ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬೆಳ್ತಂಗಡಿ ಬಿಜೆಪಿ ಯುವಮೋರ್ಚಾದ ನಾಲ್ಕು ನಾಯಕರು ರಾಜೀನಾಮೆ

ಬೆಳ್ತಂಗಡಿ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಕುಟುಂಬಸ್ಥರ ಆಕ್ರಂದನದ ನಡುವೆಯೇ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬುಧವಾರ ಸಂಜೆ ಸ್ವಗ್ರಾಮದಲ್ಲಿ ಪಂಚಭೂತಗಳಲ್ಲಿ ಲೀನವಾದರು.

ಪ್ರವೀಣ್ ನೆಟ್ಟಾರು ಸಾವಿಗೆ ನ್ಯಾಯ ಬೇಕು ಎಂದು ಸಾವಿರಾರು ಜನರು ಆಕ್ರೋಶ ಹೊರಹಾಕಿದ್ದಾರೆ. ಅಂತಿಮ ದರ್ಶನ ಪಡೆಯಲು ಆಗಮಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್‌ರನ್ನು ಮುತ್ತಿಗೆ ಹಾಕಿ, ಸಚಿವರಾದ ಸುನೀಲ್ ಕುಮಾರ್, ಅಂಗಾರ ಅವರ ಕಾರನ್ನೂ ಅಡ್ಡಗಟ್ಟಿ ಹಿಂದೂ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಬಿಜೆಪಿ ಯುವ ಮುಖಂಡನ ಹತ್ಯೆ ಖಂಡಿಸಿ ಹಾಗೂ ಅವರ ಸಾವಿಗೆ ನ್ಯಾಯ ಕೊಡಬೇಕೆಂದು ಆಗ್ರಹಿಸಿ ಹಲವೆಡೆ ಬಿಜೆಪಿ ಪಕ್ಷದ ಪದಾಧಿಕಾರಿಗಳು ರಾಜೀನಾಮೆ ಘೋಷಿಸಿದ್ದಾರೆ. ಆ ಮೂಲಕ ದುಷ್ಕರ್ಮಿಗಳ ಮಟ್ಟ ಹಾಕಲು ಸರ್ಕಾರವನ್ನ ಆಗ್ರಹಿಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೂ ಹಿಂದುಗಳ ಹತ್ಯೆ ನಡೆಯುತ್ತಿದೆ ಅಂದರೆ ಏನರ್ಥ ಎಂದು ಪ್ರಶ್ನಿಸುತ್ತಿದ್ದಾರೆ.

ಇದೀಗ ಬೆಳ್ಳಾರೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿರುವುದನ್ನು ವಿರೋಧಿಸಿ, ದಕ್ಷಿಣ ಕನ್ನಡ ಯುವ ಮೋರ್ಚಾ ಕಾರ್ಯದರ್ಶಿ ಸಹಿತ ಬೆಳ್ತಂಗಡಿಯ ಮೂವರು ರಾಜೀನಾಮೆ ನೀಡಿದ್ದಾರೆ. ಬೆಳ್ತಂಗಡಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಕೊಕ್ಕಡ ಮಹಾಶಕ್ತಿ ಕೇಂದ್ರದ ಯುವ ಮೋರ್ಚಾ ಸಂಚಾಲಕ ಗಣೇಶ್ ಕುಂದಾರ್, ದ.ಕ ಯುವಮೋರ್ಚಾ ಕಾರ್ಯದರ್ಶಿ ಸುಧಾಕರ್ ಗೌಡ ಧರ್ಮಸ್ಥಳ ಹಾಗೂ ಬಿಜೆಪಿ ಯುವಮೋರ್ಚಾ ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ನವೀನ್ ಸುವರ್ಣ ಕನ್ಯಾಡಿ ರಾಜೀನಾಮೆ ನೀಡಿದ್ದಾರೆ.

ಇವರು ರಾಜೀನಾಮೆಯ ಬಗ್ಗೆ ತಮ್ಮ ಫೇಸ್ ಬುಕ್ ಹಾಗೂ ವಾಟ್ಸಾಪ್ ಸ್ಟೇಟಸ್ ನಲ್ಲಿ ಅಧಿಕೃತ ಮಾಹಿತಿಯನ್ನು ಹಾಕಿದ್ದಾರೆ. ಇದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಬಿಜೆಪಿ ಪಕ್ಷದಲ್ಲಿ ಜವಾಬ್ದಾರಿ ಹೊಂದಿರುವ ಅನೇಕ ಕಾರ್ಯಕರ್ತರು ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಬೆಳ್ತಂಗಡಿ ಬಿಜೆಪಿ ಪಾಲಾಯದಲ್ಲಿ ತಳಮಳ ಉಂಟಾಗಿದೆ.

Leave A Reply

Your email address will not be published.