ಕಾಮನ್ ವೆಲ್ತ್​ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಖಾತೆ ತೆರೆದ ಸಂಕೇತ್​ ಸರ್ಗರ್​

ಈ ಬಾರಿಯ ಕಾಮನ್ ವೆಲ್ತ್​ ಕ್ರೀಡಾಕೂಟದಲ್ಲಿ ಸಂಕೇತ್ ಸರ್ಗರ್ ಅದ್ಭುತ ಪ್ರದರ್ಶನ ನೀಡಿ ವೇಯ್ಟ್ ಲಿಫ್ಟಿಂಗ್​ನಲ್ಲಿ ಬೆಳ್ಳಿ ಗೆದ್ದು ಮೊದಲ ದಿನವೇ ಭಾರತದ ಖಾತೆ ತೆರೆದಿದ್ದಾರೆ.

55 ಕೆಜಿ ವಿಭಾಗದ ವೇಯ್ಟ್​ ಲಿಪ್ಟಿಂಗ್​ ಸ್ಪರ್ಧೆಯಲ್ಲಿ ಸಂಕೇತ್​ ಸರ್ಗರ್​ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಆದರೆ ಒಂದು ಕಿಲೋ ಅಂತರದಿಂದ ಸಂಕೇತ್ ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡರು. ಸರ್ಗರ್ ಒಟ್ಟು 248 ಕೆಜಿ ಎತ್ತಿದರೆ, ಚಿನ್ನ ವಶಪಡಿಸಿಕೊಂಡ ಮಲೇಷ್ಯಾದ ಬಿನ್ ಕಸ್ದನ್ 249 ಕೆಜಿ ಎತ್ತಿದರು. ಭಾರತದ ಆಟಗಾರ ಸ್ನ್ಯಾಚ್‌ನಲ್ಲಿ 113 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 135 ಕೆಜಿ ಎತ್ತಿದರು. ಕ್ಲೀನ್ ಮತ್ತು ಜರ್ಕ್​ನ ಕೊನೆಯ ಎರಡು ಪ್ರಯತ್ನಗಳಲ್ಲಿ ಅವರು ವಿಫಲರಾಗಿದ್ದರು. ಯಾಕೆಂದರೆ, ಇವರಿಗೆ ಇಂಜುರಿಯಾಗಿದ್ದೇ ವಿಫಲವಾಗಲು ಕಾರಣವಾಗಿದೆ.

ಅದೇ ಸಮಯದಲ್ಲಿ, ಕ್ಲೀನ್ ಮತ್ತು ಜರ್ಕ್‌ನಲ್ಲಿ ಮೊದಲ ಪ್ರಯತ್ನದಲ್ಲಿ ಸರ್ಗರ್ 135 ಭಾರ ಎತ್ತಿದರು, ಆದರೆ ಎರಡನೇ ಮತ್ತು ಮೂರನೇ ಪ್ರಯತ್ನದಲ್ಲಿ ಅವರು 139 ಕೆಜಿ ತೂಕ ಎತ್ತುವ ಪ್ರಯತ್ನದಿಂದ ಹಿಂದೆ ಸರಿದರು. ಮಲೇಷ್ಯಾ ಆಟಗಾರ ಕೊನೆಯ ಪ್ರಯತ್ನದಲ್ಲಿ 142 ಕೆಜಿ ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ ಮಲೇಷ್ಯಾದ ಬಿನ್ 107 ಕೆಜಿ ಭಾರ ಎತ್ತಿದರು. ಹೀಗಾಗಿ ಚಿನ್ನದ ಪದಕಕ್ಕೆ ಅವರು ಕೊರಳೊಡ್ಡಿದರು.

ಸರ್ಗರ್ ಅವರು ಖೇಲೋ ಇಂಡಿಯಾ ಯೂತ್ ಗೇಮ್ಸ್ 2020 ಮತ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2020 ರ ಚಾಂಪಿಯನ್ ಆಗಿದ್ದಾರೆ. ಅಷ್ಟೇ ಅಲ್ಲ, ಅವರ ಹೆಸರಿನಲ್ಲಿ ರಾಷ್ಟ್ರೀಯ ದಾಖಲೆಯೂ ಇದೆ. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಖಾತೆ ತೆರೆದಿರುವ ಈ ಆಟಗಾರ 2024ರಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿದ್ದು, ಒಲಿಂಪಿಕ್ಸ್‌ನಲ್ಲಿ 61 ಕೆಜಿ ವಿಭಾಗದಲ್ಲಿ ಪ್ರವೇಶಿಸಲು ಬಯಸಿದ್ದಾರೆ.

Leave A Reply