ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಮೃತದೇಹಕ್ಕೆ ನೀರು ಕುಡಿಸಲು ಮುಂದಾದ ಕೋತಿ

ಬೆಳಗಾವಿ: ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಮೃತದೇಹಕ್ಕೆ ಮಂಗವೊಂದು ನೀರು ಕುಡಿಸಲು ಯತ್ನಿಸಿದ ಅಪರೂಪದ ಘಟನೆ ನಡೆದಿದೆ. ಆದ್ರೆ, ಈ ಘಟನೆ ಏನೂ ಹೊಸತೇನಲ್ಲ. ಈ ಹಿಂದೆಯೂ ಮಹಿಳೆಯೊಬ್ಬರ ಅಂತ್ಯಕ್ರಿಯೆ ವೇಳೆ ಮಂಗ ಸುಮಾರು ಹೊತ್ತಿನವರೆಗೂ ಕೂತಲ್ಲಿಂದ ಕದಡದೇ ನೋಡುತ್ತಾ ಕೂತಿದ್ದ ದೃಶ್ಯ ವೈರಲ್ ಆಗಿತ್ತು. ಇದೀಗ ಅದೇ ಸಾಲಿಗೆ ಈ ಘಟಣೆಯೂ ಸೇರಿಕೊಂಡಿದೆ.

ಶಹಾಪುರ ಜೋಶಿ ಗಲ್ಲಿಯ ನಿವಾಸಿ ಮಾರುತಿ ಕಡಗಾಂವಕರ(65) ಎಂಬುವರು ಮೃತಪಟ್ಟಿದ್ದರು.ಇವರ ಅಂತ್ಯಕ್ರಿಯೆಯಲ್ಲಿ ಮಂಗವೊಂದು ಭಾಗಿಯಾದ ಅಪರೂಪದ ಘಟನೆ ಶನಿವಾರ ಶಹಾಪುರದಲ್ಲಿ ನಡೆದಿದೆ.

ಪಾರ್ಥಿವ ಶರೀರವನ್ನು ಕುಟುಂಬಸ್ಥರು ಮತ್ತು ಸಂಬಂಧಿಕರು ಚಿತಾಗಾರಕ್ಕೆ ತಂದ ವೇಳೆ, ಮರದ ಮೇಲೆ ಕುಳಿತ್ತಿದ್ದ ಮಂಗವೊಂದು ಏಕಾಏಕಿ ಮರದಿಂದ ಕೆಳಗೆ ಇಳಿದಿದೆ. ಬಳಿಕ ಅಂತ್ಯಕ್ರಿಯೆ ವೇಳೆ ಚಿತಾಗಾರದ ಬಲಭಾಗದಲ್ಲಿ ಸುಮಾರು ಹೊತ್ತು ಕುಳಿತತುಕೊಂಡು ನೋಡಿದೆ.

ಅಂತ್ಯಕ್ರಿಯೆಗೆ ಬಂದಿದ್ದ ಜನರು ಆರಂಭದಲ್ಲಿ ಮಂಗವನ್ನು ನಿರ್ಲಕ್ಷಿಸಿದರು. ಆದರೆ, ಸ್ಮಶಾನ ಪ್ರವೇಶಿಸಿದ ಮಂಗ ಚಿತೆಗೆ ತಂದಿದ್ದ ಮರದ ದಿಮ್ಮಿಗಳ ಮೇಲೆ ಕುಳಿತಿತ್ತು. ಅಷ್ಟೇ ಅಲ್ಲ ಮಾರುತಿ ಕಡಗಾಂವಕರ ಅವರ ಮೃತದೇಹವನ್ನು ಮುಟ್ಟುವುದಕ್ಕೂ ಮುಂದಾಗಿತ್ತು. ಮೃತ ಮಾರುತಿಗೆ ನೀರು ಕೊಡಲು ಕೋತಿಯು ಬಯಸಿತ್ತು. ಸ್ಮಶಾನದಲ್ಲಿ ಗಲಾಟೆಯಿಂದಾಗಿ ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

ಒಟ್ಟಾರೆ, ಈ ಮಂಗ ಚಿತೆಯನ್ನು ಸಿದ್ಧಪಡಿಸಿ ಅದರ ಮೇಲೆ ಮೃತದೇಹ ಇಡುವ ಪ್ರಕ್ರಿಯೆಯನ್ನು ದಿಟ್ಟಿಸಿ ನೋಡುತ್ತಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

Leave A Reply