ಬೆಳ್ಳಾರೆ ಠಾಣಾ ಮುಂಭಾಗ ಹತ್ಯೆ ಪ್ರಕರಣದ ಆರೋಪಿ ಶಫೀಕ್ ಪತ್ನಿಯ ಅಳಲು!! ನಿರಪರಾಧಿಗೆ ಅಪರಾಧಿ ಪಟ್ಟ ಎನ್ನುವ ಆಕ್ರೋಶ

ಮಂಗಳೂರು: ಯುವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಇಬ್ಬರು ಆರೋಪಿಗಳನ್ನು ಈಗಾಗಲೇ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ನಿವಾಸಿ ಝಾಕೀರ್ ಮೊಹಮ್ಮದ್ ಹಾಗೂ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಶಫೀಕ್ ಎಂದು ತಿಳಿದು ಬಂದಿದೆ.

ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಪ್ರವೀಣ್ ನೆಟ್ಟಾರ್ ಬಗ್ಗೆ ಶಫೀಕ್ ಮಾಹಿತಿ ನೀಡಿ, ಝಾಕೀರ್ ಮತ್ತು ಆತನ ತಂಡ ಹತ್ಯೆ ಮಾಡಿರುವುದಾಗಿ ಹೇಳಲಾಗಿದೆ. ಇವರಿಬ್ಬರೂ ಎಸ್ ಡಿಪಿಐ ಪಕ್ಷದ ಸದಸ್ಯರಾಗಿದ್ದಾರೆ. ಶಫೀಕ್ ವಿದ್ಯಾರ್ಥಿ ಸಂಘಟನೆ ಸಿಎಫ್ ಐ ಮತ್ತು ಎಸ್ ಡಿಪಿಐ ಪಕ್ಷದ ಫಾಲೋವರ್ ಎಂದು ಹೇಳಲಾಗಿತ್ತು.

ಆದರೆ ಇದರ ನಡುವೆ ಇದೀಗ ಶಂಕಿತ ಆರೋಪಿಗಳನ್ನು ಬಂಧಿಸುತ್ತಲೇ ಶಫೀಕ್ ಪತ್ನಿ ಅನ್ಸಿಫಾ ಕಣ್ಣೀರು ಸುರಿಸಿದ್ದಾರೆ. ‘ನನ್ನ ಗಂಡ ನಿರಪರಾಧಿ. ಅವರು ತುಂಬಾ ಒಳ್ಳೆಯವರು. ಸೋಷಿಯಲ್ ವರ್ಕ್ ಮಾಡಿಕೊಂಡು ಇದ್ದವರು. ಇಲ್ಲಿಯವರಿಗೆಲ್ಲಾ ಅವರು ಎಂಥವರು ಎಂದು ಗೊತ್ತು. ಪೊಲೀಸರು ಸುಮ್ಮನೇ ವಿಚಾರಣೆಗೆ ಕರೆದುಕೊಂಡು ಹೋಗಿ ಕೊಲೆ ಪಟ್ಟ ಕಟ್ಟಲಾಗಿದೆ” ಎಂದಿದ್ದಾರೆ.

“ಸೋಮವಾರ ಶಫೀಕ್ ಮನೆಯಲ್ಲೇ ಇದ್ದರು. ನಂತರ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ನಾವೆಲ್ಲಾ ಅಜ್ಜಿಯ ಮನೆಗೆ ಹೋಗಿದ್ದೆವು. ನಾವು ಮನೆಗೆ ವಾಪಸ್ ಆದಾಗ ಪತಿ ಶಫೀಕ್ ಮನೆಗೆ ಬಂದಿದ್ದರು. ಆಗ ಕೊಲೆಯಾಗಿರುವ ವಿಷಯ ತಿಳಿಯಿತು. ಅವರಿಗೂ ಶಾಕ್ ಆಯಿತು, ಕಣ್ಣೀರು ಕೂಡ ಹಾಕಿದ್ದಾರೆ. ಇಂಥವರು ಅವರ ಕೊಲೆ ಯಾಕೆ ಮಾಡುತ್ತಾರೆ ಹೇಳಿ” ಎಂದು ಅನ್ಸಿಫಾ ಪ್ರಶ್ನಿಸಿದ್ದಾರೆ.

ಯಾರೂ ಸಿಗಲಿಲ್ಲ ಎಂದು ನನ್ನ ಗಂಡನನ್ನು ಹಿಡಿದುಕೊಂಡು ಹೋಗಲಾಗಿದೆ. ವಿಚಾರಣೆ ಮಾಡುತ್ತೇವೆ ಎಂದು ಹೇಳಿ ಈಗ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ನಿಜವಾದ ಕೊಲೆಗಾರರನ್ನು ಹಿಡಿದು, ಇವರನ್ನು ಬಿಡಬೇಕು ಎಂದು ಪತ್ನಿ ಆಗ್ರಹಿಸಿದ್ದಾರೆ.

ಪ್ರವೀಣ್ ಜತೆ ತುಂಬಾ ಸ್ನೇಹ ಅಂತೇನೂ ಇರಲಿಲ್ಲ. ಆದರೆ ಚೆನ್ನಾಗಿ ಪರಿಚಯವಿತ್ತು. ಕೊಲೆಯಾಗುವ ದಿನ ಅಂದರೆ ಸೋಮವಾರ ಬೆಳಗ್ಗೆ ಪ್ರವೀಣ್ ಅವರನ್ನು ಶಫೀಕ್ ಮಾತನಾಡಿಸಿದ್ದರು. ಅವರಿಗೂ ಕೊಲೆಗೂ ಸಂಬಂಧವಿಲ್ಲ. ವಿನಾಕಾರಣ ಇದರಲ್ಲಿ ಅವರನ್ನು ಸಿಕ್ಕಿಸಲಾಗಿದೆ ಎಂದು ಪತ್ನಿ ಆರೋಪಿಸಿದ್ದಾರೆ.

Leave A Reply