕ್ಕೆ ಪ್ರತಿನಿತ್ಯ ವಿಮಾನ ಹಾರಾಟವಿದ್ದರೆ, ಮಂಗಳೂರಿಗೆ ವಾರಕ್ಕೆ ಮೂರು-ನಾಲ್ಕು ದಿನ ಪ್ರಯಾಣ ವ್ಯವಸ್ಥೆ ಇದೆ.
ದಮಾನ್‌ನಿಂದ ಮಂಗಳೂರಿಗೆ ತಡೆರಹಿತ ವಿಮಾನಯಾನ ದರ 50 ಸಾವಿರ ರೂ.ಗೆ ತಲುಪಿದ್ದು, ಇದು ಇತರೆಲ್ಲ ರಾಷ್ಟ್ರಗಳ ಪ್ರಯಾಣಕ್ಕಿಂತಲೂ ದುಬಾರಿ. ಕೊಲ್ಲಿ ರಾಷ್ಟ್ರಗಳಲ್ಲಿ ಮಕ್ಕಳಿಗೆ ಎರಡು ತಿಂಗಳ ರಜೆ ಸಿಕ್ಕ ತಕ್ಷಣ ಊರಿಗೆ ಬರುತ್ತಾರೆ. ಆದರೆ ಈ ಬಾರಿ ಟಿಕೆಟ್ ದರ ಹೆಚ್ಚಳವಿರುವ ಕಾರಣ ಕುಟುಂಬಗಳು ಬರಲಾಗದೆ ಹಲವರು ಪ್ರವಾಸವನ್ನೇ ಮೊಟಕುಗೊಳಿಸಿದ್ದಾರೆ.
ಕೇರಳ-ಕರ್ನಾಟಕ ದರ ವ್ಯತ್ಯಾಸವು ನೇರವಾಗಿ ವಿಮಾನ ನಿರ್ವಹಣರ ಮೇಲೆ ಪರಿಣಾಮ ಬೀಳಲಿದೆ. ಹಣಕಾಸಿನ ಲೆಕ್ಕಾಚಾರದಲ್ಲಿ ಕೊಲ್ಲಿ ರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸುವ ಎನ್‌ಆರ್‌ಐಗಳು ಊರಿಗೆ ಬರುತ್ತಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಕರ್ನಾಟಕ, ಕಾಸರಗೋಡು ಭಾಗದ ಎನ್‌ಆರ್‌ಐಗಳು ನೇರವಾಗಿ ಸಮೀಪದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ. ನಂತರ ಅಲ್ಲಿಂದ ಟ್ಯಾಕ್ಸಿ ಮೂಲಕ ರಾಜ್ಯಕ್ಕೆ ಬರಲು ಪ್ರಾರಂಭಿಸಿದ್ದಾರೆ. ಇದರಿಂದ ಮಂಗಳೂರು ನಿಲ್ದಾಣಕ್ಕೆ ಪ್ರಯಾಣಿಕರ ನಷ್ಟ ಮಾತ್ರವಲ್ಲದೆ, ವಿಮಾನ ನಿರ್ವಹಣೆ ಮೇಲೂ ಪರಿಣಾಮ ಬೀರಲಿದೆ.