ಪ್ರಚೋದನಕಾರಿ ಹೇಳಿಕೆಯ ಹಿನ್ನೆಲೆ-ದಕ ಜಿಲ್ಲೆಯ 5 ತಾಲೂಕುಗಳಿಗೆ ಮುತಾಲಿಕ್ ಪ್ರವೇಶ ನಿಷೇಧ!!?

ಪುತ್ತೂರು: ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬಳಿಕ ಜಿಲ್ಲೆಯ ಮೂರು ತಾಲೂಕುಗಳನ್ನು ಒಳಗೊಂಡಂತೆ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು,ಸದ್ಯ ಜಿಲ್ಲೆಯ ಐದು ತಾಲೂಕುಗಳಿಗೆ ಶ್ರೀ ರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈಗಾಗಲೇ ಪ್ರವೀಣ್ ಹತ್ಯೆಯಲ್ಲಿ ಕೋಮು ಸಂಘಟನೆಯ ಸದಸ್ಯರು ಭಾಗಿಯಾಗಿದ್ದು, ಪ್ರವೀಣ್ ಮೃತದೇಹದ ಮೆರವಣಿಗೆ ಸಂದರ್ಭ ಕೆಲವೆಡೆ ಘರ್ಷಣೆಗಳು ಉಂಟಾಗಿತ್ತು. ಅಲ್ಲದೇ ಆರೋಪಿಗಳ ಬಂಧನದ ಬಳಿಕ ತಾಲ್ಲೂಕಿನ ಕೆಲವೆಡೆ ಘರ್ಷಣೆ ಉಂಟಾಗಿದ್ದು, ಇಂತಹ ಸಂದರ್ಭದಲ್ಲಿ ಮುತಾಲಿಕ್ ಜಿಲ್ಲೆಗೆ ಎಂಟ್ರಿ ಕೊಟ್ಟರೆ ಮತ್ತಷ್ಟು ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗುವ ಸಂಭವ ಹೆಚ್ಚಿದೆ ಎನ್ನಲಾಗಿದೆ.

ಮುತಾಲಿಕ್ ಈ ಹಿಂದೆ ಹಲವೆಡೆ ಪ್ರಚೋದನಕಾರಿ ಭಾಷಣಗೈದು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗಿರುವ ಪ್ರಕರಣಗಳು ವರದಿಯಾಗಿತ್ತು.ಮೃತ ಪ್ರವೀಣ್ ಮನೆಗೆ ಮುತಾಲಿಕ್ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿಯೊಂದು ಹರಿದಾಡಿದ ಬೆನ್ನಲ್ಲೇ ಶ್ರೀ ರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ,ಕಡಬ ತಾಲೂಕುಗಳಿಗೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

ಸದ್ಯ ಈ ಆದೇಶ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಮುತಾಲಿಕ್ ಅಭಿಮಾನಿಗಳು, ಶ್ರೀ ರಾಮ ಸೇನಾ ಕಾರ್ಯಕರ್ತರು ಕಿಡಿ ಕಾರಿದ್ದು,ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತ ಮುಂದಿನ ಬಾರಿ ಮುತಾಲಿಕ್ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ಸಂದೇಶಗಳು ಹರಿದಾಡಿವೆ.

Leave A Reply

Your email address will not be published.