ಉದಯವಾಣಿ ಸಂಸ್ಥಾಪಕ ತೋನ್ಸೆ ಮೋಹನ್ ದಾಸ್ ಪೈ ಇನ್ನಿಲ್ಲ

ಮಣಿಪಾಲದ ಪೈ ಕುಟುಂಬದ ಹಿರಿಯರಾದ ವಿವಿಧ ಸಂಘಸಂಸ್ಥೆಗಳಲ್ಲಿ ತೆರೆಮರೆಯಲ್ಲಿದ್ದು ಮಾರ್ಗದರ್ಶನ ನೀಡಿ ಮುನ್ನಡೆಸುತ್ತಿದ್ದ ತೋನ್ಸೆ ಮೋಹನದಾಸ್ ಪೈ (89) ಅಸೌಖ್ಯದಿಂದ ಭಾನುವಾರ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

 

ಅವರು ಆಸ್ಪತ್ರೆಯಲ್ಲಿ ಇತ್ತೀಚಿಗೆ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಆಧುನಿಕ ಮಣಿಪಾಲದ ಶಿಲ್ಪಿ ಡಾ. ಟಿ.ಎಂ.ಎ.ಪೈಯವರ ಹೆಸರು ಹೊತ್ತ ಡಾ. ಟಿಎಂಎ ಪೈ ಪ್ರತಿಷ್ಠಾನ, ಡಾ.ಟಿಎಂಎ ಪೈಯವರು ಸ್ಥಾಪಿಸಿದ ಮೊದಲ ಕಾಲೇಜು ಶಿಕ್ಷಣ ಸಂಸ್ಥೆ ಎಂಜಿಎಂ ಕಾಲೇಜಿನ ಟ್ರಸ್ಟಿ, ಸಿಂಡಿಕೇಟ್ ಬ್ಯಾಂಕ್‌ನ ಪೂರ್ವ ರೂಪ ಐಸಿಡಿಎಸ್ ಲಿ., ‘ಉದಯವಾಣಿ’ಯನ್ನು ನಡೆಸುತ್ತಿರುವ ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಮೊದಲಾದ ಸಂಸ್ಥೆಗಳ ಅಧ್ಯಕ್ಷರಾಗಿ ಹೀಗೆ ಹಲವು ಸಂಸ್ಥೆಗಳ ಬೆಳವಣಿಗೆಗೆ ಕಾರಣರಾದವರು.

ಮೃತರು ಸಹೋದರಾದ ಟಿ.ಸತೀಶ್ ಯು. ಪೈ, ಡಾ. ಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ, ತಂಗಿಯರಾದ ವಸಂತಿ ಆರ್. ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ ಅವರನ್ನು ಅಗಲಿದ್ದಾರೆ.

ಆಧುನಿಕ ಮಣಿಪಾಲದ ಶಿಲ್ಪಿ ಡಾಟಿ.ಎಂ.ಎ.ಪೈಯವರ ಹೆಸರು ಹೊತ್ತ ಡಾಟಿಎಂಎ ಪೈ ಪ್ರತಿಷ್ಠಾನ, ಡಾ. ಟಿಎಂಎ ಪೈಯವರು ಸ್ಥಾಪಿಸಿದ ಮೊದಲ ಕಾಲೇಜು ಶಿಕ್ಷಣ ಸಂಸ್ಥೆ ಎಂಜಿಎಂ ಕಾಲೇಜಿನ ಟ್ರಸ್ಟ್‌, ಸಿಂಡಿಕೇಟ್ ಬ್ಯಾಂಕ್ ನ ಪೂರ್ವ ರೂಪ ಐಸಿಡಿಎಸ್ ಲಿ., ‘ಉದಯವಾಣಿ’ಯನ್ನು ನಡೆಸುತ್ತಿರುವ ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಮೊದಲಾದ ಸಂಸ್ಥೆಗಳ ಅಧ್ಯಕ್ಷರಾಗಿ ಹೀಗೆ ಹಲವು ಸಂಸ್ಥೆಗಳ ಬೆಳವಣಿಗೆಗೆ ಕಾರಣರಾದವರು.

1933ರ ಜೂ. 20ರಂದು ಜನಿಸಿದ ಮೋಹನದಾಸ್ ಪೈಯವರು ಡಾಟಿಎಂಎ ಪೈಯವರ ಹಿರಿಯ ಪುತ್ರ. ಇವರಿಗೆ ಮೂರು ವರ್ಷ ಆಗಿರುವಾಗ ತಂದೆಯವರು ಉಡುಪಿಯಿಂದ ಮಣಿಪಾಲಕ್ಕೆ ಸ್ಥಳಾಂತರವಾದ ಕಾರಣ ಇವರೂ ಮಣಿಪಾಲದಲ್ಲಿ ಬೆಳೆದರು. ತಂದೆಯವರು ಆರಂಭಿಸಿದ ಹೊಸ ಶಾಲೆಯಲ್ಲಿ (ಮಣಿಪಾಲ ಅಕಾಡೆಮಿ ಶಾಲೆ), ಉಡುಪಿಯ ಮೋಡರ್ನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಬಳಿಕ ತಂದೆಯವರು ನೂತನವಾಗಿ ಆರಂಭಿಸಿದ ಎಂಜಿಎಂ ಕಾಲೇಜಿನಲ್ಲಿ (1949-51) ಇಂಟರ್‌ಮೀಡಿಯೆಟ್ ಶಿಕ್ಷಣ ಪಡೆದರು. ಎಂಜಿಎಂ ಕಾಲೇಜಿನ ಮೊದಲ ತಂಡದ ವಿದ್ಯಾರ್ಥಿ ಇವರು. ಕೊಲ್ಹಾಪುರದಲ್ಲಿ ಕಾನೂನು ಶಿಕ್ಷಣ ಪಡೆದ (1951-53) ಮೋಹನದಾಸ್ ಪೈಯವರು ಪುಣೆ ವಿ.ವಿ.ಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದರು. ಆಗ ಕಾನೂನು ಪದವಿ ಅಧ್ಯಯನ ನಡೆಸಲು ಇಲ್ಲಿ ಅವಕಾಶವಿರಲಿಲ್ಲ. ಕರಾವಳಿ ಪ್ರದೇಶ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ಕಾರಣ ಒಂದೋ ಮದ್ರಾಸ್‌ಗೆ ತೆರಳಬೇಕಿತ್ತು. ಇಲ್ಲವಾದರೆ ಮುಂಬಯಿ ಪ್ರಾಂತ್ಯಕ್ಕೆ ಹೋಗಬೇಕಿತ್ತು. ಕರಾವಳಿಯವರಿಗೆ ಮದ್ರಾಸ್‌ಗಿಂತ ಮುಂಬಯಿ ಪ್ರಾಂತ್ಯ ಹೆಚ್ಚು ಪರಿಚಿತವಾಗಿದ್ದರಿಂದ ಅವರು ಮುಂಬಯಿ ಪ್ರಾಂತ್ಯದ ಕೊಲ್ಹಾಪುರಕ್ಕೆ ಹೋದರು.

ವೃತ್ತಿ ಪ್ರವೇಶ

ಶಿಕ್ಷಣದ ಬಳಿಕ ತಂದೆಯವರು ಆರಂಭಿಸಿದ ಸಂಸ್ಥೆಗಳಲ್ಲಿ ತೊಡಗಿದರು. ಅವರು ಮೊದಲಾಗಿ ಪ್ರವೇಶಿಸಿದ್ದು ಮಣಿಪಾಲದಲ್ಲಿ ಹೆಂಚಿನ ಕಾರ್ಖಾನೆ ನಡೆಸುತ್ತಿದ್ದ ಕೆನರಾ ಲ್ಯಾಂಡ್ ಇನ್‌ವೆಸ್ಟ್‌‌ಮೆಂಟ್ಸ್‌‌ನ ಜನರಲ್ ಮೆನೇಜರ್ ಆಗಿ. ಇದರ ಜತೆ ಮಣಿಪಾಲ್ ಪವರ್ ಪ್ರೆಸ್‌ನ ಆಡಳಿತ ಪಾಲುದಾರರಾಗಿ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿಕೊಂಡರು.

ಆಡಳಿತ ತಜ್ಞ- ಯೋಜನ ತಜ್ಞ
ಪೈಯವರು ಆಡಳಿತ ಮತ್ತು ಹಣಕಾಸು ಯೋಜನೆಯ ಜವಾಬ್ದಾರಿಯನ್ನು ನೋಡಿಕೊಂಡಿದ್ದರೆ ಟಿ.ಸತೀಶ್ ಪೈಯವರು ಉತ್ಪಾದನೆಯ ಜವಾಬ್ದಾರಿಯನ್ನು ನೋಡಿಕೊಂಡಿರುತ್ತಿದ್ದರು. ಹೊಸ ರೀತಿ ಆಟೋಮೆಟಿಕ್ ಟೈಪ್‌ ಸೆಟ್ಟಿಂಗ್ ಮೆಶಿನ್ ಮತ್ತು ಮುದ್ರಣ ಯಂತ್ರವನ್ನು ಗುಣಮಟ್ಟದ ಮುದ್ರಣಕ್ಕಾಗಿ ಹೊರದೇಶದಿಂದ ತರಿಸಲಾಯಿತು. 1961ರಲ್ಲಿ ಪುಸ್ತಕದ ಗುಣಮಟ್ಟದ ಮುದ್ರಣಕ್ಕಾಗಿ ಪ್ರೆಸ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಇದರ ಬಳಿಕ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಮಣಿಪಾಲ್ ಪ್ರೆಸ್‌ಗೆ ಬಂದವು. ಅತ್ಯಾಧುನಿಕ ಆಫ್‌ಸೆಟ್ ಮೆಶಿನ್, ಫೋಟೋ ಕಂಪೋಸಿಂಗ್‌ನೊಂದಿಗೆ ಮುದ್ರಣ ಕ್ಷೇತ್ರದಲ್ಲಿ ದಾಪುಗಾಲು ಇರಿಸಿರುವುದರಲ್ಲಿ ಮೋಹನದಾಸ್ ಪೈಯವರ ಅಪಾರ ಕೊಡುಗೆ ಇದೆ. ಈ ಮೂಲಕ ಮಣಿಪಾಲ ಪ್ರೆಸ್ ದೇಶಮಟ್ಟದ ಮಾನ್ಯತೆಯನ್ನು ಪಡೆಯಿತು. ಮೈಸೂರು, ಕರ್ನಾಟಕ ವಿ.ವಿ.ಗಳ ಮತ್ತು ವಿವಿಧ ಪ್ರಕಾಶನ ಸಂಸ್ಥೆಗಳ ಪಠ್ಯ, ಪುಸ್ತಕಗಳನ್ನು ಮುದ್ರಿಸಿದ ಕೀರ್ತಿಯು ಈಗಲೂ ಮುನ್ನಡೆಯುತ್ತಿದೆ.

ಉದಯವಾಣಿ ಶಕೆ
1970ರಲ್ಲಿ ಪೈಯವರ ಮುಂದಾಳತ್ವದಲ್ಲಿ ‘ಉದಯವಾಣಿ’ ದಿನ ಪತ್ರಿಕೆ ಆರಂಭವಾಗಿ ಅಲ್ಪಾವಧಿಯಲ್ಲಿಯೇ ಜನಪ್ರಿಯಗೊಂಡಿತು. ಮೋಹನದಾಸ್ ಪೈಯವರು ಆಡಳಿತ ನಿರ್ದೇಶಕರಾಗಿ, ಸತೀಶ್ ಪೈಯವರು ಜಂಟಿ ಆಡಳಿತ ನಿರ್ದೇಶಕರಾಗಿರುವ ಮಣಿಪಾಲ್ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರ್ಸ್‌ ಲಿ.ನಿಂದ ಉದಯವಾಣಿ ಆರಂಭಗೊಂಡಿತು. ವೆಬ್ ಆಫ್‌ಸೆಟ್ ಯಂತ್ರದಿಂದ ಮುದ್ರಣ ಕಾರ್ಯ ಆರಂಭಮಾಡಿದ ಅತಿ ಹಿರಿಯ ದಿನ ಪತ್ರಿಕೆಗಳಲ್ಲಿ ಉದಯವಾಣಿಯೂ ಒಂದು. ಪೈಯವರ ಸಮರ್ಥ ನಾಯಕತ್ವದಲ್ಲಿ ‘ಉದಯವಾಣಿ’ಯು ಗುಣಮಟ್ಟದ ಮುದ್ರಣಕ್ಕಾಗಿ ಹಲವು ವರ್ಷ ನಿರಂತರವಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿತು.

ತರಂಗ ಶಕೆ
1983ರಲ್ಲಿ ಆರಂಭಗೊಂಡ ‘ತರಂಗ’ ವಾರಪತ್ರಿಕೆಯೂ ಮೋಹನದಾಸ್ ಪೈಯವರ ಕನಸಿನ ಕೂಸು. ಮುಖಪುಟ ಮತ್ತು ಒಳಪುಟಗಳನ್ನು ಕಲರ್‌ನಲ್ಲಿ ಮುದ್ರಿಸಲು ಬೇಕಾದ ಅಲ್ಟ್ರಾ ಮೋಡರ್ನ್ ವೆಬ್ ಆಫ್‌ಸೆಟ್ ಯಂತ್ರವನ್ನು ಸ್ಥಾಪಿಸಲಾಯಿತು. ತರಂಗಕ್ಕೆ ಅಗತ್ಯವಾದ ಸ್ವಯಂಚಾಲಿತ ಬೈಂಡಿಂಗ್ ಯಂತ್ರವನ್ನೂ ಅಳವಡಿಸಲಾಯಿತು. ಈ ಗುಣಮಟ್ಟಕ್ಕಾಗಿ 2 ಲಕ್ಷ ಪ್ರಸರಣ ಸಂಖ್ಯೆ ದಾಟಿತು.

ವಿದೇಶ ಪ್ರವಾಸಾನುಭವ
ಯುನೈಟೆಡ್ ಕಿಂಗ್‌ಡಮ್, ಯೂರೋಪ್, ಅಮೆರಿಕ, ಜಪಾನ್ ಮೊದಲಾದ ದೇಶಗಳಲ್ಲಿ ಸಂಚರಿಸಿದ ಪೈಯವರು, ದ್ರುಪ (ಜರ್ಮನಿ), ಐಪೆಕ್ಸ್‌ (ಯುಕೆ), ಪ್ರಿಂಟ್ (ಶಿಕಾಗೋ, ಅಮೆರಿಕ) ಮೊದಲಾದ ಮುದ್ರಣ ವಸ್ತುಪ್ರದರ್ಶನಗಳಲ್ಲಿ ಪಾಲ್ಗೊಂಡು ಅಲ್ಲಿನ ಅನುಭವಗಳನ್ನು, ಹೊಸ ಹೊಸ ತಂತ್ರಜ್ಞಾನಗಳನ್ನು ಮಣಿಪಾಲದಲ್ಲಿ ಅಳವಡಿಸಲು ಪ್ರಯತ್ನಿಸಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ವಿದೇಶಗಳ ಪತ್ರಿಕೆಗಳ ವಿನ್ಯಾಸ, ಸುದ್ದಿ ವಿಶ್ಲೇಷಣೆಗಳನ್ನು ಗಮನಿಸಿ ಉದಯವಾಣಿಯಲ್ಲಿ ಜಾರಿಗೆ ತರಲು ಶ್ರಮಿಸಿದರು.

ಮಣಿಪಾಲ ಪ್ರಿಂಟರ್ಸ್‌ ಆ್ಯಂಡ್ ಪಬ್ಲಿಷರ್ಸ್‌ ಲಿ. ಹೆಸರನ್ನು ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಎಂದು ಬದಲಾಯಿಸಲಾಯಿತು. ಇದರ ಅಧೀನದಲ್ಲಿ ಮಣಿಪಾಲ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ, ಮುಂಬಯಿಯಿಂದ ಮುದ್ರಣಗೊಳ್ಳುವ ಉದಯವಾಣಿ, ತರಂಗ ವಾರಪತ್ರಿಕೆ, ರೂಪತಾರ ಚಲನಚಿತ್ರ ಮಾಸ ಪತ್ರಿಕೆ, ತುಷಾರ ಮಾಸಿಕ ಡೈಜೆಸ್ಟ್‌ ಮುದ್ರಣಗೊಂಡು ಓದುಗರನ್ನು ಸೆಳೆಯುತ್ತಿದೆ.

ಗೌರವ
ಕರ್ನಾಟಕ ಪತ್ರಿಕಾ ಅಕಾಡೆಮಿಯು ಪತ್ರಿಕಾ ರಂಗದ ಕ್ಷೇತ್ರಕ್ಕಾಗಿ ಸಲ್ಲಿಸಿದ ಕೊಡುಗೆಗಾಗಿ ಮಣಿಪಾಲ್ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರ್ಸ್‌ ಲಿ.ಗೆ ಕೊಡಮಾಡಿದ ಪ್ರಶಸ್ತಿಯನ್ನು ಮೋಹನದಾಸ್ ಪೈಯವರು ಸ್ವೀಕರಿಸಿದ್ದರು. ಪೈಯವರು ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿಯ (ಐಎನ್‌ಎಸ್) ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿ ಎರಡು ಅವಧಿ ಸೇವೆ ಸಲ್ಲಿಸಿದ್ದರು.

ಐಸಿಡಿಎಸ್‌ನ ಜಂಟಿ ಆಡಳಿತ ನಿರ್ದೇಶಕರಾಗಿ 1989ರಲ್ಲಿ ನೇಮಕಗೊಂಡ ಪೈಯವರು 1995ರಲ್ಲಿ ಆಡಳಿತ ನಿರ್ದೇಶಕರಾದರು. ಬಳಿಕ ಚೆಯರ್‌ಮ್ಯಾನ್ ಮತ್ತು ಆಜೀವ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷರಾಗಿ ಇದೇ ವೇಳೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಪ್ರಾದೇಶಿಕ ಜಾನಪದ ರಂಗಕಲೆಗಳ ಸಂಶೋಧನ ಕೇಂದ್ರ, ಎಂಜಿಎಂ ಯಕ್ಷಗಾನ ಕೇಂದ್ರದ ಅಧ್ಯಕ್ಷರಾಗಿಯೂ ಈ ಸಂಸ್ಥೆೆಗಳ ಅಭಿವೃದ್ಧಿಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ.

ಸಾಂಸ್ಕೃತಿಕ ಪ್ರೀತಿ
ಡಾಟಿಎಂಎ ಪೈಯವರು ಉಪಯೋಗಿಸುತ್ತಿದ್ದ ಪರಿಕರಗಳನ್ನು ಮಣಿಪಾಲದ ‘ಸ್ಮೃತಿ ಭವನ’ದಲ್ಲಿ (ಮ್ಯೂಸಿಯಂ) ಕಾಪಿಡಲು ವಿಶೇಷ ಶ್ರಮ ವಹಿಸಿದ್ದರು. ವಿವಿಧ ರೀತಿಗಳ ಕಲೆಗಳಲ್ಲಿ ಅತ್ಯಾಸಕ್ತರಾಗಿದ್ದ ಮೋಹನದಾಸ್ ಪೈಯವರು ತಮ್ಮ ಆಸಕ್ತಿಯನ್ನು ಮಣಿಪಾಲದ ವಿಜಯನಾಥ ಶೆಣೈಯವರೊಡಗೂಡಿ ಬಹುಮುಖದ ಸಾಂಸ್ಕೃತಿಕ ತಾಣವೆನಿಸಿದ ಹೆರಿಟೇಜ್ ವಿಲೇಜ್ ರೂಪಿಸುವಲ್ಲಿ ಯೋಗದಾನ ಮಾಡಿದ್ದಾರೆ.

ಸಾರ್ವಜನಿಕ ರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಪೈಯವರು ತಂದೆಯ ಮಾದರಿಯಲ್ಲಿ ಸಾಧಕರಾಗಿದ್ದಾರೆ. ಪತ್ರಿಕೋದ್ಯಮದ ಮೂಲಕ ಕರಾವಳಿ ಕರ್ನಾಟಕದ ಅಭಿವೃದ್ಧಿಯಲ್ಲಿ ಇವರಿಗೆ ದೂರದೃಷ್ಟಿ ಇತ್ತು.

ಮುಖ್ಯಮಂತ್ರಿ ಸಂತಾಪ
ಹಿರಿಯ ಉದ್ಯಮಿ, ಉದಯವಾಣಿ ದಿನಪತ್ರಿಕೆಯ ಸಂಸ್ಥಾಪಕ ಟಿ. ಮೋಹನದಾಸ್‌ ಪೈ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ಮೋಹನದಾಸ್‌ ಪೈ ಅವರು ನಿಧನ ಹೊಂದಿದ್ದಾರೆ ಎನ್ನುವ ವಿಷಯ ನನಗೆ ಆಘಾತ ಉಂಟು ಮಾಡಿದೆ. ಹಿರಿಯ ಚೇತನರು, ಎಲ್ಲರ ಮಾರ್ಗದರ್ಶಕರಂತಿದ್ದ ಟಿ. ಮೋಹನದಾಸ್‌ ಪೈ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ ಪೈ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ’ ಎಂದು ಕೋರಿದ್ದಾರೆ.

ಗಣ್ಯರ ಸಂತಾಪ
ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ರಾಜ್ಯದ ಸಚಿವರಾದ ಡಾ| ಅಶ್ವತ್ಥನಾರಾಯಣ, ವಿ. ಸುನಿಲ್‌ ಕುಮಾರ್‌,ಕೋಟ ಶ್ರೀನಿವಾಸ ಪೂಜಾರಿ, ಎಸ್‌. ಅಂಗಾರ, ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಗಣ್ಯರಾದ ಪ್ರಮೋದ್‌ ಮಧ್ವರಾಜ್‌, ವಿನಯ ಕುಮಾರ್‌ ಸೊರಕೆ, ಯು.ಆರ್‌. ಸಭಾಪತಿ, ಕೆ. ಸುರೇಶ ನಾಯಕ್‌, ಅಶೋಕ್‌ ಕುಮಾರ್‌ ಕೊಡವೂರು, ಯೋಗೀಶ ಶೆಟ್ಟಿ, ಗುರ್ಮೆ ಸುರೇಶ ಶೆಟ್ಟಿ, ದೇವಿಪ್ರಸಾದ್‌ ಶೆಟ್ಟಿ ಬೆಳಪು ಮೊದಲಾದವರು ಸಂತಾಪ ಸೂಚಿಸಿದ್ದಾರೆ.

ಸಾರ್ವಜನಿಕರ ಅಂತಿಮ ದರ್ಶನ
ಆ. 1ರ ಬೆಳಗ್ಗೆ 9ರಿಂದ 11 ಗಂಟೆವರೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Source : ಉದಯವಾಣಿ

Leave A Reply

Your email address will not be published.