ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಯಾತ್ರೆ ಮಾಡಿದ ಕನ್ನಡದ ಕುವರಿ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದ ಏಕತೆಯನ್ನು ಸಾರಲು, ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಯಾತ್ರೆಮಾಡಿ ಕಾಸರಗೋಡು ಜಿಲ್ಲೆಯ ಕುಂಬಳೆಯ ಕುಮಾರಿ ಅಮೃತಾ ಜೋಶಿ ತನ್ನ ತವರೂರಿಗೆ ಮರಳಿದ್ದಾರೆ.
ಈಶಾನ್ಯ ಭಾರತ, ಕಾಶ್ಮೀರ ಸೇರಿದಂತೆ ಸುಮಾರು 22,000 ಕಿಲೋ ಮೀಟರ್ ಸಂಚರಿಸಿ ತನ್ನ ಯಾತ್ರೆಯ ಕೊನೆಯ ಭಾಗವಾಗಿ ಬೆಂಗಳೂರು-ಶಿವಮೊಗ್ಗ ಮೂಲಕ ತಮ್ಮೂರು ಕುಂಬಳೆ ತಲುಪಿದ್ದಾರೆ.
ಗಡಿನಾಡ ಕನ್ನಡತಿ ಸಾಹಸಿ ಯುವತಿಯನ್ನು ಸ್ವಾಗತಿಸಲು, ಕಾಸರಗೋಡು ನಿವಾಸಿಗಳ ಸಂಘಟನೆಯಾದ ವಿಕಾಸ ಟ್ರಸ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿನ್ನೆ ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿರುವ ಡಾ ರಾಜಕುಮಾರ್ ಗಾಜಿನ ಸಭಾಂಗಣದಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಬೆಂಗಳೂರಿನಲ್ಲಿ ನೆಲೆಸಿರುವ ಕಾಸರಗೋಡು ಮೂಲದ ಹಲವಾರು ಗಣ್ಯರು ಮತ್ತು ನೂರಾರು ಜನರು ತ್ರಿವರ್ಣ ಧ್ವಜಗಳೊಂದಿಗೆ ಗಡಿನಾಡ ಕನ್ನಡತಿ ಸಾಹಸಿ ಯುವತಿಯನ್ನು ಸ್ವಾಗತಿಸಿದ್ದು, ಸಭಾ ಕಾರ್ಯಕ್ರಮದಲ್ಲಿ ಅಮೃತ ಜೋಶಿ ಅವರನ್ನು ಸನ್ಮಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನದ ಕುರಿತು ಮಾಹಿತಿ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಹಿರಿಯ ಉದ್ಯಮಿ ಟಿ.ವಿ. ಮೋಹನದಾಸ್ ಪೈ ಅವರು ಭಾಗವಹಿಸಿದ್ದು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದಾರೆ ಎಂದು ಕಾಸರಗೋಡಿನ ವಿಕಾಸ ಟ್ರಸ್ಟ್ ಅಧ್ಯಕ್ಷ ರವಿನಾರಾಯಣ ಗುಣಾಜೆ ತಿಳಿಸಿದ್ದಾರೆ.